‘ಪಿಯು ಕ್ಲಾಸ್ಮೇಟ್ಸ್” ವಾಟ್ಸ್ಯಾಪ್ ಗ್ರೂಪ್ ವತಿಯಿಂದ ಅನಾರೋಗ್ಯ ಪೀಡಿತ ವ್ಯಕ್ತಿಗೆ ಹಣಕಾಸಿನ ನೆರವು

0

ವ್ಯಕ್ತಿಯೋರ್ವರು ಮಾರಣಾಂತಿಕ ರೋಗದಿಂದ ಬಳಲುತ್ತಿದ್ದು ಶಸ್ತ್ರ ಚಿಕಿತ್ಸೆಗಾಗಿ ದಾನಿಗಳು ಸಹಕರಿಸಬೇಕೆಂಬ ಸಾಮಾಜಿಕ ಜಾಲತಾಣದ ವೀಡಿಯೋ ಗಮನಿಸಿದ ಸುಳ್ಯ ಜೂನಿಯರ್ ಕಾಲೇಜಿನ 1993-95 ರ ಪಿಯು ಬ್ಯಾಚ್ ನ ಹಳೆ ವಿದ್ಯಾರ್ಥಿಗಳು ರೋಗಿಯ ಕುಟುಂಬಕ್ಕೆ ಧನ ಸಹಾಯ ಮಾಡಿ ಸಹಕಾರ ನೀಡಿದ್ದಾರೆ.

ನಗರದ ಪೈಚಾರು ನಿವಾಸಿ ಪ್ರಮೋದ್ ಎಂಬ ಮೂವತ್ತೆರಡರ ಹರೆಯದ ಆಟೋ ಚಾಲಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಬೃಹತ್ ಮೊತ್ತದ ಹಣದ ಅವಶ್ಯಕತೆ ಇತ್ತು. ಈ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆರ್ಥಿಕ ನೆರವು ನೀಡಿ ಸಹಕರಿಸಬೇಕೆಂಬ ವೀಡಿಯೋ ತುಣುಕು ವೈರಲ್ ಆಗಿತ್ತು. ಮೂರರ ಹರೆಯದ ಹೆಣ್ಣು ಮಗು ಹಾಗೂ ಇದೀಗ ಗರ್ಭಿಣಿಯೂ ಆಗಿರುವ ಪ್ರಮೋದ್ ಮಡದಿಯ ಕಷ್ಟದ ಜೀವನ, ಚಿಕಿತ್ಸೆಗಾಗಿ ಹಣದ ಅವಶ್ಯಕತೆಯ ಬಗ್ಗೆ ವೀಡಿಯೋ ಬೆಳಕು ಚೆಲ್ಲಿತ್ತು.

ಸುಳ್ಯ ಜೂನಿಯರ್ ಕಾಲೇಜಿ‌ನ 1993-95 ರ ಬ್ಯಾಚಿನ ಪದವಿ ಪೂರ್ವ ವಿದ್ಯಾರ್ಥಿಗಳ ಗುಂಪೊಂದು ಕೇವಲ ಹಳೆಯ ನೆನಪುಗಳನ್ನು ಮೆಲುಕು ಹಾಕಲೆಂದು ‘ಪಿಯು ಕ್ಲಾಸ್ಮೇಟ್ಸ್’ ಹೆಸರಿನ ವಾಟ್ಸ್ಯಾಪ್ ಗ್ರೂಪ್ ರಚಿಸಿಕೊಂಡಿತ್ತು. ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಹಣಕಾಸಿನ ನೆರವು ನೀಡಬೇಕೆನ್ನುವ ವೀಡಿಯೋವನ್ನು ಸದಸ್ಯ ಗುರುಪ್ರಸಾದ್ ರೈ ಅವರು ಗ್ರೂಪಿಗೆ ಹಾಕಿದ್ದರು. ಇದೇ ಗ್ರೂಪಿನ ಮಹಿಳಾ ಸದಸ್ಯೆ ಸಾವಿತ್ರಿ, ಇತರ ಸದಸ್ಯರಿಗೆ ವೈಯಕ್ತಿಕವಾಗಿಯೂ ಫೋನಾಯಿಸಿ ಅಶಕ್ತ ಕುಟುಂಬಕ್ಕೆ ಸಹಕರಿಸುವಂತೆ ಕೋರಿದರು. ಪರಿಣಾಮವಾಗಿ ಒಟ್ಟು ರೂ. 17,000 ಸಂಗ್ರಹಿಸಿ ಪ್ರಮೋದ್ ಕುಟುಂಬಕ್ಕೆ ನೀಡಿದರು.