ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಮಹಾರಥೋತ್ಸವ ಸಂಪನ್ನ

0

ರಥಾರೂಡರಾದ ಸುಬ್ರಹ್ಮಣ್ಯ ದೇವರು, ಉಮಾಮಹೇಶ್ವರ ದೇವರು

ಸಹಸ್ರಾರು ಮಂದಿ ಭಾಗಿ, ಸಂಯಮ, ಶಿಸ್ತು ಬದ್ದವಾಗಿ ನಡೆದ ರಥೋತ್ಸವ

ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ಸಹಸ್ರಾರು ಭಕ್ತರ ಸಮ್ಮುಖ ಚಂಪಾಷಷ್ಠಿಯ ಮಹಾರಥೋತ್ಸವ ಇಂದು ಬೆಳಗ್ಗೆ ನೆರವೇರಿತು.  ಬ್ರಹ್ಮರಥದಲ್ಲಿ ಸುಬ್ರಹ್ಮಣ್ಯ ದೇವರು ಆಸೀನರಾಗಿ  ರಥೋತ್ಸವ ನಡೆಯಿತು.


ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.  ಭಕ್ತರು   ದೇವರ ಮಹಾರಥವನ್ನು ಎಳೆದರು.

 ಬ್ರಹ್ಮರಥವು ರಾಜಗಾಂಭೀರ್ಯದಿಂದ ಅತ್ಯಂತ ಸಲೀಸಾಗಿ, ಆಕರ್ಷಕವಾಗಿ ರಥಬೀದಿಯಲ್ಲಿ ಮುನ್ನಡೆಯಿತು. ವರ್ಷದಲ್ಲಿ ಒಂದು ಬಾರಿ ನಡೆಯುವ
 ರಥೋತ್ಸವ ಸಂದರ್ಭ ಸಹಸ್ರಾರು ಮಂದಿ  ಶ್ರೀ ದೇವರ ವೈಭವದ ರಥೋತ್ಸವ ವೀಕ್ಷಿಸಿ ಕೃತಾರ್ಥರಾದರು. ರಥೋತ್ಸವದ ಮೊದಲು ದೇವಸ್ಥಾನದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು.

ಅನಂತರ ರಾಜಬೀದಿಯಲ್ಲಿ ನಾಗಸ್ವರ, ಪಂಚವಾದ್ಯ, ಬ್ಯಾಂಡ್, ಜಾಗಟೆ, ಶಂಖ ವಾದ್ಯ ಮತ್ತು ಚೆಂಡೆ ವಾದನಗಳ ಹಿಮ್ಮೇಳದಲ್ಲಿ  ಆನೆ, ಬಿರುದಾವಳಿ, ಭಕ್ತಜನರ ಜಯಘೋಷದ ನಡುವೆ ಬೆಳಗ್ಗೆ 7.33 ಧನುರ್ ಲಗ್ನದ ಸುಮುಹೂರ್ತದಲ್ಲಿ  ಶ್ರೀ ಸುಬ್ರಹ್ಮಣ್ಯ ಸ್ವಾಮಿ ರಥಾರೂಢರಾದರು. ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾದರು.

ಈ ಸಂದರ್ಭದಲ್ಲಿ
ಈ ಸಂದರ್ಭಗಳಲ್ಲಿ ಸುಳ್ಯ ದ ಶಾಸಕಿ ಕುl ಭಾಗೀರಥಿ ಮುರುಳ್ಯ, ಜಿಲ್ಲಾಧಿಕಾರಿ ಮುಲೈ ಮುಗಿಲನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನ್ ರಾಂ ಸುಳ್ಳಿ, ಎಸ್.ಪಿ ಸಿ.ಬಿ ರಿಷ್ಯಂತ್, ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್, ದೇವಸ್ಥಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾl ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನದರ್ಬೆ, ಪಿ.ಜಿ.ಎಸ್.ಎನ್.ಪ್ರಸಾದ್, ಮನೋಹರ ರೈ, ಶ್ರೀವತ್ಸಾ, ಕಡಬ, ಲೊಕೇಶ್ ಮುಂಡೊಕಜೆ, ವನಜಾ.ವಿ.ಭಟ್, ಶೋಬಾ ಗಿರಿಧರ್ ಸೇರಿದಂತೆ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರು, ದೇವಳದ ಸಿಬ್ಬಂದಿಗಳು ಸೇರಿದಂತೆ ಸಹಸ್ರಾರು  ಭಕ್ತರು ಉಪಸ್ಥಿತರಿದ್ದರು.