ಇಂದು ವಿಶ್ವ ದೃಷ್ಟಿ ದಿನ

0

ಕಣ್ಣಿನ ಆರೋಗ್ಯದ ಬಗ್ಗೆ ಬೇಡ ನಿರ್ಲಕ್ಷ್ಯ

ವಿಶ್ವ ದೃಷ್ಟಿ ದಿನದ ಬಗ್ಗೆ ಇಲ್ಲಿದೆ ಮಾಹಿತಿ

ನಿಮ್ಮ ಕಣ್ಣಿನ ಆರೋಗ್ಯದ ಪ್ರಾಮುಖ್ಯತೆಯ ಕುರಿತು ಆಲೋಚಿಸಲು ಮತ್ತು ಅದನ್ನು ರಕ್ಷಿಸಲು ಮತ್ತು ಭವಿಷ್ಯದಲ್ಲಿ ಅದನ್ನು ಆರೋಗ್ಯಕರವಾಗಿಡಲು ಎಚ್ಚರಿಸುವ ಸಲುವಾಗಿ ಈ ದಿನವನ್ನು ಮೀಸಲಿಡಲಾಗಿದೆ. ವಿಶ್ವ ದೃಷ್ಟಿ ದಿನದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಹೀಗಿದೆ.

ಪಂಚೇಂದ್ರೀಯಗಳಲ್ಲಿ ಕಣ್ಣು ಪ್ರಮುಖವಾದ ಅಂಗ. ದೃಷ್ಟಿ ಇಲ್ಲದಿದ್ದರೆ ಜಗತ್ತೇ ಕತ್ತಲು. ಪ್ರಪಂಚದಾದ್ಯಂತದ ಅನೇಕ ಜನರು ವಿವಿಧ ರೀತಿಯ ದೃಷ್ಟಿ ದೋಷಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ವಿಶ್ವ ದೃಷ್ಟಿ ದಿನವನ್ನು ಆಚರಿಸಲಾಗುತ್ತದೆ. ಇಂದು ಅಂದರೆ ಅಕ್ಟೋಬರ್ 13 ರಂದು ವಿಶ್ವ ದೃಷ್ಟಿ ದಿನವನ್ನು ಆಚರಿಸಲಾಗುತ್ತಿದ್ದು, ವಿಶ್ವ ದೃಷ್ಟಿ ದಿನವನ್ನು ಅಂಧತ್ವ ತಡೆಗಟ್ಟುವಿಕೆಗಾಗಿ ಅಂತರಾಷ್ಟ್ರೀಯ ಸಂಸ್ಥೆ ಈ ದಿನಕ್ಕೆ ನಾಂದಿ ಹಾಡಿತು.

ಇಂದು ವಿಶ್ವ ದೃಷ್ಟಿ ದಿನ

ಮೇಲೆ ಹೇಳಿದಂತೆ ಕಣ್ಣು ಎಲ್ಲಾ ಜೀವಿಗಳಿಗೂ ಒಂದು ವರ. ನಿಮ್ಮ ಕಣ್ಣಿನ ಆರೋಗ್ಯದ ಪ್ರಾಮುಖ್ಯತೆಯ ಕುರಿತು ಆಲೋಚಿಸಲು ಮತ್ತು ಅದನ್ನು ರಕ್ಷಿಸಲು ಮತ್ತು ಭವಿಷ್ಯದಲ್ಲಿ ಅದನ್ನು ಆರೋಗ್ಯಕರವಾಗಿಡಲು ಎಚ್ಚರಿಸುವ ಸಲುವಾಗಿ ಈ ದಿನವನ್ನು ಮೀಸಲಿಡಲಾಗಿದೆ. ವಿಶ್ವ ದೃಷ್ಟಿ ದಿನದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಹೀಗಿದೆ.

ವಿಶ್ವ ದೃಷ್ಟಿ ದಿನ: ಇತಿಹಾಸ
1970ರ ದಶಕದ ಮಧ್ಯಭಾಗದಲ್ಲಿ ಸರ್ ಜಾನ್ ವಿಲ್ಸನ್ ಮತ್ತು ಇತರರು ಜಾಗತಿಕ ಕುರುಡುತನದ ಸಮಸ್ಯೆಯ ಬಗ್ಗೆ ಅಂತರರಾಷ್ಟ್ರೀಯ ಸಮುದಾಯದ ಗಮನ ಸೆಳೆದರು. ಇದು ಜನವರಿ 1, 1975 ರಂದು ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ದಿ ಪ್ರಿವೆನ್ಶನ್ ಆಫ್ ಬ್ಲೈಂಡ್ನೆಸ್ (IAPB) ಸಂಸ್ಥೆಯನ್ನು ಹುಟ್ಟುಹಾಕಲು ಕಾರಣವಾಯಿತು.

ಸರ್ ಜಾನ್ ವಿಲ್ಸನ್ ಸ್ಥಾಪಕ ಅಧ್ಯಕ್ಷರಾರಾದರು. ವರ್ಲ್ಡ್ ಬ್ಲೈಂಡ್ ಯೂನಿಯನ್ (WBU) ಮತ್ತು ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನೇತ್ರವಿಜ್ಞಾನ (ICO)ದಲ್ಲಿ ಸ್ಥಾಪಕ ಸದಸ್ಯರೂ ಆಗಿದ್ದರು. ಮೊಟ್ಟ ಮೊದಲ ವಿಶ್ವ ದೃಷ್ಟಿ ದಿನವನ್ನು ಅಕ್ಟೋಬರ್ 8, 1998 ರಂದು ಲಯನ್ಸ್ ಕ್ಲಬ್ ಇಂಟರ್​ನ್ಯಾಷನಲ್ ಫೌಂಡೇಶನ್ (LCIF) ತನ್ನ ಸೈಟ್‌ ಫಸ್ಟ್ ಅಭಿಯಾನದ ಮೂಲಕ ಈ ದಿನವನ್ನು ಪ್ರಾರಂಭಿಸಿತು.

ಈ ಸಂಸ್ಥೆಯು ಜಾಗತಿಕವಾಗಿ ದೃಷ್ಟಿ, ಕಣ್ಣಿನ ಆರೈಕೆ, ಕಣ್ಣಿನ ರೋಗಗಳಿಂದ ಬಳಲುವ ಅಪಾಯ ಮತ್ತು ದೃಷ್ಟಿ ಪುನಃಸ್ಥಾಪಿಸುವ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆ. ವಿಶ್ವ ದೃಷ್ಟಿ ದಿನವನ್ನು ಜಾಗತಿಕವಾಗಿ ಸುಮಾರು 200 ಸದಸ್ಯ ಸಂಸ್ಥೆಗಳು ಬೆಂಬಲಿಸುತ್ತವೆ.

ವಿಶ್ವ ದೃಷ್ಟಿ ದಿನ 2022: ಥೀಮ್
ಕಳೆದ ವರ್ಷ ‘ನಿಮ್ಮ ಕಣ್ಣುಗಳನ್ನು ಪ್ರೀತಿಸುʼ ಎಂಬ ಥೀಮ್‌ ಜೊತೆ ಈ ದಿನವನ್ನು ಇಂಟರ್‌ ನ್ಯಾಷನಲ್ ಏಜೆನ್ಸಿ ಫಾರ್ ದಿ ಪ್ರಿವೆನ್ಶನ್ ಆಫ್ ಬ್ಲೈಂಡ್ನೆಸ್ (IAPB) ಆಚರಿಸಿತ್ತು. ಈ ವರ್ಷವೂ ಸಹ ಇದೇ ಥೀಮ್‌ನೊಂದಿಗೆ ಈ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ. ಕಳೆದ ವರ್ಷದ ಜನಪ್ರಿಯತೆಯಿಂದಾಗಿ ಇದೇ ಥೀಮ್‌ ಅನ್ನು ಮುಂದುವರಿಸಿದ್ದಾರೆ.

ಕಳೆದ ವರ್ಷದ ಅಭಿಯಾನದ ನಂತರ 3.5 ಮಿಲಿಯನ್ ಜನರು ತಮ್ಮ ಕಣ್ಣಿನ ಆರೋಗ್ಯಕ್ಕೆ ಆದ್ಯತೆ ನೀಡಲು ವಾಗ್ದಾನ ಮಾಡಿದ್ದರು. ʼಲವ್ ಯುವರ್ ಐಸ್ʼ ಪರಿಕ್ಪಲನೆಯಡಿ ಈ ಅಭಿಯಾನವು ವ್ಯಕ್ತಿಗಳು ತಮ್ಮ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕೇಳಿಕೊಳ್ಳುತ್ತಿದೆ ಮತ್ತು ದೃಷ್ಟಿ ಕಳೆದುಕೊಳ್ಳುವ ಆದರೆ ಕಣ್ಣಿನ ಆರೈಕೆ ಸೇವೆಗಳಿಗೆ ಪ್ರವೇಶವನ್ನು ಹೊಂದಿರದ ವಿಶ್ವದಾದ್ಯಂತ ಒಂದು ಶತಕೋಟಿ ಜನರಲ್ಲಿ ಅರಿವೂ ಮೂಡಿಸುತ್ತಿದೆ.

ಕಣ್ಣಿನ ಆರೋಗ್ಯದ ಮಹತ್ವದ ಬಗ್ಗೆ ಅರಿವು ಮೂಡಿಸಲು ರಾಷ್ಟ್ರೀಯ ಸಂಸತ್ತುಗಳು, ಅಸೆಂಬ್ಲಿಗಳು, ಅಧ್ಯಕ್ಷೀಯ ಮತ್ತು ರಾಜಮನೆತನಗಳಲ್ಲಿ ದೃಷ್ಟಿ ಪರೀಕ್ಷೆಗಳನ್ನು ಕೈಗೊಳ್ಳಲು IAPB ಕೇಳುತ್ತಿದೆ.

ವಿಶ್ವ ದೃಷ್ಟಿ ದಿನ: ಮಹತ್ವ
ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಮೂಲಭೂತ ಆರೋಗ್ಯ ಸೌಲಭ್ಯಗಳು ಲಭ್ಯವಾಗುತ್ತಿಲ್ಲ. ಕುರುಡುತನದ ಹೆಚ್ಚಿನ ಕಾರಣಗಳು ತಡೆಗಟ್ಟಬಹುದಾದರೂ, ಹೆಚ್ಚಿನ ಸಂದರ್ಭಗಳಲ್ಲಿ ಸರಿಯಾದ ಚಿಕಿತ್ಸೆಗಳಿಲ್ಲದ ಕಾರಣ ದೃಷ್ಟಿಹೀನತೆಗೆ ಹಲವರು ಒಳಗಾಗುತ್ತಾರೆ.

ಜೀವನಕ್ಕೆ ಬೇಕಾದ ಪ್ರಮುಖ ಅಂಗ ಕಣ್ಣಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.ಕೇವಲ ಕಣ್ಣಿನ ಆರೋಗ್ಯ ಮಾತ್ರವಲ್ಲದೇ ಈ ಸಂದರ್ಭದಲ್ಲಿ ನೇತ್ರದಾನಕ್ಕೂ ಒತ್ತು ನೀಡಬೇಕು ಎಂಬುವುದು ನಮ್ಮ ಆಶಯ.