ಕುಕ್ಕೆ ಸುಬ್ರಹ್ಮಣ್ಯ ಕಿರುಷಷ್ಠಿ ರಥೋತ್ಸವ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರುಷಷ್ಠಿಯ ಜ.16 ರಂದು ಸಂಜೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವವು ಭಕ್ತಿ ಸಡಗರದಿಂದ ನೆರವೇರಿತು.

ಸಹಸ್ರಾರು ಸಂಖ್ಯೆಯ ಭಗವದ್ಬಕ್ತರ ಪರಾಕುಗಳೊಂದಿಗೆ ತಳಿರು, ತೋರಣ, ಸೀಯಾಳ, ಅಡಿಕೆ,ಬಾಳೆ, ಬಾಳೆಗೊನೆ ಮತ್ತು ವಿದ್ಯುತ್ ಅಲಂಕಾರದ ರಥದಲ್ಲಿ ಶ್ರೀ ದೇವರ ಉತ್ಸವ ನೆರವೇರಿತು.

ರಥಾರೋಹಣದ ಬಳಿಕ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತರಾಮ ಎಡಪಡಿತ್ತಾಯರು ಶ್ರೀ ದೇವರಿಗೆ ಪೂಜೆ ನೆರವೇರಿಸಿದರು.ಬಳಿಕ ವೈಭವದ ರಥೋತ್ಸವ ನೆರವೇರಿತು.


ನಂತರ ಸವಾರಿ ಮಂಟಪದ ಕಿರುಷಷ್ಠಿ ಕಟ್ಟೆಯಲ್ಲಿ ದೇವರಿಗೆ ಪೂಜೆ ನೆರವೇರಿತು.ಈ ಸಂದರ್ಭದಲ್ಲಿ ಆಕರ್ಷಕ ಸುಡುಮದ್ದುಗಳು ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿತು. ಬಳಿಕ ದೇವಳದ ಹೊರಾಂಗಣದಲ್ಲಿ ಪಾಲಕಿ ಉತ್ಸವ, ಬಂಡಿ ಉತ್ಸವ ನಡೆಯಿತು.


ಕುಕ್ಕೆ ಸುಬ್ರಹ್ಮಣ್ಯನು ಸಂಗೀತ ಪ್ರೀಯನಾಗಿರುವುದರಿಂದ ರಥೋತ್ಸವ ರಥೋತ್ಸವ ಬಳಿಕ ನಡೆದ ಒಳಾಂಗಣ ಉತ್ಸವದಲ್ಲಿ ಅನೇಕ ಸಂಗೀತಮಯ ಉತ್ಸವದ ಸುತ್ತುಗಳು ನೆರವೇರಿತು. ತಮಿಳುನಾಡು, ಕೇರಳ, ಮೈಸೂರು, ಶ್ರೀ ರಂಗಪಟ್ಟಣ ಮೊದಲಾದ ಪ್ರದೇಶಗಳ ಕಲಾವಿದರಿಂದ ಸ್ಯಾಕ್ಸೋಪೋನ್, ನಾದಸ್ವರ, ತವಿಲ್, ಬ್ಯಾಂಡ್ ಮೊದಲಾದ ಸಂಗೀತ ವಾದ್ಯಗಳ ಉತ್ಸವಗಳ ಸುತ್ತುಗಳು ಭಕ್ತಾಧಿಗಳನ್ನು ಭಾವಪರವಶವಾಗುವಂತೆ ಮಾಡಿತು. ಕೇರಳ ಶೈಲಿಯ ಚೆಂಡೆ ವಾದನದ ಕೂಡಾ ನಡೆಯಿತು.


ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಮ್ ಸುಳ್ಳಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್ ಪ್ರಸಾದ್, ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್, ವನಜಾ.ವಿ.ಭಟ್, ಲೋಕೇಶ್ ಮುಂಡುಕಜೆ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್ ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.