ನನ್ನ ವೃತ್ತಿ ನನ್ನ ಹೆಮ್ಮೆ

0

ಮಕ್ಕಳಿಂದ ಬುದ್ಧಿ ಹೇಳಿಸಿಕೊಂಡದ್ದು…

ಜಯಲಕ್ಷ್ಮಿ ದಾಮ್ಲೆ

ವಿದ್ಯಾರ್ಥಿಗಳ ಜತೆ ಬೆರೆಯುವ ಪ್ರತಿ ಕ್ಷಣವೂ ಅಮೂಲ್ಯವೇ. ೧೯೯೬ ರಲ್ಲಿ ಸ್ನೇಹಿತರು ಸೇರಿ ಪ್ರಾರಂಭಿಸಿದ ಸ್ನೇಹ ಶಾಲೆಯಲ್ಲಿ ಪ್ರಾರಂಭದಿಂದ ಲೂ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಾನು ಶಾಲೆಯಲ್ಲಿ ಬಾಲವಾಡಿಯಿಂದ ಹತ್ತನೇ ತರಗತಿಯವರೆಗಿನ ಎಲ್ಲಾ ಮಕ್ಕಳ ಜತೆ ಬೆರೆಯುವ ಅಪೂರ್ವ ಅವಕಾಶ ನನ್ನದು. ಚಿಕ್ಕ ಮಕ್ಕಳ ತೊದಲು ಮಾತು, ಮುಗ್ಧ ಮನ, ಸದಾ ಲವಲವಿಕೆಯಿಂದ ಪುಟಿಯುತ್ತಿರುವ ಮಕ್ಕಳು ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತಾರೆ. ಮಕ್ಕಳ ಜತೆಗಿನ ಮಧುರ ನೆನಪಿನ ಒಂದೆರಡು ತುಣುಕುಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

ಮಧ್ಯಾಹ್ನ ಊಟದ ಸಮಯದಲ್ಲಿ ಎಲ್ಲಾ ಮಕ್ಕಳನ್ನು ಮಾತಾಡಿಸುವುದು ನನ್ನ ಕ್ರಮ. ಊಟದ ಹಾಲ್ ನಲ್ಲಿ ಊಟ ಮಾಡುತ್ತಿರುವ ಮಕ್ಕಳನ್ನು ಮಾತನಾಡಿಸಿ, ನಿಧಾನವಾಗಿ ಊಟ ಮಾಡಿರೆಂದು ಹೇಳಿ ಮತ್ತೆ ನಾನು ಊಟಕ್ಕೆ ತೆರಳುವುದು ನನ್ನ ಕ್ರಮ. ಅದೊಂದು ದಿನ ಮಕ್ಕಳನ್ನೆಲ್ಲ ಮಾತನಾಡಿಸಿ ಬಂದೆ. ಊಟದ ಬಳಿಕ
ಶ್ರೀಕಾಂತನೆಂಬ ಹುಡುಗ ನನ್ನ ಬಳಿ ಬಂದು ’ನೀವು ನನ್ನನ್ನು ಇವತ್ತು ಏಕೆ ಮಾತಾಡಿಸಲಿಲ್ಲ’ ಎಂದ. ’ಕಣ್ತಪ್ಪಿನಿಂದ ನಿನ್ನನ್ನು ನೋಡದೆ ಮುಂದೆ ಹೋಗಿರಬಹುದು, ನಾಳೆ ಖಂಡಿತಾ ಮಾತನಾಡಿಸುತ್ತೇನೆ’ ಎಂದೆ. ಮರುದಿನ ಊಟದ ಸಮಯದಲ್ಲಿ ಎಲ್ಲರ ಬಳಿ ಹೋದೆ, ಮಾತ್ರವಲ್ಲ
ಶ್ರೀಕಾಂತನನ್ನು ಮಾತನಾಡಿಸಿದೆ. ನಿನ್ನೆ ಮಾತನಾಡಿಸದ ಬೇಸರ ಹೋಯ್ತಲ್ಲಾ’ ಎಂದೆ. “ಟೀಚರ್, ನೀವು ಇಂದು ಮಾತನಾಡಿಸಿದ್ದು ಇಂದಿನದ್ದೇ ಆಯ್ತು, ನಿನ್ನೆಯದ್ದು ಹೇಗಾಗುತ್ತದೆ?” ಎಂದ ಆರರ ಪೋರ.

ಇನ್ನೊಂದು ಘಟನೆ. ಬಾಲವಾಡಿ ಮಕ್ಕಳಿಗೆ ಹಾಡು, ನೃತ್ಯ ಕಲಿಸುತ್ತಿದ್ದೆ. ೨೦ ರಿಂದ ೨೫ ಮಕ್ಕಳಿದ್ದ ತರಗತಿ ಅದು. ನಾಲ್ಕು ಐದು ವರುಷದ ಉತ್ಸಾಹ ಪುಟಿಯುವ ಮಕ್ಕಳು. ಮೂವರು ಹುಡುಗರಂತೂ ಒಂದು ಕ್ಷಣವೂ ಕೂತಲ್ಲಿ ಕೂರದೆ ಎದ್ದು ಓಡಾಡುತ್ತಾ ಗಲಾಟೆ ಮಾಡುತ್ತಿದ್ದರು. “ಮಕ್ಕಳೇ, ನೀವು ಜಾಣ ಮಕ್ಕಳು, ಯಾರೂ ಗಲಾಟೆ ಮಾಡಬೇಡಿ, ಗಲಾಟೆ ಮಾಡಿದವರಲ್ಲಿ ನಾನು ಕೋಪ ಮಾಡಿಕೊಳ್ಳುತ್ತೇನೆ” ಎಂದೆ. ಪುನೀತ್ ಎಂಬ ಪುಟಾಣಿ ಎದ್ದು ’ ಟೀಚರ್, ನಮ್ಮ ಶಾಲೆಯಲ್ಲಿ ಕೋಪ ಮಾಡ್ಲಿಕ್ಕೆ ಇಲ್ಲ, ಎಲ್ಲರೂ ಸ್ನೇಹದಿಂದ ಇರಬೇಕು ಎಂತ ದಿನಾ ನೀವು ಹೇಳ್ತೀರಲ್ಲಾ, ಮತ್ತೆ ಹೇಗೆ ನಮ್ಮಲ್ಲಿ ನೀವು ಕೋಪ ಮಾಡುವುದು’ ಎಂದ.
ನನ್ನ ಮಾತನ್ನು ನನಗೇ ತಿರುಗಿಸಿ, ಕೋಪ ಮಾಡಬಾರದೆಂದು ನೆನಪಿಸಿದ ಪುಟಾಣಿಯ ಮಾತು ಇನ್ನೂ ಕಿವಿಯಲ್ಲಿ ರಿಂಗುಣಿಸುತ್ತಿದೆ.
ಮಕ್ಕಳೇ ದೇವರು.

ಜಯಲಕ್ಷ್ಮಿ ದಾಮ್ಲೆ
ಮುಖ್ಯಶಿಕ್ಷಕಿ, ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ