ಆಮಂತ್ರಣ ಪತ್ರಿಕೆ ನೀಡದೆ ಅಗೌರವ – ಶಾಲಾ ಮುಖ್ಯ ಶಿಕ್ಷಕರ ವಿರುದ್ದ ಇಲಾಖೆಗೆ ಗ್ರಾ.ಪಂ.ಉಪಾಧ್ಯಕ್ಷರ ದೂರು

0

ಶಾಲಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಗ್ರಾಮ ಪಂಚಾಯತಿಯ ಇತರ ಎಲ್ಲ ಸದಸ್ಯರಿಗೆ ಕೊಟ್ಟು ನನಗೆ ಮಾತ್ರ ಕೊಡದೆ ಅಗೌರವ ತೋರಿದ್ದಾರೆಂದು ಗ್ರಾ.ಪಂ. ಉಪಾಧ್ಯಕ್ಷರು ಜಾಲ್ಸೂರು ವಿವೇಕಾನಂದ ಶಾಲಾ ಮುಖ್ಯೋಪಾಧ್ಯಾಯರ ಮೇಲೆ ಶಿಕ್ಷಣ ಇಲಾಖೆಗೆ ದೂರ ನೀಡಿದ ಘಟನೆ ವರದಿಯಾಗಿದೆ.


ಇಲಾಖೆಗೆ ಮಾತ್ರವಲ್ಲದೆ ರಾಜ್ಯ ಶಿಕ್ಷಣ ಸಚಿವರು , ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಾಲಾ ಎಸ್.ಡಿ.ಎಂ.ಸಿ.ಗೆ ಕೂಡ ಅಂಚೆ ಮೂಲಕ ದೂರು ನೀಡಿರುವುದಾಗಿ ತಿಳಿದುಬಂದಿದೆ.

ನ.27ರಂದು ಜಾಲ್ಸೂರು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ನಡೆದಿದ್ದು , ಈ ವೇಳೆ ಅಲ್ಲಿಗೆ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ ಅವರು ಬಂದು ಡಿ.2ರಂದು ಜರುಗಲಿರುವ ವಿವೇಕಾನಂದ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಅಧ್ಯಕ್ಷರು ಮತ್ತು ಸರ್ವಸದಸ್ಯರು ಎಂದು ಬರೆದು ಗ್ರಾ.ಪಂ.‌ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರ ಕೈಯಲ್ಲಿ ನೀಡಿದರು. ಈ ವೇಳೆ ಅಲ್ಲಿದ್ದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ಅಲ್ಲಿದ್ದ ಗ್ರಾ.ಪಂ. ಸದಸ್ಯರಿಗೆ ಒಂದೊಂದು ಆಮಂತ್ರಣ ಪತ್ರಿಕೆಯನ್ನು ಅವರವರ ಕೈಯಲ್ಲಿ ನೀಡಿದರೆನ್ನಲಾಗಿದೆ. ಆದರೆ ಸಭೆಯಲ್ಲಿ ಕುಳಿತಿದ್ದ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ ಅವರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಲಿಲ್ಲವೆನ್ನಲಾಗಿದೆ. ನಂತರ ಎದುರಿನ ಟೇಬಲ್ ಮೇಲೆ ಹೆಸರು ಬರೆಯದ ಆಮಂತ್ರಣ ಪತ್ರವೊಂದನ್ನು ಇಟ್ಟುಬಂದದ್ದರೆನ್ನಲಾಗಿದೆ.

ಇದರಿಂದ ವ್ಯಗ್ರರಾದ ಗ್ರಾ.ಪಂ. ಉಪಾಧ್ಯಕ್ಷೆ ತಿರುಮಲೇಶ್ವರಿ ಅರ್ಬಡ್ಕರವರು, ಅಗೌರವ ತೋರಿದ ಮುಖ್ಯೋಪಾಧ್ಯಾಯ ಜಯಪ್ರಸಾದರ ಮೇಲೆ ಕ್ರಮಕೈಗೊಳ್ಳಬೇಕೆಂದು ರಾಜ್ಯ ಶಿಕ್ಷಣ ಸಚಿವರು, ಕ್ಷೇತ್ರ ಶಿಕ್ಷಣಾಧಿಕಾರಿ, ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಹಾಗೂ ಎಸ್.ಡಿ.ಎಂ.ಸಿ. ಗೆ ರಿಜಿಸ್ಟರ್ ಪೋಸ್ಟ್ ಮೂಲಕ ದೂರು ನೀಡಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ ಅವರನ್ನು ಸಂಪರ್ಕಿಸಿದಾಗ “ನಾನು ಶಾಲಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ನಡೆಯುವ ಸಂದರ್ಭದಲ್ಲಿ ಅಧ್ಯಕ್ಷರು ಮತ್ತು ಸರ್ವಸದಸ್ಯರು ಎಂದು ಬರೆದು ಗ್ರಾ.ಪಂ. ಅಧ್ಯಕ್ಷರ ಕೈಯಲ್ಲಿ ಆಮಂತ್ರಣ ನೀಡಿದ್ದೇನೆ. ಈ ವೇಳೆ ಸಭೆಯಲ್ಲಿದ್ದ ಸದಸ್ಯರಿಗೂ ಆಮಂತ್ರಣ ನೀಡಿದ್ದೇನೆ. ಆದರೆ ಗ್ರಾ.ಪಂ. ಉಪಾಧ್ಯಕ್ಷರು ನನ್ನ ಜೊತೆ ಮಾತನಾಡಿಲ್ಲ. ನನಗೆ ನಮಸ್ಕಾರ ಕೂಡ ಮಾಡಲಿಲ್ಲ. ಇದರಿಂದಾಗಿ ನಾನು ಅವರು ಕುಳಿತಿದ್ದ ಟೇಬಲ್ ಮುಂದೆ ಆಮಂತ್ರಣ ಪತ್ರಿಕೆ ಇಟ್ಟು ಬಂದಿದ್ದೇನೆ. ಅಗೌರವ ತೋರಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.