ಅಮಾನತು ಮಾಡಿದವರಿಗೆ ತಲೆ ಕೆಟ್ಟಿದೆ

0


ಗೆಲ್ಲಿಸುವ ಯೋಗ್ಯತೆ ಇಲ್ಲದವರು ಇನ್ನೊಬ್ಬರ ಬಗ್ಗೆ ಆರೋಪ ಮಾಡುತ್ತಾರೆ


ಶಿಸ್ತು ಕ್ರಮ, ಅಮಾನತು ಪ್ರಕ್ರಿಯೆಗೆ ನಂದಕುಮಾರ್ ಪ್ರತಿಕ್ರಿಯೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ತನ್ನ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿರುವ ಮತ್ತು ಐವರನ್ನು ಅಮಾನತು ಮಾಡಿರುವ ಪ್ರಕ್ರಿಯೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಸಂಯೋಜಕ ನಂದಕುಮಾರ್ ಅವರು ಅಮಾನತು ಮಾಡಿರುವವರಿಗೆ ತಲೆ ಕೆಟ್ಟಿದೆ ಎಂದಷ್ಟೇ ಹೇಳಬಹುದು ಎಂದು ಹೇಳಿದ್ದಾರೆ.


ಸುದ್ದಿಯೊಂದಿಗೆ ಮಾತನಾಡಿದ ಅವರು, ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಯೋಗ್ಯತೆ ಇಲ್ಲದವರು ಇನ್ನೊಬ್ಬರ ಬಗ್ಗೆ ಆರೋಪ ಮಾಡುವುದು ಅತ್ಯಂತ ಹಾಸ್ಯಾಸ್ಪದ ಎಂದು ಹೇಳಿದ್ದಾರೆ.


ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದು ಅನೇಕ ನಾಯಕರಿಗೆ ಬೇಕಾಗಿಲ್ಲ. ಅದಕ್ಕಾಗಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿತ್ತು. ಎಲ್ಲ ಸಮೀಕ್ಷೆಗಳು, ಜನಾಭಿಪ್ರಾಯ ನನ್ನ ಪರವಾಗಿತ್ತು. ನಾನು ಅಭ್ಯರ್ಥಿಯಾಗಿದ್ದಲ್ಲಿ ಗೆಲುವು ಕೂಡಾ ಸಾಧ್ಯವಾಗುತ್ತಿತ್ತು. ಅಥವಾ ಉಳಿದ ಯಾರು ಅಭ್ಯರ್ಥಿಯಾಗಿದ್ದರೂ ಸೋಲಿನಲ್ಲಿ ಕನಿಷ್ಠ ಐದಾರು ಸಾವಿರವಷ್ಟೇ ಅಂತರವಿರುತ್ತಿತ್ತು. ಆದರೆ ಈ ನಾಯಕರಿಗೆ ಇದೆಲ್ಲಾ ಗೊತ್ತಾಗದಿದ್ದುದು ಯಾಕೆ? ಅಂದರೆ ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದು ಅವರಿಗೆ ಬೇಕಿಲ್ಲ. ತಮ್ಮ ತಪ್ಪನ್ನು ಇತರರ ಮೇಲೆ ಹೊರಿಸಲು ಈಗ ಈ ಕ್ರಮಕ್ಕೆ ಮುಂದಾಗಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸ್ವತಃ ಅವರ ಬೂತ್‌ನಲ್ಲೇ ಲೀಡ್ ದೊರಕಿಸಲು ಸಾಧ್ಯವಾಗಿಲ್ಲ. ಚುನಾವಣೆಯ ಪೂರ್ವಭಾವಿಯಾಗಿ ಎಲ್ಲಾ ಬೂತ್ ಸಮಿತಿಗಳನ್ನು ಕೂಡಾ ರಚಿಸಿರಲಿಲ್ಲ. ನಾನು ಜಿಲ್ಲಾಧ್ಯಕ್ಷರಿಗೆ ಹೇಳಿದ ಮೇಲಷ್ಟೇ ಬಹುತೇಕ ಕಡೆ ಬೂತ್ ಸಮಿತಿ ರಚಿಸಲಾಗಿತ್ತು ಎಂದು ನಂದಕುಮಾರ್ ಹೇಳಿದರು.