ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಸುವರ್ಣ ಮಹೋತ್ಸವಕ್ಕೆ ಚಾಲನೆ

0

ರಾಷ್ಟ್ರೀಯ ಶಿಕ್ಷಣ ‌ನೀತಿಯ ಕುರಿತು ಶಿಕ್ಷಣ ತಜ್ಞರು‌ ಮೌನ ಮುರಿಯಬೇಕು : ಕೋಟ ಶ್ರೀನಿವಾಸ ಪೂಜಾರಿ

ಬಂಗಾರದಂತ ಶಾಲೆ ಚೊಕ್ಕಾಡಿ ವಿದ್ಯಾಸಂಸ್ಥೆ : ಸುಬ್ರಾಯ ಚೊಕ್ಕಾಡಿ

“ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳ್ಳುವ ಕುರಿತು ಇನ್ನೂ ತಾರ್ಕಿಕ ಅಂತ್ಯಕ್ಕೆ ಹೋಗಿಲ್ಲ. ಇದರ ಕುರಿತು ಸುಧೀರ್ಘ ಚರ್ಚೆಯಾಗಬೇಕು. ಶಿಕ್ಷಣ ತಜ್ಞರು, ಜ್ಞಾನಿಗಳು ಈ ಕುರಿತು ಮೌನ ಮುರಿದು ಮಾತನಾಡಬೇಕು” ಎಂದು
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಚೊಕ್ಕಾಡಿ ಪ್ರೌಢಶಾಲಾ ‌ಕುಕ್ಕುಜಡ್ಕದ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಆಶಯ ಭಾಷಣ ಮಾಡಿದರು. “ಇಲ್ಲಿಗೆ ಬಂಗಾರಪಣೆ ಎಂಬ ಹೆಸರಿದೆ. ಆ ಹೆಸರಿನಂತೆ ಬಂಗಾರದಂತ ಶಿಕ್ಷಣ ಸಂಸ್ಥೆ ಇಲ್ಲಿ ದೊರೆದಿದೆ. ಇದು ಈ ಊರಿನ‌ ಭಾಗ್ಯ ಎಂದ ಅವರು, 50 ವರ್ಷ ತುಂಬಿದ ಶಿಕ್ಷಣ ಸಂಸ್ಥೆ ಇದು. ಇಲ್ಲಿಯ ಶಿಕ್ಷಣದ ಗುಣಮಟ್ಟ ಕಡಿಮೆಯಾಗಿಲ್ಲ. ಆದರೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ನಮ್ಮೂರಿನ ಮಕ್ಕಳು ಇಲ್ಲಿಗೆ ಬಂದು ಶಿಕ್ಷಣ ಪಡೆಯುವಂತಾಗಬೇಕು. ಈ ಕುರಿತು ಆತ್ಮಾವಲೋಕನ ಮಾಡೋಣ” ಎಂದು‌ ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ‌ಮಾಜಿ ಸಚಿವ ಎಸ್.ಅಂಗಾರ ವಹಿಸಿದ್ದರು.

ಸುವರ್ಣ ಜ್ಯೋತಿ ಸ್ಮರಣ ಸಂಚಿಕೆಯನ್ನು‌ ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡ ಬಿಡುಗಡೆ ಮಾಡಿದರು. ಗ್ರಾಮೀಣ ಭಾಗದಲ್ಲಿ 50 ವರ್ಷಗಳ ಹಿಂದೆ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿರುವುದು ದೊಡ್ಡ ಸಾಧನೆ. ಅದನ್ನು‌ನಾವು ಶ್ಲಾಘಿಸಬೇಕು ಎಂದ ಅವರು ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯ. ಪಠ್ಯ ಪುಸ್ತಕ ರಚನೆಯಲ್ಲಿ ಯಾವುದೇ ರಾಜಕಾರಣಿಗಳು ಕೈ ಹಾಕಬಾರದು. ಶಿಕ್ಷಣ ತಜ್ಞರ ಮೂಲಕ ಪಠ್ಯಪುಸ್ತಕ ರಚನೆಯಾದರೆ ಸಂಸ್ಕಾರದ, ಸತ್ಪ್ರಜೆಯಾಗುವ , ಪ್ರೀತಿ ವಿಶ್ವಾಸದಿಂದ ಬಾಳುವ ಶಿಕ್ಷಣ ದೊರೆಯಲು ಸಾಧ್ಯ. ಕವಿ ಸುಬ್ರಾಯ ಚೊಕ್ಕಾಡಿಯವರ ಭಾವಗೀತೆ “ಮುನಿಸುತರವೆ ಮುಗುದೆ” ಎಂಬ ಹಾಡನ್ನು ಹಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷರು, ಮಾಜಿ ಸಚಿವ ಎಸ್.ಅಂಗಾರ ರವರು ಮಾತನಾಡಿ
“ಹಿರಿಯರು ಹುಟ್ಟು ಹಾಕಿದ ಶಿಕ್ಷಣ ಸಂಸ್ಥೆಯಿಂದ ಮುಂದಿನ ಪೀಳಿಗೆಗೆ ಅವಶ್ಯಕತೆಗೆ ಅನುಗುಣವಾಗಿ ಶಿಕ್ಷಣದ ಜತೆಗೆ ಸಂಸ್ಕಾರದ ಬೋಧನೆಯಾಗಬೇಕು. ನಾನು ಓದಿದ ವಿದ್ಯಾದೇಗುಲದ ಸುವರ್ಣ ಮಹೋತ್ಸವವನ್ನು ಆಚರಿಸುವ ಹೊಣೆಗಾರಿಕೆಯ ಅವಕಾಶ ನನಗೆ ಲಭಿಸಿರುವುದು ಸೌಭಾಗ್ಯವೆಂದೆನಿಸಿಕೊಂಡಿದ್ದೇನೆ. ಈ ಸಂದರ್ಭದಲ್ಲಿ
ಶಾಲೆಯ ಸ್ಥಾಪನೆಗೆ ಶ್ರಮವಹಿಸಿದ ಹಿರಿಯರನ್ನು ಸ್ಮರಿಸಿಕೊಂಡರು. ನಮ್ಮ ಊರಿನ ಅಭಿವೃದ್ಧಿ ಪರ ಬೆಳವಣಿಗೆಗೆ ಗ್ರಾಮಸ್ಥರು ದೊಡ್ಡ ಮನಸ್ಸಿನಿಂದ ಕೈ ಜೋಡಿಸಿಬೇಕು ಎಂದು ಅವರು ವಿನಂತಿಸಿದರು.

ಪ್ರಯೋಗಾಲಯ ಉದ್ಘಾಟನೆ : ಬೆಂಗಳೂರಿನ ಕಿವಾನಿ ಇಂಟರ್ ನ್ಯಾಷನಲ್ ಗ್ರೂಪ್ ವತಿಯಿಂದ ಸುಮಾರು 7 ಲಕ್ಷ ವೆಚ್ಚದಲ್ಲಿ ಚೊಕ್ಕಾಡಿ ಪ್ರೌಢಶಾಲೆಗೆ ನೀಡಲಾದ ಪ್ರಯೋಗಾಲಯವನ್ನು ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಯವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ‌
ಈ ಸಂದರ್ಭದಲ್ಲಿ ಕಿವಾನಿ ಸಂಸ್ಥೆಯ ಅಧಿಕಾರಿ ರಾಜಣ್ಣ ಹಾಗೂ ಪ್ರಯೋಗಾಲಯ ಬರುವಲ್ಲಿ ಶ್ರಮ ವಹಿಸಿದ ರಜನಿಕಾಂತ್ ಉಮ್ಮಡ್ಕರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.

ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಅಣ್ಣಾಜಿ ಗೌಡ ಪೈಲೂರು, ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಕಡಪಳ, ಚೊಕ್ಕಾಡಿ ಪ್ರೌಢಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಮೂಕಮಲೆ, ಆಂ. ಮಾ. ಶಾಲೆಯ ಅಧ್ಯಕ್ಷ ಪ್ರಕಾಶ್ ಮಾಯಿಪಡ್ಕ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸಂಕೀರ್ಣ ಚೊಕ್ಕಾಡಿ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಚೈತ್ರಾ ಯು, ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ ಯ ಖಜಾಂಜಿ ಹರ್ಷವರ್ಧನ ಬೊಳ್ಳೂರು, ವಿದ್ಯಾರ್ಥಿ ನಾಯಕರಾದ ಅಭಿಜಿತ್ ಕೆ, ಹಸ್ತಾ ಕೆ.ಎಂ. ವೇದಿಕೆಯಲ್ಲಿ ಇದ್ದರು.
ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ ಕ್ರೀಡಾಕೂಟದ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು.
ಆಡಳಿತ ಮಂಡಳಿಯ ಉಪಾಧ್ಯಕ್ಷ ಅಣ್ಣಾಜಿ ಗೌಡ ರವರು ವಂದಿಸಿದರು. ಪಿ.ಡಿ.ಒ ದಯಾನಂದ ಪತ್ತುಕುಂಜ ಮತ್ತು ಸೋಮಶೇಖರ ಹಾಸನಡ್ಕ ಕಾರ್ಯಕ್ರಮ ‌ನಿರೂಪಿಸಿದರು.