ಬೀದಿಗುಡ್ಡೆ: ಸಂಪ್ಯಾಡಿ ಸ.ಕಿ.ಪ್ರಾ. ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸದ್ದರೆ ಶಾಲೆಗೆ ಬೀಗ ಜಡಿಯುವುದಾಗಿ ಪೋಷಕರ ಸಭೆಯಲ್ಲಿ ನಿರ್ಧಾರ

0

ಕಡಬ ತಾಲೂಕಿನ ಬಳ್ಪ ಗ್ರಾಮದ ಬೀದಿಗುಡ್ಡೆಯಲ್ಲಿರುವ ಸಂಪ್ಯಾಡಿ ಕಿ.ಪ್ರಾ. ಶಾಲೆಯಲ್ಲಿ ಶೂನ್ಯ ಶಿಕ್ಷಕರಿರುವ ಕಾರಣ ಒಬ್ಬರು ಖಾಯಂ ಶಿಕ್ಷಕರನ್ನು ನೀಡಬೇಕೆಂದೂ, ತಿಂಗಳೊಳಗಾಗಿ ಶಿಕ್ಷಕರನ್ನು ನೀಡದಿದ್ದರೆ ಪೋಷಕರು ಶಾಲೆಗೆ ಬೀಗ ಜಡಿಯುವ ನಿರ್ಧಾರಕ್ಕೆ ಬಂದಿರುವುದಾಗಿಯೂ ತಿಳಿದುಬಂದಿದೆ.

ನೇಲ್ಯಡ್ಕ ಶಾಲೆಯಲ್ಲಿದ್ದ ಇಬ್ಬರು ಖಾಯಂ ಶಿಕ್ಷಕರಲ್ಲಿ ಒಬ್ಬರನ್ನು ಈ ಶಾಲೆಗೆ ಡೆಪ್ಟೇಷನ್ ಮೇಲೆ ಕಳುಹಿಸಿದ್ದ ಇಲಾಖೆ ನೇಲ್ಯಡ್ಕ ಶಾಲಾ ಓರ್ವ ಶಿಕ್ಷಕಿ ನಿವೃತ್ತಿಗೊಂಡ ಬಳಿಕ ಡೆಪ್ಟೇಷನ್ ರದ್ದುಗೊಳಿಸಿ ನೇಲ್ಯಡ್ಕ ಶಾಲೆಗೆ ಪೂರ್ಣಕಾಲಿಕವಾಗಿ ಸೇವೆ ಸಲ್ಲಿಸುವಂತೆ ಆದೇಶ ಮಾಡಿದ್ದ ಕಾರಣ ಮತ್ತೆ ಸಂಪ್ಯಾಡಿ ಶಾಲೆಗೆ ಖಾಯಂ ಶಿಕ್ಷಕರ ಕೊರತೆಯಾಯಿತು. ಈ ಬಗ್ಗೆ ಬಿಇಒ ರಲ್ಲಿ ಖಾಯಂ ಶಿಕ್ಷಕರನ್ನು ನೀಡುವಂತೆ ಮನವಿ ಮಾಡಿದರೂ ಶಿಕ್ಷಕರನ್ನು ಇಲಾಖೆ ನೇಮಿಸಲಿಲ್ಲ.

ಇದರಿಂದ ಬೇಸತ್ತ ಎಸ್.ಡಿ.ಎಂ.ಸಿ, ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳು ಸಭೆ ಸೇರಿ ಸೆ. 8 ರಂದು ಪ್ರತಿಭಟನೆ ನಡೆಸುವುದಾಗಿ ನಿರ್ಧರಿಸಿದರೆನ್ನಲಾಗಿದೆ‌. ಈ ವಿಚಾರ ಬಿಇಒ ಮತ್ತು ಸಮೂಹ ಸಂಪನ್ಮೂಲ ಕೇಂದ್ರಕ್ಕೆ ತಿಳಿಸಿದ ಮೇರೆಗೆ ಇಲಾಖಾಧಿಕಾರಿಗಳು ಸೆ. 8ರಂದು ಶಾಲೆಗೆ ಭೇಟಿ ನೀಡಿ ಪೋಷಕರ ಜೊತೆ ಚರ್ಚಿಸುವುದಾಗಿ ಹೇಳಿದರೆನ್ನಲಾಗಿದೆ. ಅದರಂತೆ ಸೆ. 8ರಂದು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್ ರವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ನಡುಮನೆ, ಸುಬ್ರಹ್ಮಣ್ಯ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಸುಬ್ರಹ್ಮಣ್ಯ, ತಾಲೂಕು ಶಿಕ್ಷಣ ಸಂಯೋಜಕರಾದ ಸಂಧ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು 1 ಗಂಟೆ ಚರ್ಚೆಯ ಬಳಿಕ ನೇಲ್ಯಡ್ಕ ಶಾಲಾ ಶಿಕ್ಷಕರಾದ ಪುರುಷೋತ್ತಮರನ್ನು ವಾರದಲ್ಲಿ 3 ದಿವಸ ಡೆಪ್ಟೇಷನ್ ಮೇಲೆ ಸಂಪ್ಯಾಡಿ ಶಾಲೆಗೆ ನಿಯೋಜಿಸುವುದು ಮತ್ತು ಕೇನ್ಯ ಶಾಲೆಯಿಂದ ಒಬ್ಬರು ಅತಿಥಿ ಶಿಕ್ಷಕಿಯನ್ನು ನಿಯೋಜನೆಗೊಳಿಸುವುದಾಗಿಯೂ, ತಿಂಗಳೊಳಗಾಗಿ ಒಬ್ಬರು ಖಾಯಂ ಶಿಕ್ಷಕರನ್ನು ನೇಮಿಸುವುದಾಗಿಯೂ ಬಿಇಒ ಭರವಸೆ ನೀಡಿದರೆನ್ನಲಾಗಿದೆ.

ತಿಂಗಳೊಳಗೆ ಖಾಯಂ ಶಿಕ್ಷಕರನ್ನು ನೇಮಿಸದಿದ್ದರೆ ಶಾಲೆಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಪೋಷಕರು ಸುದ್ದಿಗೆ ತಿಳಿಸಿದ್ದಾರೆ. ಸಭೆಯಲ್ಲಿ ಎಸ್.ಡಿ.ಎಂ.ಸಿ‌ ಮಾಜಿ ಅಧ್ಯಕ್ಷರುಗಳಾದ ಬಾಲಚಂದ್ರ ಕಟ್ಟ, ಜಯಂತ ಸಂಪ್ಯಾಡಿ, ಹಳೆವಿದ್ಯಾರ್ಥಿಗಳಾದ ಎಲ್ಯಣ್ಣ ಗೌಡ ಕಟ್ಟ, ಕುಸುಮಾಧರ ಕಟ್ಟ, ವಿಜಯಕುಮಾರ್ ಕಾಂಜಿ, ರಾಧಾಕೃಷ್ಣ ಅರ್ಗುಡಿ, ಕೇಶವ ಕೊಠಾರಿ, ಜಯಂತ ಕೊಠಾರಿ, ಮಹೇಶ್ ಸೂಂತಾರು, ಮೇದಪ್ಪ ಕಾರ್ಜ, ಶಿವಪ್ಪ ಅರ್ಗುಡಿ, ಉಪಾಧ್ಯಕ್ಷರುಗಳಾದ ಕವಿತಾ ನಾಗೇಶ್, ಕೃಷ್ಣಪ್ರಸಾದ್ ಕರ್ಮಾಜೆ ಸೇರಿದಂತೆ ಪೋಷಕರು, ಊರವರು ಭಾಗವಹಿಸಿದ್ದರು. ಶಾಲಾ ಶಿಕ್ಷಕಿ ಗೀತಾ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here