ವಿಜೃಂಭಣೆಯಿಂದ ನಡೆಯತ್ತಿರುವ ಅಯ್ಯನಕಟ್ಟೆ ಜಾತ್ರೆ- ಉಳ್ಳಾಕುಲು, ರುದ್ರಚಾಮುಂಡಿ ದೈವಗಳ ನೇಮ

0

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ್ಕ ಮತ್ತು ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಜ. 26ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿತು. ಬೆಳಿಗ್ಗೆ ತಂಟೆಪ್ಪಾಡಿ ಶ್ರೀ ಶಿರಾಡಿ ದೈವದ ಸನ್ನಿಧಿಯಲ್ಲಿ ಗಣಪತಿ ಹವನ, ನಾಗತಂಬಿಲ, ವಿಶೇಷ ತಂಬಿಲ ನಡೆಯಿತು. ಮೂರುಕಲ್ಲಡ್ಕದಲ್ಲಿ ನಾಗತಂಬಿಲ, ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಬಾಳಿಲ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ದ್ವಾರದ ಬಳಿಯಿಂದ ಹಸಿರುವಾಣಿ ಮೆರವಣಿಗೆ ನಡೆಯಿತು. ಜ. 27ಎಂದು ಬೆಳಿಗ್ಗೆ ಗಣಪತಿ ಹವನ ಸಹಿತ ಚಂಡಿಕಾ ಹವನ ಮತ್ತು ದುರ್ಗಾ ಪೂಜೆ, ದೈವಗಳಿಗೆ ವಿಶೇಷ ತಂಬಿಲ ಸೇವೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ಕುಕ್ಕುತ್ತಡಿಯ ಶ್ರೀ ದೈವಗಳ ಬಚ್ಚೆಲ್‌ಕಟ್ಟೆಯಲ್ಲಿ ತಂಬಿಲ ಸೇವೆ ನಡೆಯಿತು. ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಕೋಟೆಮುಂಡುಗಾರು, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕಳಂಜ‌, ಬ್ರಾಹ್ಮರಿ ಮಹಿಳಾ ಭಜನಾ ಮಂಡಳಿ ತಂಟೆಪ್ಪಾಡಿ ಇವರಿಂದ ಮೂರುಕಲ್ಲಡ್ಕದಲ್ಲಿ ಭಜನಾ ಕಾರ್ಯಕ್ರಮ ಶ್ರೀ ಉಳ್ಳಾಕುಲು ದೈವಕ್ಕೆ ಎಣ್ಣೆಬೂಳ್ಯ ನಡೆಯಿತು. ಜ. 28ರಂದು ಬೆಳಿಗ್ಗೆ ಮೂರುಕಲ್ಲಡ್ಕ ದೈವಸ್ಥಾನದಿಂದ ಸಪರಿವಾರ ಶ್ರೀ ಇಷ್ಟದೇವತಾ ಉಳ್ಳಾಕುಲು ದೈವಗಳ ಕಿರುವಾಲು, ತೋಟದ ಮೂಲೆ ಸ್ಥಾನದಿಂದ ರುದ್ರಚಾಮುಂಡಿ ದೈವದ ಕಿರುವಾಲು ಹೊರಟು ಮೂರುಕಲ್ಲಡ್ಕದಲ್ಲಿ ಏಕತ್ರಗೊಂಡು ಕಲ್ಲಮಾಡಕ್ಕೆ ತೆರಳಿ ಅಯ್ಯನಕಟ್ಟೆ ಕಲ್ಲಮಾಡದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ದೈವದ ಸಿರಿಮುಡಿ ಏರಿ ಕಾಲಾವಧಿ ನೇಮ, ಬಳಿಕ ಬಟ್ಟಲು ಕಾಣಿಕೆ, ಸಿರಿಮುಡಿ ಗಂಧ ಪ್ರಸಾದ ವಿತರಣೆಯಾಗಿ ತದನಂತರ, ಕೊಡಮಣಿತ್ತಾಯ, ಕೊಲ್ಲಿಕುಮಾರ, ಪುರುಷ ದೈವ, ಮೈಸಂದಾಯ ದೈವಗಳ ಕಟ್ಟುಕಟ್ಟಳೆಯ ನೇಮ, ಬೂಳ್ಯ ವಿತರಣೆ ನಡೆಯಿತು.

ಬಳಿಕ ರುದ್ರಚಾಮುಂಡಿ ದೈವದ ನೇಮೋತ್ಸವ, ಬೂಳ್ಯ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು. ಜ. 29ರಂದು ಬೆಳಿಗ್ಗೆ ತಂಟೆಪಾಡಿ ಶಿರಾಡಿ ದೈವದ ಭಂಡಾರ ಹೊರಡುವುದು, ಕಳಂಜ ಗುತ್ತಿನಿಂದ ಧೂಮಾವತಿ ದೈವದ ಬಂಡಾರ ಹೊರಡುವುದು ಮತ್ತು ಮೂರುಕಲ್ಲಡ್ಕ ದೈವಸ್ಥಾನದಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಟು ಕಲ್ಲಮಾಡದಲ್ಲಿ ಮೂರು ದೈವಗಳ ಕಾಲಾವಧಿ ನೇಮ(ತಿರ್ತನೇಮೊ), ಬೂಳ್ಯ ವಿತರಣೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಬಳಿಕ 2.30ರಿಂದ ಕಲ್ಲಮಾಡದಲ್ಲಿ ಶಿರಾಡಿ ದೈವದ ದೊಂಪದ ಬಲಿನೇಮ ನಡೆದು ಮಾರಿ ಹೊರಡಲಿದೆ. ಸಂಜೆಯ ವೇಳೆ ಬೆಳ್ಳಾರೆ ಸಮೀಪದ ತಂಬಿನಮಕ್ಕಿಯಲ್ಲಿ ಗೌರಿಹೊಳೆಯ ಸಮೀಪ ಬಲಿಸಮರ್ಪಣೆಯಾಗಿ ನಾಲ್ಕುದಿನಗಳ ಅಯ್ಯನಕಟ್ಟೆ ಜಾತ್ರೆ ಸಂಪನ್ನಗೊಳ್ಳುತ್ತದೆ.