ಕೇವಲ ಅಧಿಕಾರಕ್ಕಾಗಿ ವಲಸೆ ಬಂದವರಿಗೆ ತಲೆ ಕೆಟ್ಟಿದೆಯೇ ಹೊರತು ನಮಗಲ್ಲ

0

ನಂದಕುಮಾರ್ ಪ್ರತಿಕ್ರಿಯೆಗೆ ಪಿ.ಸಿ. ಜಯರಾಮ್ ಕಟು ಪ್ರತಿಕ್ರಿಯೆ

ಪಕ್ಷದ ಸಂಘಟನೆಗಾಗಿ ಕೆಪಿಸಿಸಿಯಿಂದ ಜವಾಬ್ದಾರಿ ಕೇಳಿ ಬಂದು, ವೈಯಕ್ತಿಕ ಸಂಘಟನೆ ಮಾಡಿ, ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಯತ್ನಿಸುವುದಾಗಿ ವೇದಿಕೆಗಳಲ್ಲಿ ಮಾತನಾಡಿ, ಪಕ್ಷದ ಹೈಕಮಾಂಡ್ ಟಿಕೆಟ್ ನೀಡಿದ ವ್ಯಕ್ತಿ ಸ್ಪರ್ಧಿಸಿದಾಗ, ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧವಾಗಿ ತನ್ನ ಹಣ ಬಲದಿಂದ ಅಭಿಮಾನಿ ಗುಂಪು ರಚಿಸಿ ಆ ಮೂಲಕ ಅಭ್ಯರ್ಥಿ ಮತ್ತು ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ಸ್ಥಳೀಯ ನಾಯಕರ ವಿರುದ್ಧ ಅವಹೇಳನ ಮಾಡಿದವರು ಯಾರು ಎಂಬುದನ್ನು ಮೊದಲು ತಿಳಿದುಕೊಳ್ಳಲಿ.

ಪಕ್ಷದ ಸಂಘಟನೆ ಮಾಡಲು ಬಂದು ಪಕ್ಷದ ಅಭ್ಯರ್ಥಿಯನ್ನು ಸೋಲಿಸಬೇಕೆಂದು ವಾಯ್ಸ್ ಮೆಸೇಜ್ ಮಾಡಿದ ನಿಮಗೆ ಪಕ್ಷದ ಮೇಲೆ ಇರುವ ಬದ್ಧತೆ ಏನು ಎಂದು ತಿಳಿಯುತ್ತದೆ.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾದ ನಾನು ನಿಮ್ಮಂತೆ ಯಾವುದೇ ಲಾಬಿ ಮಾಡಿ ಈ ಹುದ್ದೆಗೆ ಬಂದಿಲ್ಲ. ಸುದೀರ್ಘ 35 ವರ್ಷಗಳ ರಾಜಕೀಯ, ಸಾಮಾಜಿಕ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿದ ತೃಪ್ತಿ ಇದೆ. ಕೇವಲ ಅಧಿಕಾರಕ್ಕಾಗಿ ವಲಸೆ ಬಂದವರಿಗೆ ತಲೆ ಕೆಟ್ಟಿದೆಯೇ ಹೊರತು ನಮಗಲ್ಲ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಅವರು ನಂದಕುಮಾರ್ ರವರ ಟೀಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.


ಸುಳ್ಯದ ಕಾಂಗ್ರೆಸ್ ನವರ ಯೋಗ್ಯತೆ ಬಗ್ಗೆ ಮಾತನಾಡುವ ಮುನ್ನ ತನ್ನ ಯೋಗ್ಯತೆ ಬಗ್ಗೆ ಅರಿತಿರಬೇಕು. ಮಡಿಕೇರಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ನಿಮ್ಮಿಂದ ಸುಳ್ಯದ ಕಾಂಗ್ರೆಸ್ಸಿಗರು ಯೋಗ್ಯತೆಯ ಪಾಠ ಹೇಳಿಸಿಕೊಳ್ಳಬೇಕಾಗಿಲ್ಲ ಎಂದು ಪಿ.ಸಿ. ಜಯರಾಮ್ ಹೇಳಿಕೆ ನೀಡಿದ್ದಾರೆ.