ಕಾಂಗ್ರೆಸ್ ಸರಕಾರ ವಿಫಲ : ಕಟೀಲ್ ವಾಗ್ದಾಳಿ

0

ಬರ ಪರಿಹಾರ ಕಾರ್ಯ ಅನುಷ್ಟಾನ ಮಾಡುವುದರಲ್ಲಿ ಸರಕಾರ‌ ಸಂಪೂರ್ಣ ವಿಫಲವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.


ಅವರು ನ.11 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.


ಸರಕಾರ ಭ್ರಷ್ಟಾಚಾರ, ಗುಂಪುಗಾರಿಕೆ, ಒಳಜಗಳದಲ್ಲಿ ಮುಳುಗಿದೆ. ರಾಜ್ಯದ ಅಭಿವೃದ್ಧಿಗೆ, ಬರ ಪರಿಹಾರಕ್ಕೆ ಗಮನ ಹರಿಸುತ್ತಿಲ್ಲ. ಅಭಿವೃದ್ಧಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಉಚಿತ ವಿದ್ಯುತ್ ಎಂದು ಹೇಳಿ ವಿದ್ಯುತ್ ನೀಡುವುದನ್ನೇ ನಿಲ್ಲಿಸಿದ್ದಾರೆ. ಮಳೆ ಇಲ್ಲಾ, ನೀರು ಇಲ್ಲಾ, ಕರೆಂಟ್ ಇಲ್ಲಾ ಎಂಬ ಸ್ಥಿತಿ ಜನರಿಗೆ ಬಂದೊದಗಿದೆ.‌ ಸರಕಾರ ರೈತ ವಿರೋಧಿ ಆಗಿದೆ ಎಂದ ನಳಿನ್‌ಕುಮಾರ್ ರೈತ ಸಮ್ಮಾನ್, ರೈತ ಮಕ್ಕಳಿಗೆ ನೀಡುವ ವಿದ್ಯಾ‌ನಿಧಿಯನ್ನು ಸರಕಾರ ನಿಲ್ಲಿಸಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ಎಡವುತ್ತಿದೆ ಎಂದರು.
ಬರಪರಿಹಾರದ ನಷ್ಟ ಅಂದಾಜಿಸಿ ಮಾರ್ಗ ಸೂಚಿ ಅನ್ವಯ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಯೋಜನೆಯಲ್ಲಿ ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಲಿದೆ. ಬಿಜೆಪಿ ಪಕ್ಷದ ವತಿಯಿಂದಲೂ ಬರ ಅಧ್ಯಯನ ನಡೆಸಲಾಗುತ್ತದೆ ಎಂದು ಅವರು ಹೇಳಿದರು.


ಮತ್ತೆ ಸ್ಪರ್ಧೆ ವರಿಷ್ಟರ ನಿರ್ಧಾರ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧೆ ಮಾಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಳಿನ್ ಕುಮಾರ್ ಕಟೀಲ್ ರವರು, ‘ನಾನು ಯಾವತ್ತೂ ಯಾವುದೇ ಚುನಾವಣೆಗೆ ಆಕಾಂಕ್ಷಿ ಆಗಿರಲಿಲ್ಲ, ಯಾವುದೇ ಸ್ಥಾನಮಾನ ಅಪೇಕ್ಷೆ ಪಟ್ಟಿಲ್ಲ. ಪಕ್ಷವೇ ಚುನಾವಣೆಗೆ ನಿಲ್ಲಲು ಅವಕಾಶ ನೀಡಿದೆ. ಪಕ್ಷವೇ ಗುರುತಿಸಿ ಸ್ಥಾನಮಾನಗಳನ್ನು ನೀಡಿದೆ. ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಪಕ್ಷದ ರಾಷ್ಟ್ರೀಯ ನಾಯಕರು ನಿರ್ಧರಿಸಲಿದ್ದಾರೆ. ಅಭ್ಯರ್ಥಿ ಆಯ್ಕೆ ಬಗ್ಗೆ ಈಗ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದರು.


ಪಕ್ಷದ ರಾಜ್ಯಾಧ್ಯಕ್ಷನಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ‌ ಮಾಡಿದ್ದೇನೆ. ಮುಂದೆಯೂ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಸೇರಿ ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡಿ ಪಕ್ಷವನ್ನು ಗೆಲ್ಲಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಾಜಿ ಅಧ್ಯಕ್ಷರಾದ ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ, ಸುಬೋದ್ ಶೆಟ್ಟಿ ಮೇನಾಲ, ನ.ಪಂ.ಮಾಜಿ‌ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಮಹೇಶ್ ಕುಮಾರ್ ರೈ ಮೇನಾಲ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು.