ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಹಿತಕ್ಕಾಗಿ

0

ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಹಿತಕ್ಕಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಗೆ ಸರಕಾರ ಆಡಳಿತಾಧಿಕಾರಿ ನೇಮಕ ಮಾಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳ ಬೃಹತ್ ಮೆರವಣಿಗೆ ಹಾಗೂ ಸಭೆ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಇಂದು ನಡೆಯಿತು.

ಕೆ.ವಿ.ಜಿ. ಡೆಂಟಲ್ ಕಾಲೇಜು ಮುಂಭಾಗದಲ್ಲಿ ಸೇರಿದ ಡಾ.ರೇಣುಕಾಪ್ರಸಾದ್ ಉಸ್ತುವಾರಿಯ ಕೆ.ವಿ.ಜಿ. ಐ.ಟಿ.ಐ, ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು, ಕೆ.ವಿ.ಜಿ. ಡೆಂಟಲ್ ಕಾಲೇಜು‌ ವಿದ್ಯಾರ್ಥಿಗಳು ಸೇರಿ ಮೆರವಣಿಗೆಯ‌ ಮೂಲಕ ಸುಳ್ಯ ತಾಲೂಕು ಕಚೇರಿ ‌ಮುಂಭಾಗಕ್ಕೆ ಬಂದು ಸೇರಿದರು.


ತಾಲೂಕು ಕಚೇರಿ‌ ಎದುರು ಮಾತನಾಡಿದ ಕರ್ನಾಟಕ ರಾಜ್ಯ ‌ಅನುದಾನಿತ ಐ.ಟಿ.ಐ. ನೌಕರರ ಸಂಘದ ಅಧ್ಯಕ್ಷ ಎಸ್.ಆರ್. ರವಿ ಮೈಸೂರು ಮಾತನಾಡಿ ” ಗ್ರಾಮೀಣ ಪ್ರದೇಶವಾದ ಸುಳ್ಯದಲ್ಲಿ ಹಿಂದುಳಿದ ವರ್ಗಗಳ, ಬಡ ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕೆನ್ನುವ ನಿಟ್ಟಿನಲ್ಲಿ 55 ವರ್ಷಗಳ ಹಿಂದೆ ಕುರುಂಜಿ ವೆಂಕಟ್ರಮಣ ಗೌಡರು ಸ್ಥಾಪಿಸಿದ ವಿದ್ಯಾಸಂಸ್ಥೆಗಳು. ಇದರ ಮೇಲೆ ನಮಗೆ ಗೌರವವಿದೆ. ಆದರೆ ವಿದ್ಯಾರ್ಥಿಗಳು ಇಂದು ಕ್ಯಾಂಪಸ್ ಉಳಿಸಿ – ನಿಮ್ಮ ದ್ವೇಷಕ್ಕೆ ನಮ್ಮ ಭವಿಷ್ಯ ಬಲಿಕೊಡದಿರಿ – ಗುಣ ಮಟ್ಟದ ಶಿಕ್ಷಣ ನಮ್ಮ ಹಕ್ಕು ಇತ್ಯಾದಿ ಫಲಕವನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆಂದರೆ ಸಮಸ್ಯೆ ಗಂಭೀರವಾದುದು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಟ್ಟರೆ ದೇಶದ ಆರ್ಥಿಕ ವ್ಯವಸ್ಥೆ ಗಟ್ಟಿಯಾಗುತ್ತದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಇಲ್ಲಿ‌ ಸಿಗಬೇಕು. ಇಲ್ಲಿ ಆಡಳಿತ ಮಂಡಳಿಯೊಳಗಿನ ಭಿನ್ನಾಭಿಪ್ರಾಯದಿಂದ ಮಕ್ಕಳ ಶಿಕ್ಷಣದ ಮೇಲೆ ದುಷ್ಪರಿಣಾಮ‌ ಬೀರುತ್ತಿದೆ. ಶಿಕ್ಷಣಕ್ಕೆ ಬೇಕಾದ ಪೂರಕ ವಸ್ತುಗಳು ಕಾಲೇಜಿನಲ್ಲಿ ಸಿಗುತ್ತಿಲ್ಲವಂತೆ. ಹೀಗಾದರೆ ಹೇಗೆ?” ಎಂದ ಅವರು ” ಇಲ್ಲಿಯ ಶಿಕ್ಷಣ ಸಂಸ್ಥೆಗಳ ವಿಚಾರಕ್ಕೆ‌ ನಾಗರಿಕರೂ ಕೂಡಾ ವಿರೋಧ ವ್ಯಕ್ತ ಪಡಿಸಿದ್ದು‌ ಮಾಧ್ಯಮದಲ್ಲಿ ಬಂದಿದೆ. ಮಂಡಳಿಯೊಳಗಿನ ಕಲಹ ಇತ್ಯರ್ಥ ಪಡಿಸಿ. ಅದು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕ್ಕೆ ಮಾರಕವಾಗಬಾರದು. ಸಂಸ್ಥೆಯ‌ ನೌಕರರನ್ನು ಅಮಾನತು ಮಾಡಿದ್ದಾರೆ. ಇದರಿಂದ ಶಿಕ್ಷಣದ ಮೇಲೆ‌ ಪರಿಣಾಮ ಬೀರುತ್ತದೆ” ಎಂದು‌ ಹೇಳಿದರು.

ಇಂಜಿನಿಯರಿಂಗ್ ‌ಕಾಲೇಜು ವಿದ್ಯಾರ್ಥಿ ‌ಪ್ರಹ್ಲಾದ್‌ಮಾತನಾಡಿ ” ಕಳೆದ 3 ತಿಂಗಳಿನಿಂದ ಕಾಲೇಜಿನಲ್ಲಿ ದೈನಂದಿನ ಕೆಲಸಗಳು ಆಗುತ್ತಿಲ್ಲ. ಕಾಲೇಜಿನಲ್ಲಿ ಆಗುತ್ತಿದ್ದ ಕಾರ್ಯಾಗಾರಗಳು, ಕನ್ನಡ‌ ರಾಜ್ಯೋತ್ಸವ, ವಿದ್ಯಾರ್ಥಿಗಳ ಸ್ವಾಗತ ಇತ್ಯಾದಿ ಕಾರ್ಯಾಗಾರಗಳು‌ ಆಗುತ್ತಿಲ್ಲ. ಕಂಪ್ಯೂಟರ್ ದುರಸ್ತಿ, ಸ್ಕಾಲರ್ಶಿಪ್ ಇತ್ಯಾದಿ ಸಿಗುತ್ತಿಲ್ಲ. ವಿಚಾರಿಸಿದಾಗ ಕಾಲೇಜು ಅಕೌಂಟ್ ‌ಸೀಝ್ ಆಗಿದೆ ಎಂಬ ಮಾಹಿತಿ‌ ಬಂದಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೆಲಸಗಳು ಆಗಬೇಕು” ಎಂದು‌ ಹೇಳಿದರು.

ಬಳಿಕ ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ‌ಜಿ.ಮಂಜುನಾಥ್ ರವರು‌ ಬಂದು‌ ಮನವಿ ಸ್ವೀಕರಿಸಿ, ಮನವಿಯನ್ನು ಸರಕಾರಕ್ಕೆ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.