ಸರಣಿ ಹಲ್ಲು ಕೀಳುವಿಕೆ

0

ಸರಣಿ ಹಲ್ಲು ಕೀಳುವಿಕೆ ಎನ್ನುವುದು ಒಂದು ವಿಶೇಷವಾದ ಪೂರ್ವ ನಿರ್ಧಾರಿತ ಹಲ್ಲು ಕೀಳುವಿಕೆಯಾಗಿದ್ದು, ನಿಗದಿತವಾದ ಕ್ರಮಾಂಕದಲ್ಲಿ ನಿಗದಿತ ಹಲ್ಲುಗಳನ್ನು ನಿರ್ದಿಷ್ಟ ಸಮಯದಲ್ಲಿ ಕಿತ್ತು, ಮುಂದೆ ಬರಲಿರುವ ಶಾಶ್ವತ ಹಲ್ಲುಗಳಿಗೆ ಸರಿಯಾದ ಜಾಗ ಮಾಡಿಕೊಡುವ ವಿಶೇಷ ಪ್ರಕ್ರಿಯೆಯಾಗಿರುತ್ತದೆ. ಸ್ವೀಡನ್ ದೇಶದ ಕೆಲ್‍ಗ್ರೇನ್ ಎಂಬಾತ ಮೊದಲ ಬಾರಿಗೆ ಸೀರಿಯಲ್ ಎಕ್ಟ್ರಾಕ್ಷನ್ ಎಂಬ ಪದ ಬಳಸಿದವನು. ಮುಂದೆ 1940 ರಲ್ಲಿ ಅಮೇರಿಕಾದಲ್ಲಿ ಹೇಸ್ ನಾನ್ಸ್ ಎಂಬಾತ ಇದನ್ನೆ ಯೋಜಿತ ಮತ್ತು ಮುಂದಾಲೋಚನೆಯ ಹಲ್ಲು ಕೀಳುವಿಕೆ ಎಂಬ ಶಬ್ದವನ್ನು ಬಳಸಿ, ಈ ಸರಣಿ ಹಲ್ಲು ಕೀಳುವಿಕೆಯನ್ನು ಹೆಚ್ಚು ಪ್ರಸಿದ್ಧಿ ಮತ್ತು ಪ್ರಚಲಿತವಾಗುವಂತೆ ಮಾಡಿದನು. ಈ ಕಾರಣದಿಂದಲೇ ನಾನ್ಸ್ ಅವರನ್ನು “ಸರಣಿ ಹಲ್ಲು ಕೀಳುವಿಕೆಯ ಪಿತಾಮಹ” ಎಂದೂ ಕರೆಯುತ್ತಾರೆ.

ಏನಿದು ಸರಣಿ ಹಲ್ಲು ಕೀಳುವಿಕೆ?

ಸಾಮಾನ್ಯವಾಗಿ ಹಲ್ಲು ಕೀಳುವುದು ಹಲ್ಲು ದಂತ ಕ್ಷಯದಿಂದ ಹಾಳಾಗಿ ಹಲ್ಲು ನೋವು ಬಂದಾಗ ಮಾತ್ರ. ಅಷ್ಟಕ್ಕೂ ಹಲ್ಲು ನೋವು ಬಂದು ಹಲ್ಲು ಪೂರ್ತಿ ಕ್ಷಯಿಸಿ ಹೋಗಿ, ಬೇರುನಾಳ ಚಿಕಿತ್ಸೆ ಮಾಡಲು ಸಾಧ್ಯವಾಗದಿದ್ದಲ್ಲಿ ಮಾತ್ರ ಹಲ್ಲು ತೆಗೆಯಲಾಗುತ್ತದೆ. ಆದರೆ ಈ ಸರಣಿ ಹಲ್ಲು ಕೀಳುವಿಕೆಯಲ್ಲಿ ದಂತ ಕ್ಷಯವಾಗದ ಹಲ್ಲುಗಳನ್ನೂ ಕೀಳಲಾಗುತ್ತದೆ. ಸಾಮಾನ್ಯವಾಗಿ 8 ರಿಂದ 12 ರ ವಯಸ್ಸಿನಲ್ಲಿ ಈ ಪ್ರಕ್ರಿಯೆ ಮಾಡಲಾಗುತ್ತದೆ. ಇದೊಂದು ಬಹಳ ಪೂರ್ವ ನಿಯೋಜಿತ, ಪೂರ್ವ ನಿರ್ಧಾರಿತ ಮತ್ತು ಸಾಕಷ್ಟು ವಿಚಾರಗಳನ್ನು ಮಾಡಿಯೇ ಮಾಡುವ ಕೆಲಸವಾಗಿರುತ್ತದೆ. ಇದರಲ್ಲಿ ಹಾಲು ಹಲ್ಲು ಮತ್ತು ಶಾಶ್ವತ ಹಲ್ಲು ಎರಡನ್ನೂ ಕೀಳಲಾಗುತ್ತದೆ. ನಿಗದಿತ ಸರದಿಯಲ್ಲಿ ಹಲ್ಲು ಕಿತ್ತು ಮುಂದೆ ಹುಟ್ಟಲಿರುವ ಶಾಶ್ವತ ಹಲ್ಲುಗಳಿಗೆ ಬರಲು ಜಾಗ ಮಾಡಿಕೊಡುವ ಪ್ರಕ್ರಿಯೆ ಇದಾಗಿರುತ್ತದೆ. ಈ ಸರಣಿ ಹಲ್ಲು ಕೀಳುವಿಕೆಯನ್ನು ದಂತ ವೈದ್ಯರು, ಮಕ್ಕಳ ಹಲ್ಲಿನ ತಜ್ಞರು ಮತ್ತು ವಕ್ರದಂತ ತಜ್ಞರು ಒಟ್ಟು ಗೂಡಿ ಸಾಕಷ್ಟು ಅಧ್ಯಯನ ಮಾಡಿ ಮಾಡುತ್ತಾರೆ. ಇದರಲ್ಲಿ ನಾಲ್ಕಾರು ರೀತಿಯ ತಂತ್ರಗಳಿದೆ. ಯಾವ ಮಗುವಿಗೆ ಯಾವ ರೀತಿಯ ಸರಣಿಯಲ್ಲಿ ಯಾವ ಹಲ್ಲು ಕೀಳ ಬೇಕು, ಯಾವಾಗ ಕೀಳಬೇಕು ಎಂಬುದನ್ನು ದಂತ ವೈದ್ಯರೇ ನಿರ್ಧರಿಸುತ್ತಾರೆ. ಈ ಸರಣಿ ಹಲ್ಲು ಕೀಳುವಿಕೆಯಲ್ಲಿ ಎರಡು ಹಾಲು ಹಲ್ಲು ಮತ್ತು ಒಂದು ಶಾಶ್ವತ ಹಲ್ಲನ್ನು ಕೀಳಲಾಗುತ್ತದೆ. ಒಟ್ಟು ಮೂರು ಹಲ್ಲನ್ನು ಕೀಳಲಾಗುತ್ತದೆ. ಯಾವ ಹಲ್ಲು ಯಾವ ವಯಸ್ಸಿಗೆ ಬಾಯಿಯಲ್ಲಿ ಮೂಡುತ್ತದೆ ಎಂಬ ಸಾಮಾನ್ಯ ಜ್ಞಾನದ ನೆರವಿನಿಂದ ಸುಮಾರು 8 ರಿಂದ 9 ರ ವಯಸ್ಸಿನಲ್ಲಿ ಕೋರೆ ಹಾಲು ಹಲ್ಲುಗಳನ್ನು ಮೊದಲಾಗಿ ಕೀಳಲಾಗುತ್ತದೆ. ಹೀಗೆ ಮಾಡುವುದರಿಂದ ಶಾಶ್ವತ ಬಾಚಿ ಹಲ್ಲುಗಳು ಸರಿಯಾದ ಜಾಗದಲ್ಲಿ ಮೂಡಲು ಜಾಗವನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಶಾಶ್ವತ ಬಾಚಿ ಹಲ್ಲುಗಳು ಸರಿಯಾದ ಜಾಗದಲ್ಲಿ ಹುಟ್ಟುತ್ತದೆ ಮತ್ತು ಅವುಗಳು ಹುಟ್ಟಲು ಸಾಕಷ್ಟು ಜಾಗ ಸಿಗುತ್ತದೆ. ಇದಾದ ಒಂದು ವರ್ಷದ ಬಳಿಕ ಮೊದಲನೇ ದವಡೆ ಹಾಲು ಹಲ್ಲನ್ನು ಕೀಳಲಾಗುತ್ತದೆ. ಹೀಗೆ ಮಾಡುವುದರಿಂದ ಶಾಶ್ವತ ಕೋರೆ ಹಲ್ಲಿಗಿಂತ ಬಹಳ ಮೊದಲೇ ಮೊದಲನೇ ಮುಂದವಡೆ ಹಲ್ಲು ಹುಟ್ಟಲು (ಪ್ರೀಮೋಲಾರ್) ಜಾಗ ಮಾಡಿಕೊಡಲಾಗುತ್ತದೆ. ಹೀಗೆ ಬೇಗನೆ ಹುಟ್ಟಿದ ಮೊದಲನೇ ಮುಂದವಡೆ ಶಾಶ್ವತ ಎಲ್ಲವನ್ನೂ ಮುಂದೆ ಶಾಶ್ವತ ಕೋರೆಹಲ್ಲು ಹುಟ್ಟುವ ಸಮಯದಲ್ಲಿ ಕೀಳಲಾಗುತ್ತದೆ. ಹೀಗೆ ಮೊದಲನೇ ಶಾಶ್ವತ ಮುಂದವಡೆ ಹಲ್ಲು ಕಿತ್ತಾಗ ಶಾಶ್ವತ ಕೋರೆ ಹಲ್ಲುಗಳಿಗೆ ಸರಿಯಾದ ಜಾಗ ಮತ್ತು ದಿಶೆ ಸಿಕ್ಕಿ ಸರಿಯಾದ ಜಾಗದಲ್ಲಿ ಹಲ್ಲುಗಳು ಹುಟ್ಟುತ್ತದೆ. ಇದನ್ನೇ ಸರಣಿ ಹಲ್ಲು ಕೀಳುವಿಕೆ ಎನ್ನುತ್ತಾರೆ. ಹೀಗೆ ಮಾಡುವುದರಿಂದ ಹಲ್ಲುಗಳು ವಕ್ರವಾಗಿ ಹುಟ್ಟುವುದನ್ನು ತಪ್ಪಿಸಬಹುದಾಗಿದೆ. ಈ ಸರಣಿ ಹಲ್ಲು ಕೀಳುವಿಕೆಯನ್ನು ಸುಮಾರು 8 ರಿಂದ 11 ವರ್ಷಗಳ ನಡುವೆ ಮಾಡುತ್ತಾರೆ.

ಲಾಭಗಳು ಏನು?

ಇದೊಂದು ರೀತಿಯ ನೈಸರ್ಗಿಕವಾದ ಜನಸ್ನೇಹಿಯಾದ ತಂತ್ರವಾಗಿದ್ದು, ಹಲ್ಲು ಹುಟ್ಟುವ ಸಮಯ ಮತ್ತು ಹಲ್ಲುಗಳು ಹುಟ್ಟಿದ ಆರ್ಡರ್ ಅಥವಾ ಅನುಕ್ರಮಗಳ ಆಧಾರದಲ್ಲಿ ಮಾಡುವ ಚಿಕಿತ್ಸೆ ಆಗಿರುತ್ತದೆ.
1) ಮಗುವಿನ ಆತ್ಮವಿಶ್ವಾಸ ಹೆಚ್ಚುತ್ತದೆ. ಸಣ್ಣ ವಯಸ್ಸಿನಲ್ಲಿ ಹಲ್ಲುಗಳು ಅಡ್ಡಾದಿಡ್ಡಿಯಾಗಿ ಬೆಳೆದು ಮಗುವಿಗೆ ಮಾನಸಿಕವಾಗಿ ಜರ್ಜರಿತವಾಗದಂತೆ ರಕ್ಷಿಸುತ್ತದೆ.
2) ಮುಂದೆ ವಕ್ರದಂತ ಚಿಕಿತ್ಸೆ ಬೇಕಾದರೂ ಅದರ ಚಿಕಿತ್ಸೆಯ ಅವದಿಯನ್ನು ಕಡಿಮೆ ಮಾಡುತ್ತದೆ.
3) ಕಡಿಮೆ ಖರ್ಚಿನ ಚಿಕಿತ್ಸೆಯಾಗಿರುತ್ತದೆ.
4) ಹೆಚ್ಚಿನ ಸಂದರ್ಭಗಳಲ್ಲಿ ಬಹಳ ಉತ್ತಮ ಫಲಿತಾಂಶ ಸಿಗುತ್ತದೆ ಮತ್ತು ಮಗುವಿನ ಬೆಳವಣಿಗೆಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ.
5) ಮಕ್ಕಳ ಬಾಯಿಯ ಆರೋಗ್ಯ ವೃಧ್ದಿಸುತ್ತದೆ. ದಂತಕ್ಷಯದ ಸಾಧ್ಯತೆಯನ್ನು ಕ್ಷ್ಷೀಣಿಸುತ್ತದೆ.
6) ಕಡಿಮೆ ಅವಧಿಯ ಚಿಕಿತ್ಸೆ ಇದಾಗಿದ್ದು, ಮಗು ನಿರಂತರವಾಗಿ ದಂತ ವೈದ್ಯರ ಬಳಿ ಕಾಲಕಾಲಕ್ಕೆ ನಿಯಮಿತವಾಗಿ ಬರಲೇಬೇಕಾದ ಅನಿವಾರ್ಯತೆಯಿಂದಾಗಿ ಮಕ್ಕಳ ಬಾಯಿಯ ಆರೋಗ್ಯ ಉನ್ನತ ಮಟ್ಟದಲ್ಲಿರುವಂತೆ ಮಾಡುತ್ತದೆ.

ತೊಂದರೆಗಳು:

1) ರೋಗಿಗಳು ನಿರಂತರವಾಗಿ 8 ರಿಂದ 11 ವರ್ಷದ ಅವಧಿಗೆ ದಂತ ವೈದ್ಯರ ಬಳಿಗೆ 4 ವರ್ಷಗಳ ಕಾಲ ಬರಲೇಬೇಕು.
2) ಈ ಸರಣಿ ಹಲ್ಲು ಕೀಳುವಿಕೆಯಲ್ಲಿ ದಂತಕ್ಷಯವಾಗದ ಹಲ್ಲನ್ನು ಕೀಳಲಾಗುತ್ತದೆ ಮತ್ತು ಇದರಲ್ಲಿ ಹಲವಾರು ತಂತ್ರಗಳಿದ್ದು ಯಾವ ಮಗುವಿಗೆ ಯಾವ ರೀತಿಯ ತಂತ್ರ ಬಳಸಬೇಕು ಎಂದು ಮಗುವಿನ ಹಲ್ಲಿನ ಗಾತ್ರ, ದವಡೆಗಾತ್ರ ಮತ್ತು ದಂತ ಕ್ಷ ಕಿರಣ ತೆಗೆದ ನಂತರವೇ ನಿರ್ಧರಿಸಬೇಕಾಗುತ್ತದೆ. ಕೆಲವೊಮ್ಮೆ ನಿಗಧಿತ ಹಲ್ಲುಗಳಿಗಿಂತ ಬೇರೆ ಹಲ್ಲನ್ನೂ ಕೀಳಬೇಕಾಗಹುದು.
3) ಮಕ್ಕಳ ಸಹಭಾಗಿತ್ವ ಮತ್ತು ಹೆತ್ತವರ ಸಹಕಾರ ಈ ಚಿಕಿತ್ಸೆಗೆ ಅತೀ ಅಗತ್ಯ.

ಕೊನೆಮಾತು:

ಸರಣಿ ಹಲ್ಲು ಕೀಳುವಿಕೆ ಎನ್ನುವುದು ಒಂದು ಪೂರ್ವ ನಿರ್ಧಾರಿತ ಮತ್ತು ಪೂರ್ವ ನಿಗದಿತ ಪ್ರಕ್ರಿಯೆಯಾಗಿದ್ದು ಮಕ್ಕಳು, ಹೆತ್ತವರು ಮತ್ತು ವೈದ್ಯರ ನಡುವೆ ಸಾಕಷ್ಟು ಸಂವಹನ ಮತ್ತು ಹೊಂದಾಣಿಕೆ ಇರಬೇಕಾಗುತ್ತದೆ. ಎಲ್ಲಾ ಮಕ್ಕಳಿಗೂ ಈ ಸರಣಿ ಹಲ್ಲು ಕೀಳುವಿಕೆ ಬೇಕಾಗುವುದಿಲ್ಲ. ಮಗುವಿನ ಹಲ್ಲಿನ ಗಾತ್ರ, ಹಲ್ಲಿನ ವಯಸ್ಸು, ಜೈವಿಕ ವಯಸ್ಸು, ದವಡೆಗಾತ್ರ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ನಿರ್ಧರಿಸಲಾಗುತ್ತದೆ. ಸರಿಯಾದ ಸಮಯದಲ್ಲಿ ತಜ್ಞ ದಂತವೈದ್ಯರು ಮತ್ತು ವಕ್ರದಂತ ತಜ್ಞರ ಮಾರ್ಗದರ್ಶನದಲ್ಲಿ ಈ ಸರಣಿ ಹಲ್ಲು ಕೀಳುವಿಕೆ ಪ್ರಕ್ರಿಯೆ ನಡೆದಲ್ಲಿ ಮಕ್ಕಳ ಶಾಶ್ವತ ಹಲ್ಲುಗಳು ಮೂಡುವ ಸಮಯದಲ್ಲಿ ಸಾಕಷ್ಟು ಜಾಗ ದೊರಕಿ ಅವುಗಳು ಅದರ ಜಾಗದಲ್ಲಿಯೇ ಬರುವ ಸಾಧ್ಯತೆ ಹೆಚ್ಚಾಗುತ್ತದೆ ಮತ್ತು ಮುಂದೆ ವಕ್ರದಂತ ಚಿಕಿತ್ಸೆಯ ಅಗತ್ಯ ಇರುವುದಿಲ್ಲ. ಈ ಮೊದಲೇ ತಿಳಿಸಿದಂತೆ ಎಲ್ಲಾ ಮಕ್ಕಳಿಗೂ ಈ ಚಿಕಿತ್ಸೆ ಅಗತ್ಯವಿಲ್ಲ. ಅಧ್ಯಯನಗಳ ಪ್ರಕಾರ 10 ಶೇಕಡಾ ಮಕ್ಕಳಿಗೆ ಇದರ ಅವಶ್ಯಕತೆ ಇರುತ್ತದೆ ಎಂದು ತಿಳಿದುಬಂದಿದೆ. ಮೇಲಿನ ದವಡೆ ಮತ್ತು ಕೆಳಗಿನ ದವಡೆ ಎರಡರಲ್ಲೂ ಈ ಸರಣಿ ಹಲ್ಲು ಕೀಳುವಿಕೆ ಮಾಡಬಹುದಾಗಿದ್ದು, ಹೆಚ್ಚಾಗಿ ಮೇಲಿನ ದವಡೆಯಲ್ಲಿ ಇದರ ಅಗತ್ಯ ಇರುತ್ತದೆ. ಆದರೆ ಶಾಶ್ವತ ಹಲ್ಲುಗಳು ದವಡೆಯಲ್ಲಿ ಇಲ್ಲದೇ ಇದ್ದ ಪಕ್ಷದಲ್ಲಿ ಈ ಸರಣಿ ಹಲ್ಲು ಕೀಳುವಿಕೆ ಮಾಡಲೇ ಬಾರದು. ಈ ಕಾರಣದಿಂದ ಸರಣಿ ಹಲ್ಲು ಕೀಳುವಿಕೆಯನ್ನು ಮಾಡಲು ದಂತ ಕ್ಷ ಕಿರಣ ಪರೀಕ್ಷೆ ಅತೀ ಅಗತ್ಯ. ಈ ಸರಣಿ ಹಲ್ಲು ಕೀಳುವಿಕೆ ಪ್ರಕ್ರಿಯೆಗೆ 4 ರಿಂದ 5 ವರ್ಷಗಳ ಕಾಲ ದಂತ ವೈದ್ಯರ ಮೇಲುಸ್ತುವಾರಿ ಅತೀ ಅಗತ್ಯ. ಸರಿಯಾದ ಮಾರ್ಗದರ್ಶನ ಇಲ್ಲದೆ ಈ ಪ್ರಕ್ರಿಯೆ ಮಾಡಿದಲ್ಲಿ ಹಲ್ಲುಗಳು ಓರೆಕೋರೆಯಾಗಿ ಬೆಳೆದು ಮತ್ತಷ್ಟು ಹೆಚ್ಚಿನ ಸಮಸ್ಯೆಗಳಿಗೆ ಕಾರಣವಾಗಲೂಬಹುದು.
ಡಾ|| ಮುರಲೀ ಮೋಹನ್‍ಚೂಂತಾರು