ಐವರ್ನಾಡು : ಸೌಜನ್ಯ ಪರ ಹೋರಾಟ ಸಮಿತಿಯಿಂದ ನಡೆದ ಪ್ರತಿಭಟನೆಯ ವರದಿ ಪ್ರಸಾರ

0

ಕುಂದಾಪುರದ ಯೂಟ್ಯೂಬ್ ಸಂಪಾದಕನ ಮೇಲೆ ಕೇಸು

ತನಿಖೆಗೆ ಐವರ್ನಾಡಿಗೆ ಬಂದ ಬೆಳ್ತಂಗಡಿ ಪೊಲೀಸರು

ಮಹಜರು ವೇಳೆ ಗ್ರಾಮಾಭಿವೃದ್ಧಿ ಅಧಿಕಾರಿಗಳಿಗೆ ಸೌಜನ್ಯ ಪರವಾಗಿರುವ ಊರವರ ಮುತ್ತಿಗೆ

ಐವರ್ನಾಡಿನಲ್ಲಿ ಕೆಲ ತಿಂಗಳ ಹಿಂದೆ ಸೌಜನ್ಯ ಪರ ಹೋರಾಟ ಸಮಿತಿಯ ವತಿಯಿಂದ ನಡೆದ ಪ್ರತಿಭಟನೆಯ ಸಂದರ್ಭ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಜಾತಿ ನಿಂದನೆ ಮಾಡಲಾಗಿದೆ ಎಂದು ಕೇಸು ದಾಖಲಾದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ಫೆ. 9 ರಂದು ಸ್ಥಳ ಪರಿಶೀಲನೆಗಾಗಿ ಐವರ್ನಾಡಿಗೆ ಬಂದಿದ್ದರು.

ಕೆಲ ತಿಂಗಳ ಹಿಂದೆ ಐವರ್ನಾಡಿನಲ್ಲಿ ಸೌಜನ್ಯಪರ ಪ್ರತಿಭಟನಾ ಸಭೆ ನಡೆದಿತ್ತು. ಅಂದು ಕುಂದಾಪುರ ಮೂಲದ ಪ್ರಶಾಂತ ಎಂಬವರ ಯೂಟ್ಯೂಬ್ ಚಾನೆಲ್ ಒಂದು ಜನರ ಸಂದರ್ಶನ ನಡೆಸಿ ಕಾರ್ಯಕ್ರಮ ಬಿತ್ತರಿಸಿತ್ತು. ಈ ಸಂದರ್ಶನದ ತುಣುಕಿನಲ್ಲಿ ಜೈನ ಸಮುದಾಯವನ್ನು ನಿಂದನೆ ಮಾಡಲಾಗಿತ್ತೆಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಸಂತೋಷ್ ಎಂಬವರು ಬೆಳ್ತಂಗಡಿ ಪೋಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ಸ್ಥಳ ಮಹಜರು ನಡೆಸಲು ಫೆ.9 ರಂದು ಬೆಳ್ತಂಗಡಿ ಪೊಲೀಸರು ಐವರ್ನಾಡಿಗೆ ಬಂದಾಗ ಯೂಟ್ಯೂಬ್ ನ ಪ್ರಶಾಂತ್ ಕೂಡ ಬಂದಿದ್ದರು.
ಈ ಸಂದರ್ಭ ಸುಳ್ಯದ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಕೂಡ ಬೆಳ್ತಂಗಡಿಯಿಂದ ಪೋಲೀಸರೊಂದಿಗೆ ಆಗಮಿಸಿದ್ದರು. ಅಲ್ಲದೆ ಐವರ್ನಾಡು ಬೆಳ್ಳಾರೆಯ ಗ್ರಾಮಾಭಿವೃದ್ಧಿ ಯೋಜನೆಯ ಕೆಲವು ಅಧಿಕಾರಿಗಳೂ ಸ್ಥಳಕ್ಕೆ ಬಂದಿದ್ದರು.
ಇವರಿಗೆ ಗ್ರಾಮಸ್ಥರು ದಿಗ್ಬಂದನ ಹಾಕಿದರು.

ಸೌಜನ್ಯಪರ ಊರವರಿಂದ ತರಾಟೆ

ಆ ಸಂದರ್ಭದಲ್ಲಿ ಸೌಜನ್ಯಪರವಾಗಿರುವ ಗ್ರಾಮಸ್ಥರು ಜಮಾಯಿಸಿ ಪೋಲೀಸರನ್ನು ಮತ್ತು ಗ್ರಾಮಾಭಿವೃದ್ಧಿಯವರನ್ನು ತರಾಟೆಗೆತ್ತಿಕೊಂಡ ಘಟನೆ ನಡೆಯಿತು.
ಪೊಲೀಸರು ಮಹಜರು ನಡೆಸಲು ಬರುವಾಗ ನೀವು ಬರುವ ಅಗತ್ಯವೇನು ? ಎಂದು ಗ್ರಾಮಾಭಿವೃದ್ಧಿಯವರನ್ಬೂ, ಪೋಲೀಸರು ಮಾತ್ರ ಬರುವುದು ಬಿಟ್ಟು ಗ್ರಾಮಾಭಿವೃದ್ಧಿಯವರನ್ನು ಕರೆದುಕೊಂಡು ಬಂದುದೇಕೆ ? ಎಂದು ಪೋಲೀಸರನ್ನೂ ಜನರು ಪ್ರಶ್ನಿಸಿದರು. ಸೌಜನ್ಯ ಪರ ಪ್ರತಿಭಟನಾ ಸಭೆ ಆಯೋಜನೆಯಲ್ಲಿ ಮುಂಚೂಣಿಯಲ್ಲಿದ್ದ ನಂದ ಕುಮಾರ್, ರಾಜೇಶ್ ನೆಕ್ರೆಪ್ಪಾಡಿ, ರಮೇಶ್ ಮಿತ್ತಮೂಲೆ ಮತ್ತಿತರರು ತರಾಟೆಗೆತ್ತಿಕೊಂಡ ಜನರ ನೇತೃತ್ವ ವಹಿಸಿದ್ದರೆಂದೂ ತಿಳಿದುಬಂದಿದೆ.