ಕೊಡಗು ಸಂಪಾಜೆಯ ಬೈಲಿನ ಮನೆಯಲ್ಲಿ ಕಳವು ಪ್ರಕರಣ

0

ಸಮೀಪದ ಅಂಗಡಿಯ ಬಳಿಯವರೆಗೆ ಓಡಿದ ಪೊಲೀಸ್ ಶ್ವಾನ – ಅನುಮಾನಕ್ಕೆ ಎಡೆಮಾಡಿದ ಕೆಂಪು ಬಣ್ಣದ ಕಾರು

ಕೊಡಗು ಸಂಪಾಜೆ ಗ್ರಾಮದ ಬೈಲು ವಿಜಯಕುಮಾರ್ ಕನ್ಯಾನ ಅವರ ಮನೆಯಲ್ಲಿ ಫೆ.8ರಂದು ಹಗಲು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾತ್ರಿಯೇ ಪೊಲೀಸ್ ಶ್ವಾನ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದು, ಈ ದಾರಿಯಲ್ಲಿ ಹಗಲು ಹೊತ್ತಿನಲ್ಲಿ ಬಂದ ಕಾರೊಂದು ಸ್ಥಳೀಯರ ಅನುಮಾನಕ್ಕೆ ಎಡೆಮಾಡಿದೆ.

ರಾತ್ರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸ್ ಶ್ವಾನ ಮನೆಯೊಳಗಿನಿಂದ ಮನೆಯ ಹಿಂಬದಿ ಮೂಲಕ ತೆರಳಿ ಮನೆಯ ಬಲಭಾಗದಿಂದಾಗಿ ರಸ್ತೆಗೆ ಹೋಗಿ ಸಮೀಪದ ದಯಾನಂದ ಎಂಬವರ ಅಂಗಡಿಯ ತನಕ ಬಂದಿದ್ದು, ಪೆ.8ರಂದು ಅಪರಾಹ್ನ ಕೆಂಪು ಬಣ್ಣದ ಕಾರು ವಿಜಯಕುಮಾರ್ ಅವರ ಮನೆಗೆ ತೆರಳುವ ಮುಖ್ಯರಸ್ತೆಯ ಮೂಲಕ ಬಂದಿದ್ದು, ಕಾರಿನಲ್ಲಿದ್ದವರು ಈ ರಸ್ತೆಯಲ್ಲಿರುವ ದಯಾನಂದ ಎಂಬವರ ಅಂಗಡಿಯ ಸಮೀಪ ಕಾರು ನಿಲ್ಲಿಸಿ, ಕುಡಿಯುವ ನೀರಿನ ಬಾಟಲಿ ಖರೀದಿಸಿ, ತೆರಳಿದ್ದು, ಕಾರು ಮಡಿಕೇರಿ ರಿಜಿಸ್ರ್ರೇಷನ್ ಆಗಿದ್ದು, ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಮಲಯಾಳಂ ಭಾಷೆ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ.

ವಿಜಯಕುಮಾರ್ ಅವರ ಮನೆಗೆ ರಾತ್ರಿ ಬಂದ ಪೊಲೀಸ್ ಶ್ವಾನ ಮನೆಯೊಳಗಿನಿಂದ ಇದೇ ದಯಾನಂದ ಎಂಬವರ ಅಂಗಡಿಯವರೆಗೆ ಓಡಿ ಬಂದು ನಿಂತಿದ್ದು, ಕಾರಿನಲ್ಲಿ ಬಂದ ವ್ಯಕ್ತಿಗಳೇ ಕಳವು ನಡೆಸಿರಬಹುದೇ ಎಂದು ಸ್ಥಳೀಯರಿಗೆ ಅನುಮಾ‌ನ ಮೂಡಿಸಿದೆ. ಈ ಆಧಾರದಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕಳವು ನಡೆಸಲು ಬಂದ ಕಳ್ಳರು ಮನೆಯ ಮುಂಭಾಗದ ಗೇಟಿನ ಮೂಲಕ ಬರದೇ, ಒಳ ದಾರಿಯ ಮೂಲಕ ಬಂದು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ವಿಜಯಕುಮಾರ್ ಕನ್ಯಾನ ಅವರು ಬೆಳಿಗ್ಗೆ ಮನೆಯ ಮುಂಭಾಗದ ಗೇಟಿಗೆ ಬೀಗ ಹಾಕಿ ತೆರಳಿದ್ದರು. ಕಳವು ನಡೆಸಲು ಬಂದ ಕಳ್ಳರು ಮುಂಭಾಗದ ಗೇಟ‌ನ್ನು ಮುಟ್ಟದೇ, ಮನೆಯ ಬದಿಯಲ್ಲಿ ಒಳದಾರಿಯಾಗಿ ಬಂದು, ಕಳವು ಕೃತ್ಯ ಎಸಗಿದ್ದು, ಮನೆಯ ಹಿಂಬದಿಯಲ್ಲಿ ನಾಯಿಯನ್ನು ಗೂಡಿನಲ್ಲಿ ಕಟ್ಟಿ ಹಾಕಿದ್ದು, ಆ ಕಡೆಗೆ ತೆರಳದೇ, ಮನೆಯ ಬದಿಯಿಂದ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಈ. ವೇಳೆ ಮನೆಯ ಹಿಂದೆ ಅಂಗಳದಲ್ಲಿ ಇದ್ದ, ಮನೆಯವರ ಒಂದು ಚಪ್ಪಲನ್ನು ಮನೆಯ ಹೊರಗಿನ ಜಗಲಿಯಲ್ಲಿ ಬಿದ್ದುಕೊಂಡಿದ್ದು, ಇವೆಲ್ಲವೂ ಅನುಮಾನಕ್ಕೆ ಎಡೆಮಾಡಿದೆ.