ಕನಕಮಜಲು ನಗದು ಕಳವು ಪ್ರಕರಣ

0

ಸ್ಥಳಕ್ಕೆ ಪೊಲೀಸ್ ಶ್ವಾನ – ಬೆರಳಚ್ಚು ತಜ್ಞರ ಆಗಮನ

ಕಳವು ನಡೆದ ಮನೆಯಿಂದ ಕನಕಮಜಲು ಕಡೆಗೆ ಮುಖ್ಯರಸ್ತೆಯಲ್ಲಿ ನೂರು ಮೀಟರ್ ದೂರ ಹೋದ ಪೊಲೀಸ್ ಶ್ವಾನ

ಜಾಲ್ಸೂರು ಗ್ರಾಮದ ಕದಿಕಡ್ಕದ ವಸಂತ ರೈ ಎಂಬವರ ಮನೆಯಲ್ಲಿ ಸೆ.12ರಂದು ಮಧ್ಯಾಹ್ನ ಸಂಭವಿಸಿದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಸಂಜೆ ವೇಳೆಗೆ ಪೊಲೀಸ್ ಶ್ವಾನ, ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ಪೊಲೀಸ್ ಶ್ವಾನವು ಮನೆಯಿಂದ ಕನಕಮಜಲು ಕಡೆಗೆ ಮುಖ್ಯರಸ್ತೆಯಲ್ಲಿ ಸುಮಾರು ನೂರು ಮೀಟರ್ ದೂರ ಹೋಗಿರುವುದಾಗಿ ತಿಳಿದುಬಂದಿದೆ.

ಬೆರಳಚ್ಚು ತಜ್ಞರು ಸ್ಥಳದಲ್ಲಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಸುಳ್ಯ ಕ್ರೈಂ ವಿಭಾಗದ ಎಸ್.ಐ. ಸರಸ್ವತಿ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದಾರೆ.

ಮನೆಯ ಹಿಂಬದಿ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಮನೆಯೊಳಗಿನ ಗೋಡ್ರೇಜ್ ಲಾಕ್ ಮುರಿದು ನಗದು ಕಳವುಗೈದಿದ್ದರು. ಆದರೆ ಎಸ್.ಐ. ಈರಯ್ಯ ದೂಂತೂರು ಅವರ ನೇತೃತ್ವದ ಪೊಲೀಸ್ ಪರಿಶೀಲನೆ ವೇಳೆ ಕಳವಾಗಿದ್ದ ಚಿನ್ನಾಭರಣ ಮನೆಯೊಳಗೆ ಚೆಲ್ಲಾಪಿಲ್ಲಿಯಾಗಿ ಹರಡಿದ್ದ ಬಟ್ಟೆಯ ರಾಶಿಯ ಮಧ್ಯೆ ಪತ್ತೆಯಾಗಿತ್ತು. ಇದೀಗ ನಗದು ಮಾತ್ರ ಕಳವಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.