ಡಿ.17 ರಿಂದ ಜ.14: ಸುಳ್ಯಸೀಮೆ ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಧನುಪೂಜೆ

0

ನಮ್ಮ ಸನಾತನ ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ದೇವತಾರಾಧನೆಗೆ ಹೆಚ್ಚಿನ ಪ್ರಾಶಸ್ತ್ಯ ಇದೆ.. ನಾವು ದಿನ ನಿತ್ಯ ಮಾಡುವ ದೇವರ ಧ್ಯಾನ ,ಜಪ , ಪೂಜೆಗಳು ನಮ್ಮ ನಿತ್ಯಕರ್ಮಾನುಷ್ಠಾನಗಳಿಗೆ ಸೇರುತ್ತದೆ..ಪರ್ವದಿವಸಗಳ ಆರಾಧನೆಗಳು ವಿಶಿಷ್ಟವಾಗಿರುವಂಥವುಗಳು ಮತ್ತು ಅದರ ಆಚರಣೆಯೇ ಬೇರೆ..ಒಂದೊಂದು ಪರ್ವದಿನಗಳೂ ನಮ್ಮ ಜೀವನಕ್ಕೆ ಪೂರಕ ಹಾಗೂ ನಮ್ಮ ಶ್ರೇಯಸ್ಸಿಗೆ ದಾರಿಯೂ ಹೌದು.ಹೆಚ್ಚಿನ ಹಬ್ಬಹರಿದಿನಗಳು ಹಿರಿಯರ ಮೂಲಕ ತಿಳಿದು ,ಆ ಮೂಲಕ ಆಚರಿಸಲ್ಪಟ್ಟು ಅವು ನಮ್ಮ ಜೀವನದ ಒಂದು ಭಾಗವೆಂದೇ ನಮ್ಮ ನಂಬಿಕೆ ..ಅಂಥವುಗಳಲ್ಲಿ ಧನುರ್ಮಾಸ ಮತ್ತು ಧನುಪೂಜೆ ಕೂಡಾ ಒಂದು. ಸೌರಮಾಸಗಳಲ್ಲಿ ಒಂದಾದ ಧನುರ್ಮಾಸದ ಒಂದು ತಿಂಗಳು ದೇವತಾ ಆರಾಧನೆ ಮತ್ತುಆಧ್ಯಾತ್ಮಿಕ ಸಾಧನೆಗೆ ಪುಣ್ಯಕಾಲವಾಗಿದೆ.. ಒಂದು ಸಂವತ್ಸರ ಅಂದರೆ ನಮಗೆ ಒಂದು ವರ್ಷ ,ದೇವತೆಗಳಿಗೆ ಒಂದುದಿನ..ಅದರಲ್ಲಿ ದೇವತೆಗಳಿಗೆ ದಕ್ಷಿಣಾಯನ ರಾತ್ರಿ ಮತ್ತು ಉತ್ತರಾಯಣ ಹಗಲು.. ಉತ್ತರಾಯಣ ಪ್ರಾರಂಭವಾಗುವುದು ಧನುರ್ಮಾಸದ ಸಂದರ್ಭ .. ಧನುರ್ಮಾಸ ದೇವತೆಗಳಿಗೆ ಬ್ರಾಹ್ಮೀ ಸಮಯ ಅಂದರೆ ಸೂರ್ಯೋದಯದ ಮೊದಲಿನ ಕಾಲ..ಮಕರಸಂಕ್ರಮಣ ದೇವತೆಗಳಿಗೆ ಪ್ರಾತಃಕಾಲ ಪ್ರಾರಂಭ . ದೇವತೆಗಳ ಬ್ರಾಹ್ಮೀಸಮಯದ ಆ ಒಂದು ತಿಂಗಳು ನಾವು ನಮ್ಮ ಬ್ರಾಹ್ಮೀಸಮಯದಲ್ಲಿ ದೇವತಾರಾಧನೆ ಮತ್ತು ಜಪಾನುಷ್ಠಾನ ಮಾಡಿದರೆ ಭಗವಂತ ಬೇಗ ಪ್ರಸನ್ನನಾಗುತ್ತಾನೆ. ಆ ಸಮಯವೂ ಕೂಡಾ ಶುಭ್ರವಾಗಿದ್ದು ದೈವಚಿಂತನೆಗೆ ಪ್ರಶಸ್ತವಾದ ಕಾಲವಾಗಿದೆ.

ಧನುರ್ಮಾಸದಲ್ಲಿ ಎಲ್ಲಾ ದೇವರನ್ನು ಆರಾಧಸಬಹುದಾದರೂ ,ಶಿವನ ಆರಾಧನೆ ವಿಶೇಷ.. “ಆಶುತೋಷಃ” ಬೇಗ ಸಂತುಷ್ಟನಾಗುವವನೆಂದು ಶಿವನನ್ನು ಋಷಿಮುನಿಗಳು ಕೊಂಡಾಡಿದ್ದಾರೆ..ಲಯ ಅಂದರೆ ನಾಶ .ಲಯಾಧಿಕಾರಿಯಾದ ಪರಮೇಶ್ವರ ಲಯಮಾಡುವವನು ಮತ್ತು ಲಯದಿಂದ ರಕ್ಷಿಸುವವನೂ ಹೌದು..
ತಮೋಗುಣೋಪೇತನೆಂದು ಜ್ಞಾನಿಗಳಿಂದ ಸ್ತುತಿಸಲ್ಪಟ್ಟ ಪರಮೇಶ್ವರ ನಮ್ಮ ತಮೋಗುಣವನ್ನು ನಾಶಮಾಡಿದರೆ ನಾವು ಸಾತ್ವಿಕರಾಗಿ ಜೀವನದಲ್ಲಿ ಬೆಳಗಲು ಸಾಧ್ಯವಾಗುತ್ತದೆ.. “ರುದಾನ್ ದ್ರಾವಯತೀತಿರುದ್ರಃ” ಅಂದರೆ ಅಳುವವರನ್ನು ಅಳುವಿನಿಂದ ರಕ್ಷಿಸುವವನು ಎಂದರ್ಥ..ಮನುಷ್ಯರಿಗೆ ಜೀವನದಲ್ಲಿ ಅಳುವಿಗೆ ಕಾರಣವಾಗುವಂತಹ ಏನೆಲ್ಲ ಕಷ್ಟಗಳು ಬರುತ್ತದೋ ಅದನ್ನೆಲ್ಲ ಪರಿಹಾರ ಮಾಡುತ್ತಾನೆ. ಅಭಿಷೇಕ ಪ್ರಿಯನಾದ ಅವನನ್ನು ರುದ್ರಾಭಿಷೇಕ ಮಾಡಿ ಪ್ರಾರ್ಥಿಸಿದರೆ ಭಕ್ತರ ಸಕಲ ಇಷ್ಟಾರ್ಥ ಸಿದ್ಧಿಸುತ್ತದೆ..

ಸುಳ್ಯಸೀಮೆ ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಡಿಸೆಂಬರ್ 17 ರಿಂದ ಜನವರಿ 14 ರ ವರೆಗೆ ಧನುಪೂಜೆ ನಡೆಯಲಿದೆ. ಆ ಸಂದರ್ಭ ನಿತ್ಯ ಬೆಳಗ್ಗೆ 4 ಗಂಟೆಗೆ ರುದ್ರಾಭಿಷೇಕ , 5 ಗಂಟೆಗೆ ಸರಿಯಾಗಿ ಮಹಾಪೂಜೆ ನಡೆಯಲಿದೆ..ಡಿಸೆಂಬರ್ 16ರ ಧನು ಸಂಕ್ರಮಣದ ದಿನ ಪ್ರಾತಃಕಾಲದಿಂದ ಸಾಯಂಕಾಲ ವರೆಗೆ ಭಜನೆ ಮತ್ತುರಾತ್ರಿ ರಂಗಪೂಜೆ ನಡೆಯಲಿದೆ..ಕೊನೆಯ ದಿನ ಅಂದರೆ ಜನವರಿ 14ರ ಮಕರಸಂಕ್ರಮಣದಂದು ಧನುಪೂಜೆೃ ನಂತರ ಗಣಪತಿಹೋಮ,ಶತರುದ್ರಾಭಿಷೇಕ ,ಸಹಸ್ರಕೊಡ ಅಭಿಷೇಕ ,ಸಿಯಾಳಾಭಿಷೇಕ ಮಧ್ಯಾಹ್ನ ಮಹಾಪೂಜೆ ರಾತ್ರಿ ರಂಗಪೂಜೆ ನಡೆಯಲಿದೆ.ಸೀಮೆಯ ಸಮಸ್ತ ಭಕ್ತರು ಈ ಪುಣ್ಯ ಮಾಸದಲ್ಲಿ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಜೀವನದ ಶ್ರೇಯಸ್ಸಿಗೆ ಪ್ರಾರ್ಥಿಸುವುದರ ಜೊತೆಗೆ ,ಲೋಕಕ್ಕೆ ಬರುವ ಅತಿವೃಷ್ಟಿ,ಅನಾವೃಷ್ಟಿ ಪರಿಹಾರವಾಗಿ ಲೋಕಕ್ಷೇಮಕ್ಕಾಗಿ ಲೋಕಾಧ್ಯಕ್ಷನಲ್ಲಿ ಪ್ರಾರ್ಥಿಸೋಣ..
ಲೋಕಾಃ ಸಮಸ್ತಾಃಸುಖಿನೋ ಭವಂತು.

ಆಡಳಿತವರ್ಗಮತ್ತು ಸಿಬ್ಬಂಧಿವರ್ಗ
ಶ್ರೀಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ