ಜೀವನ್ ರಾಂ ರವರಿಗೆ ‘ಸೆಂಟರ್ ಸ್ಟೇಜ್ ಕಪ್ಪಣ್ಣ ಪ್ರಶಸ್ತಿ’ ಪ್ರದಾನ

0

ನಾಡು ಕಂಡ ಶ್ರೇಷ್ಠ ರಂಗಕರ್ಮಿ ಜೀವನ್ ರಾಂ ಸುಳ್ಯ : ಟಿ.ಎಸ್. ನಾಗಾಭರಣ ಬಣ್ಣನೆ

ರಂಗಭೂಮಿಯನ್ನೇ ಬದುಕು ಮಾಡಿಕೊಂಡವರಲ್ಲಿ ಜೀವನ್ ರಾಂ ಪ್ರಮುಖರು. ಇವರ ನಾಟಕಗಳಿಗೆ ಎಂದೂ ಪ್ರೇಕ್ಷಕರ ಕೊರತೆ ಆಗಿಲ್ಲ..ತನ್ನ ವಾಸದ ಮನೆಯನ್ನೇ ಸಾಂಸ್ಕೃತಿಕ ಕೇಂದ್ರವನ್ನಾಗಿಸಿದ ಜೀವನ್ ರಾಂ ನಾಡು ಕಂಡ ಅಪರೂಪದ ಶ್ರೇಷ್ಠ ರಂಗಕರ್ಮಿ’ ಎಂದು ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಹೇಳಿದರು.

ಅವರು ಶ್ರೀ ಮಾತಾ ಚಾರಿಟೇಬಲ್ ಟ್ರಸ್ಟ್ ಹುಳಿಯಾರು ಮತ್ತು ಸೆಂಟರ್ ಸ್ಟೇಜ್ ಬೆಂಗಳೂರು ಇವರು ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಇವರ ಹೆಸರಿನಲ್ಲಿ ಕೊಡಮಾಡುವ 2024 ನೇ ಸಾಲಿನ ಸೆಂಟರ್ ಸ್ಟೇಜ್ ಕಪ್ಪಣ್ಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿ ನಾಡೋಜ ಹಂ.ಪ.ನಾಗರಾಜಯ್ಯ ಅವರು ಸುಳ್ಯ ರಂಗಮನೆಯ ರೂವಾರಿ ಡಾ| ಜೀವನ್ ರಾಂ ಸುಳ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ರಂಗಕರ್ಮಿ, ಸಂಘಟಕ ಶ್ರೀನಿವಾಸ ಜಿ.ಕಪ್ಪಣ್ಣ, ಹಿರಿಯ ಐ.ಎ.ಎಸ್.ಅಧಿಕಾರಿ ಚಿರಂಜೀವಿ ಸಿಂಗ್, ಚಿತ್ರ ನಿರ್ದೇಶಕ ಬಿ.ಸುರೇಶ್, ಶ್ರೀ ಮಾತಾ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಗಂಗಾಧರ್ ಹುಳಿಯಾರು ಹಾಗೂ ಟ್ರಸ್ಟ್ ನ ಕಾರ್ಯದರ್ಶಿ ಚಾರುಮತಿ ಪ್ರಕಾಶನದ ಬಿ.ಎಸ್.ವಿದ್ಯಾರಣ್ಯ, ರಂಗಕರ್ಮಿ ಶಶಿಧರ ಭಾರಿಘಾಟ್, ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ಮುಂತಾದವರು ಉಪಸ್ಥಿತರಿದ್ದರು.
ಪ್ರಶಸ್ತಿಯು ಫಲಕ ,ಆಕರ್ಷಕ ಸ್ಮರಣಿಕೆ ಹಾಗೂ ರೂ.50 ಸಾವಿರ ನಗದು ಒಳಗೊಂಡಿತ್ತು.