ಫೆ. 17ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಮಟ್ಟದ ಸಮಾವೇಶ

0

ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಉಸ್ತುವಾರಿಗಳಾದ ಮಮತ ಗಟ್ಟಿ ಮತ್ತು ಹೇಮನಾಥ ಶೆಟ್ಟಿ

ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆಯ ಸಲುವಾಗಿ ರಾಜ್ಯಮಟ್ಟದ ಕಾಂಗ್ರೆಸ್ ಸಮಾವೇಶ ಫೆ.17 ರಂದು ಮಂಗಳೂರಿನಲ್ಲಿ ನಡೆಯಲಿರುವುದಾಗಿ ಪಕ್ಷದ ಉಸ್ತುವಾರಿಗಳಾದ ಮಮತಾ ಗಟ್ಟಿ ಮತ್ತು ಕಾವು ಹೇಮನಾಥ್ ಶೆಟ್ಟಿ ಹೇಳಿದರು.


ಅವರು ಇಂದು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ..ಕೆ. ಶಿವಕುಮಾರ್ ಸಹಿತ ಪಕ್ಷದ ನಾಯಕರು, ಮಂತ್ರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸುಮಾರು ೧ ಲಕ್ಷದಷ್ಟು ಕಾರ್ಯಕರ್ತರು ಸೇರಲಿದ್ದು, ಸುಳ್ಯ ಬ್ಲಾಕ್‌ನಿಂದ ೫ ಸಾವಿರ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಸಮಾವೇಶದಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗಾಗುವ ಪ್ರಯೋಜನಗಳನ್ನು ಮತ್ತು ಕೇಂದ್ರ ಸರಕಾರದ ತೆರಿಗೆ ತಾರತಮ್ಯ ನೀತಿಯನ್ನು ಜನರಿಗೆ ತಿಳಿಸಲಾಗುವುದು ಎಂದು ಹೇಳಿದರು.


ಸಮಾವೇಶದ ಯಶಸ್ಸಿಗಾ
ಗಿ ಬೂತ್, ಪಂಚಾಯತ್ ಮತ್ತು ಬ್ಲಾಕ್ ಮಟ್ಟದ ಸಭೆಗಳನ್ನು ಮಾಡಲಾಗಿದೆ. ಸುಳ್ಯ ಬ್ಲಾಕ್ ನಿಂದ 25 ಬಸ್ ನ ವ್ಯವಸ್ಥೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ಪಕ್ಷ ಸಂಘಟನೆಯ ಉದ್ದೇಶದಿಂದ ಮಂಗಳೂರಿನಲ್ಲಿ ಸಮಾವೇಶ ಏರ್ಪಡಿಸಲಾಗಿದೆ.ಎಂದು ಮಮತ ಗಟ್ಟಿ ಹೇಳಿದರು.


ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ
ತೆರಿಗೆ ಸಂಗ್ರಹ ದಲ್ಲಿ ಇಡೀ ದೇಶಕ್ಕೆ ಕರ್ನಾಟಕವೇ ಮಾದರಿ. ಗುಜರಾತ್ ಅಲ್ಲ. ನಮ್ಮ ಪಾಲಿನ ಹಣ ಕೊಡಿ ಎಂದು ನಾವು ಕೇಳುತ್ತಿದ್ದೇವೆ. ರಾಜ್ಯ ಸರಕಾರ ಪ್ರತಿಭಟನೆ ಮಾಡುತ್ತಿದ್ದರೂ ಬಿಜೆಪಿಯ 25 ಸಂಸದರು ರಾಜ್ಯದ ಪರವಾಗಿ ಬರಲಿಲ್ಲ. ಇದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಎಂದ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಐದು ಗ್ಯಾರಂಟಿಗಳನ್ನು ಜನರಿಗೆ ನೀಡಿದ್ದೇವೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಐದು ವರ್ಷದ ಒಳಗೆ ಪೂರ್ತಿಗೊಳಿಸುತ್ತೇವೆ. ಸಮಗ್ರ ಕರ್ನಾಟಕ ಅಭಿವೃದ್ಧಿಯ ಬಜೆಟ್ ನೀಡುತ್ತೇವೆ ಎಂದು ಅವರು ಹೇಳಿದರು.ಕಾಂಗ್ರೆಸ್ ಜನರ ಬದುಕಿಗಾಗಿ ಹೋರಾಟ ನಡೆಸಿದರೆ, ಬಿಜೆಪಿ ಭಾವನಾತ್ಮಕವಾಗಿ ಜನರನ್ನು ಬೆರಗು ಗೊಳಿಸುತ್ತಿದೆ. ಎಂದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಮಾತನಾಡಿ ಕೇಂದ್ರ ಸರಕಾರ ಸಾರಾಸಗಟಾಗಿ ವಿದೇಶದಿಂದ ಅಡಿಕೆ ಆಮದಿಗೆ ಅವಕಾಶ ನೀಡುತ್ತಿರುವುದರಿಂದ ಅಡಿಕೆಗೆ ದಿನದಿಂದ ದಿನಕ್ಕೆ ಬೆಲೆ ಕುಸಿಯುತ್ತಿದೆ. ಇದನ್ನು ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವ ಅನಿವಾರ್ಯತೆ ಎದುರಾಗಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಿಸಾನ್ ಘಟಕದ ಅದ್ಯಕ್ಷ ಎಂ.ಎಚ್. ಸುರೇಶ್ ಅಮೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ಉಪಸ್ಥಿತರಿದ್ದರು.