ವಳಲಂಬೆ ನೇಮಕಕ್ಕೆ ಬಿಜೆಪಿಯಲ್ಲಿ ಅಸಮಾಧಾನ

0

ಪಕ್ಷದ ವರಿಷ್ಠರ ಗಮನಕ್ಕೆ ತರಲು ಸಭೆ ನಡೆಸುತ್ತಿರುವ ನಾಯಕರು, ಕಾರ್ಯಕರ್ತರು



ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರನ್ನಾಗಿ ವೆಂಕಟ್ ವಳಲಂಬೆಯವರ ನೇಮಕದಿಂದ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ. ಮಂಡಲ ಸಮಿತಿಯಿಂದ ಚರ್ಚೆ ನಡೆಸಿ ವಿನಯ್ ಮುಳುಗಾಡು ಅವರ ಹೆಸರನ್ನು ಜಿಲ್ಲಾ ಸಮಿತಿಗೆ ಕಳುಹಿಸಲಾಗಿದ್ದರೂ ಪಟ್ಟಿಯಲ್ಲಿ ಇಲ್ಲದ ವೆಂಕಟ್ ವಳಲಂಬೆಯವರನ್ನು ಮಂಡಲಾಧ್ಯಕ್ಷರನ್ನಾಗಿ ನೇಮಿಸಿರುವುದು ಸರಿಯಲ್ಲ ಎಂದು ಪ್ರತಿಪಾದಿಸುತ್ತಿರುವ ಸುಳ್ಯ ಕ್ಷೇತ್ರದ ಬಿಜೆಪಿ ನಾಯಕರು ಫೆ. 3 ರಂದು ರಾತ್ರಿ ಸಭೆ ನಡೆಸಿ ಚರ್ಚಿಸಿದರು.

ಇಂದು ಅಪರಾಹ್ನ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಪ್ರತಿ ಗ್ರಾಮಗಳಿಂದ ಕಾರ್ಯಕರ್ತರು ಆಗಮಿಸುವಂತೆ ಅವರು ಸಂದೇಶ ನೀಡಿದ ಹಿನ್ನಲೆಯಲ್ಲಿ ಇದೀಗ ಬಹುತೇಕ ಪ್ರಮುಖ ಬಿಜೆಪಿ ಕಾರ್ಯಕರ್ತರು ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಭೆ ಸೇರಿದ್ದಾರೆ.

ಮಂಡಲ ಸಮಿತಿಯ ಮೇಲೆ ಪರಿವಾರದ ನಾಯಕರು ನಿರ್ಧಾರಗಳನ್ನು ಹೇರಿಕೆ ಮಾಡುತ್ತಿರುವುದು ಸರಿಯಲ್ಲವೆಂದು ಹೇಳುತ್ತಿರುವ ನಾಯಕರು ಈಗ ಮಾಡಿರುವ ನೇಮಕಾತಿಯನ್ನು ಬದಲಾಯಿಸಬೇಕೆಂದು ಹೇಳುತ್ತಿರುವುದಾಗಿಯೂ, ಇವರ ಈ ಒತ್ತಡಕ್ಕೆ ಜಿಲ್ಲಾ ಬಿಜೆಪಿ ನಾಯಕರು ಮಣಿಯುವರೇ ಎಂದು ಕಾದುನೋಡಬೇಕೆಂದೂ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳ ಬಗ್ಗೆ ಸಭೆ ಮುಗಿದ ಬಳಿಕವಷ್ಟೇ ತಿಳಿಯಬಹುದಾಗಿದೆ.