ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ: ಸುಳ್ಯದಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ

0

ನುಡಿದಂತೆ ನಡೆಯುವ ನಮ್ಮ ಸರಕಾರ: ನಾಯಕರ ಅಭಿಮತ

ಕರ್ನಾಟಕ ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಇಂದು ರಾಜ್ಯಾದ್ಯಂತ ಚಾಲನೆ ನೀಡಲಾಗಿದ್ದು ಇದರ ಅಂಗವಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ ನಡೆಯಿತು.

ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದ ಮುಂಭಾಗದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರುಗಳು ಭಾಗವಹಿಸಿ ಸರ್ಕಾರದ ಪರವಾಗಿ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ .ಜಯರಾಮ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಚುನಾವಣೆಯಲ್ಲಿ ನೀಡಿದಂತಹ ಐದು ಮಹತ್ವ ಯೋಜನೆಗಳ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ನುಡಿದಂತೆ ನಡೆವ ಸರ್ಕಾರ ಎಂಬ ಗೌರವಕ್ಕೆ ಪಾತ್ರವಾಗಿದೆ. ಇಂದು ಚಾಲನೆಗೊಂಡಂತಹ ಈ ಯೋಜನೆ ಮಹಿಳೆಯರ ಸದುಪಯೋಗಿ ಕಾರ್ಯಕ್ರಮವಾಗಿದ್ದು ಎಲ್ಲಾ ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಮಾತನಾಡಿ ಬಿಜೆಪಿ ಪಕ್ಷದವರು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಇದಕ್ಕೆ ಉತ್ತರವಾಗಿ ಕಾಂಗ್ರೆಸ್ ಪಕ್ಷವು ಚುನಾವಣೆಯ ಸಂದರ್ಭದಲ್ಲಿ ನೀಡಿದಂತಹ ಭರವಸೆಯನ್ನು ಈಡೇರಿಸುವ ಮೂಲಕ ತಕ್ಕ ಉತ್ತರವನ್ನು ನೀಡಿದೆ. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಬಿಜೆಪಿಯವರು ಕೇಳುತ್ತಿದ್ದಾರೆ . ಆದರೆ ಕಳೆದ ಒಂಬತ್ತು ವರ್ಷಗಳಿಂದ ಕೇಂದ್ರ ಸರ್ಕಾರದ ಬಿಜೆಪಿ ಆಡಳಿತವು ನೀಡಿದ ಭರವಸೆಗಳನ್ನು ಏಕಾಗಿ ಅವರು ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು.

ಕೆಪಿಸಿಸಿ ವಕ್ತಾರ ಟಿ.ಎಂ. ಶಹೀದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಚುನಾವಣಾ ಪ್ರಚಾರ ಸಮಿತಿ ಸಂಚಾಲಕರಾಗಿದ್ದ ಸದಾನಂದ ಮಾವಾಜಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ಮೊದಲಾದವರು ಮಾತನಾಡಿದರು.

ನಗರ ಪಂಚಾಯತ್ ಸದಸ್ಯರುಗಳಾದ ಶರೀಫ್ ಕಂಠಿ, ಡೇವಿಡ್ ಧೀರಾ ಕ್ರಾಸ್ತ, ಕಿಸಾನ್ ಘಟಕದ ಅಧ್ಯಕ್ಷ ಸುರೇಶ್ ಅಮೈ, ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಯುವ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್, ಮಾಜಿ ಜಿ.ಪಂ.ಸದಸ್ಯೆ ರಾಜೀವಿ ರೈ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೆ. ಗೋಕುಲ್ ದಾಸ್, ಎನ್.ಎಸ್.ಯು.ಐ . ಅಧ್ಯಕ್ಷ ಕೀರ್ತನ್ ಕೊಡಪಾಲ, ಪ್ರವೀಣ ರೈ ಮರುವಂಜ, ಜಿ.ಕೆ.ಹಮೀದ್, ಲೀಲಾ ಮನಮೋಹನ್, ಹಾಜಿರಾ ಗಫೂರ್, ಪವಿತ್ರ ಕುದ್ವ, ಜೂಲಿಯಾನ ಕ್ರಾಸ್ತಾ, ಶ್ರೀಲತಾ ಬೂಡು, ಭವಾನಿಶಂಕರ ಕಲ್ಮಡ್ಕ, ರಪೀಕ್ ಪಡು, ರಾಜು ಪಂಡಿತ್, ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ, ಫವಾಝ್ ಕನಕಮಜಲು, ಹಸೈನಾರ್ ದುಗ್ಗಲಡ್ಕ, ಭೋಜಪ್ಪ ನಾಯ್ಕ್, ಎಂ.ಪಿ.ಶಿವರಾಮ,
ಸೇರಿದಂತೆ ನೂರಾರು ಮುಖಂಡರುಗಳು, ಮಹಿಳಾ ಘಟಕದ ಸದಸ್ಯರು, ಪಕ್ಷದ ಕಾರ್ಯಕರ್ತರುಗಳು ಭಾಗವಹಿಸಿದ್ದರು. ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಂಜಿ ಸ್ವಾಗತಿಸಿ, ಬ್ಲಾಕ್ ಕಾಂಗ್ರೆಸ್ ವಕ್ತಾರ ನಂದರಾಜ್ ಸಂಕೇಶ್ ಕಾರ್ಯಕ್ರಮ ನಿರೂಪಿಸಿದರು. ಪಿ.ಎಸ್.ಗಂಗಾಧರ್ ಕಾರ್ಯಕ್ರಮ ವಂದಿಸಿದರು.

ನಾಯಕರ ವಾಗ್ವಾದ :

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ ಮಹಿಳಾ ಶಕ್ತಿ ಯೋಜನೆಯ ಕಾರ್ಯಕ್ರಮದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ ಹಾಗೂ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಾಹುಲ್ ಹಮೀದ್ ಕುತ್ತಮೊಟ್ಟೆ ಇವರ ನಡುವೆ ಕಾರ್ಯಕ್ರಮ ಆರಂಭಿಸುವ ಸಮಯದ ಕುರಿತು ಪರಸ್ಪರ ವಾಗ್ವಾದ ನಡೆಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್ ಇಬ್ಬರನ್ನು ಸಮಾಧಾನಪಡಿಸಿದರು.