ನನ್ನ ವೃತ್ತಿ… ನನ್ನ ಹೆಮ್ಮೆ … :ಅದೆಷ್ಟೋ ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿದೀಪವಾದ ಹೆಮ್ಮೆ ಇದೆ

0

ರಾಜೇಶ್ವರಿ ಶುಭಕರ

ಬಡತನವನ್ನು ಅನುಭವಿಸಿ ನೋವುಂಡ ನಾನು ಸ್ವಂತ ಶ್ರಮದಿಂದ ಟೈಲರ್ ವೃತ್ತಿಯಲ್ಲಿ ಸಾಧನೆ ಗೈದು ತನ್ನ ಬಾಳನ್ನು ಸಾಗಿಸುವ ಜೊತೆಯಲ್ಲಿ ಹಲವಾರು ಯುವತಿಯರಿಗೆ ನನ್ನ ವೃತ್ತಿಯನ್ನು ಕಲಿಸಿ ಬದುಕು ಕಟ್ಟಲು ನೆರವಾದ ತೃಪ್ತಿ ಇದೆ. ಅವರಿಗೆ ನೆಚ್ಚಿನ ಶಿಕ್ಷಕಿಯಾಗಿ ಅವರ ಟೈಲರ್ ರಾಜೇಶ್ವರಿ ಟೀಚರ್ ಆಗಿದ್ದೇನೆ.
ಅಪ್ಪ ಅಮ್ಮನ ನೀತಿ ಪಾಠವನ್ನು ಜೀವನದಲ್ಲಿ ಅಳವಡಿಸಿ, ಬಡತನ ವನ್ನು ಮೆಟ್ಟಿ ನಿಂತು ಯಶಸ್ಸು ಗಳಿಸಿದ ನಾನು ಸುಳ್ಯದಲ್ಲಿ ಜೀವನ ಸಾಗಿಸುತ್ತಿದ್ದೇನೆ.
ಕಾಸರಗೋಡು ತಾಲೂಕು, ಬೇಳ ಗ್ರಾಮದ ಮಂಡೋಡು ಟೆಂಕ್ಲೆಘರ್ ಮನೆತನದ ದಿವಂಗತ ಕೃಷ್ಣನಾಯ್ಕ ಶ್ರೀಮತಿ ದೇವಕಿ ದಂಪತಿಗಳ ಪುತ್ರಿಯಾದ ನಾನು ಯಾವುದೇ ಕೆಲಸವನ್ನು ಲಘುವಾಗಿ ತೆಗೆದುಕೊಳ್ಳದೆ ಬಹಳ ಆಸಕ್ತಿವಹಿಸಿ ಹಠ ಬಿಡದೆ ಸಾಧನೆ ಮಾಡಿಯೇ ಮಾಡುತ್ತೇನೆ.
ಮನುಷ್ಯ ಜೀವನದಲ್ಲಿ ದುಡ್ಡು ಶ್ರೀಮಂತಿಕೆ, ಐಷಾರಾಮಿ ಜೀವನ ಮುಖ್ಯ ಅಲ್ಲ. ಜನ ಮೆಚ್ಚುವ ಕಾಯಕ ಮಾಡಿ, ಸಮಾಜದಲ್ಲಿ ಉತ್ತಮ ಹೆಸರು ಗಳಿಸಬೇಕು,ಸತ್ಯ ನಿಷ್ಠೆಯ ದಾರಿಯಲ್ಲಿ ಮುನ್ನಡೆಯಬೇಕು, ಸಾಧ್ಯವಾದಷ್ಟು ಸಹಾಯ ಮಾಡಬೇಕು, ಇನ್ನೊಬ್ಬರ ಹಂಗಲ್ಲಿ ಬದುಕಬಾರದು, ಎಂಬ ಧ್ಯೆಯ ವಾಕ್ಯವನ್ನು ಪಾಲಿಸುತ್ತ ಅದೆಷ್ಟೋ ಮಹಿಳೆಯರಿಗೆ ಅವರ ಸ್ವಂತ ಕಾಲಿನಲ್ಲಿ ನಿಂತು ಜೀವನ ಸಾಗಿಸಲು,ಅವರ ಬದುಕಿಗೆ ದಾರಿ ದೀಪವಾಗಿ ನಿಂತಿರುವುದು ನನಗೆ ಸಂತೋಷ ಇದೆ.
೧೯೯೯ ರಲ್ಲಿ ಶುಭಕರ್ ಎಂಬುವವರನ್ನು ವಿವಾಹ ಆಗಿ ಮನೆಯಲ್ಲಿ ಒಂದೇ ಹೊಲಿಗೆ ಯಂತ್ರದಲ್ಲಿ ತನ್ನ ವೃತ್ತಿ ಯನ್ನು ಪ್ರಾರಂಭಿಸಿದಲ್ಲದೆ , ತನ್ನಂತೆ ಕಷ್ಟ ಪಡುವವರಿಗೆ ತರಬೇತಿ ಕೊಡಲು ಪ್ರಾರಂಭಿಸಿದ ನಾನು ಮಾನಸ ಮಹಿಳಾ ಮಂಡಲ ಜಟ್ಟಿಪಳ್ಳದಲ್ಲಿ ಉಚಿತ ತರಬೇತಿ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡೆ . ಎಲ್ಲರ ಬೆಂಬಲದೊಂದಿಗೆ ನನ್ನ ಸ್ವಂತ ವೃತ್ತಿ ಯನ್ನು ಪ್ರಾರಂಭಿಸಲು ನಿರ್ಧರಿಸಿ, ಅದಕ್ಕಾಗಿ ಎಸ್ ಟಿ ಡಿ ಬೂತ್ ಹಾಗೂ ಒಂದು ಟೈಲರ್ ಮಿಷನ್ ನೊಂದಿಗೆ ಆರಂಭಿಸಿ ನಂತರ ೪೦ ಮಕ್ಕಳಿಗೆ ತರಬೇತಿ ನೀಡುವುದರ ಮೂಲಕ ಸ್ವಂತ ಹೊಲಿಗೆ ಕೇಂದ್ರ ಸ್ಥಾಪಿಸಿ ಯಶಸ್ವಿಯಾದೆ. ೨೦೦೬ ನೇ ಇಸವಿಯಲ್ಲಿ ನಗರ ಪಂಚಾಯತ್ ನ ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಇಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಾ ೨೦೧೩ ರಲ್ಲಿ ಕಲರ್ಸ್ ನ್ಯೂ ಡಿಸೈನರ್ ಲೇಡೀಸ್ ಟೈಲರಿಂಗ್ ಮತ್ತು ಹೊಲಿಗೆ ತರಬೇತಿ ಕೇಂದ್ರ ಎಂಬ ಹೊಸ ಸಂಸ್ಥೆಯನ್ನು ಪ್ರಾರಂಭಿಸಿದೆ. ಇಲ್ಲಿ ಮಹಿಳೆಯರ ಮತ್ತು ಮಕ್ಕಳ ಉಡುಪು ಹೊಲಿಯುವುದು ಮತ್ತು ಮಹಿಳೆಯರಿಗೆ ಗ್ಲಾಸ್ ಪೈಟಿಂಗ್, ಎಂಬ್ರಾಯಿಡರಿ, ಮೆಹಂದಿ ಮತ್ತು ಹೊಲಿಗೆ ತರಬೇತಿಯನ್ನು ನೀಡಲು ತೊಡಗಿದೆ .
ನನ್ನ ವಿದ್ಯಾಭ್ಯಾಸ ಕೇವಲ ೧೦ನೇ ತರಗತಿ. ಆದರೆ ಇದರಿಂದ ಧೃತಿ ಗೆಡದೆ ಹೊಲಿಗೆ ಕ್ಷೇತ್ರದಲ್ಲಿ ಹಲವಾರು ವಿನ್ಯಾಸಗಳನ್ನು ಕರಗತ ಮಾಡಿಕೊಂಡು ಅದನ್ನು ಇನ್ನಷ್ಟು ಮಂದಿಗೆ ಕಲಿಸುವುದರ ಮೂಲಕ ಸಮಾಜಕ್ಕೆ ಕೂಡ ನೆರವಾಗಲು ತೊಡಗಿದೆ.
ನನ್ನ ಶ್ರಮ,ಕಠಿಣ ದುಡಿಮೆಯಿಂದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿದೆ. ಮಾಸಿಕ ಎಲ್ಲಾ ಖರ್ಚು ಕಳೆದು ಸಾವಿರಾರು ರೂಪಾಯಿ ಆದಾಯ ಗಳಿಸಲು ನನ್ನಿಂದ ಸಾಧ್ಯವಾಗಿದೆ. ಹೆಚ್ಚಿನ ವಿದ್ಯೆ ಕಲಿತಿಲ್ಲ ಎಂದು ಮನೆಯಲ್ಲಿಯೇ ಕುಳಿತುಕೊಳ್ಳುವ ಬದಲು ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿ ಕೊಂಡಲ್ಲಿ ಬದುಕು ಹಸನಾಗುತ್ತವೆ ಎಂಬುದಕ್ಕೆ ಜೀವಂತ ಉದಾಹರಣೆ ನನ್ನ ಬದುಕು .ತಾನು ಕಲಿತ ವಿದ್ಯೆಯನ್ನು ತನ್ನಂತಿರುವ ಬಡ ಹೆಣ್ಮಕ್ಕಳಿಗೆ ನೆರವಾಗಲು ಇಲ್ಲಿ ಹದಿನೈದು ದಿನದ, ಒಂದು ತಿಂಗಳ, ಅರು ತಿಂಗಳ ತರಬೇತಿ ಯನ್ನು ನೀಡಲಾಗುತ್ತದೆ .ಒಟ್ಟಿನಲ್ಲಿ ಹೆಣ್ಣು ಅಬಲೆಯಲ್ಲ ಸಬಲೆ. ಛಲ ಹಾಗೂ ಕಠಿಣ ಪರಿಶ್ರಮವಹಿಸಿದರೆ ನಿಮಗೂ ಸ್ವಾವಲಂಬನೆ ಬದುಕು ಸಾಗಿಸಬಹುದು.

ರಾಜೇಶ್ವರಿ ಶುಭಕರ