ಕೋವಿ ಪರವಾನಿಗೆ ರೈತರಿಗೆ ಈ ಹಿಂದಿನಿಂದಲೇ ಬಂದ ಮೂಲಭೂತ ಹಕ್ಕು

0

ಇದನ್ನು ಕಸಿದುಕೊಂಡಲ್ಲಿ ರೈತರು ತಮ್ಮ ಜೀವ ಮತ್ತು ಬೆಳೆಯನ್ನು ರಕ್ಷಣೆ ಮಾಡುವುದು ಕಷ್ಟವಾಗುತ್ತದೆ: ಪ್ರದೀಪ್ ಕುಮಾರ್ ಕೆ. ಎಲ್.

ಕೋವಿ ಪರವಾನಿಗೆ ರೈತರಿಗೆ ಈ ಹಿಂದಿನಿಂದಲೇ ಬಂದ ಮೂಲಭೂತ ಹಕ್ಕಾಗಿದೆ.ಇದನ್ನು ರೈತರಿಂದ ಕಸಿದುಕೊಂಡಲ್ಲಿ ರೈತರು ತಮ್ಮ ಜೀವ ಮತ್ತು ಬೆಳೆಯನ್ನು ಸಂರಕ್ಷಣೆ ಮಾಡುವುದು ಕಷ್ಟವಾಗುತ್ತದೆ ಎಂದು ಸುಳ್ಯ ತಾಲೂಕು ಮಲೆನಾಡು ಜಂಟಿ ಕ್ರಿಯಾ ಸಮಿತಿ ರಿ.ಅಧ್ಯಕ್ಷ ಪ್ರದೀಪ್ ಕುಮಾರ್ ಕೆ ಎಲ್ ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ಹೆಚ್ಚಾಗಿ ಕೃಷಿ ತೋಟಗಳಿಗೆ ಲಗ್ಗೆ ಇಡುತ್ತಿರುವುದನ್ನು ನಾವೆಲ್ಲರೂ ಕಂಡವರಾಗಿದ್ದೇವೆ. ರೈತರು ಉತ್ಪಾದನೆ ಮಾಡುವ ಬೆಳೆಗಳಿಗೆ, ಕೃಷಿ ಸಂರಕ್ಷಣೆಗೆ ಈಗಿನ ಕಾಲದಲ್ಲಿ ಕೋವಿ ಅನಿವಾರ್ಯವಾಗಿದೆ.
ರೈತಾಪಿ ವರ್ಗದವರು ಚುನಾವಣಾ ಸಮಯದಲ್ಲಿ ಯಾವುದೇ ಕಾನೂನು ಬಾಹಿರ ಹಾಗೂ ಕ್ರಿಮಿನಲ್ ಚಟುವಟಿಕೆಗಳಲ್ಲಿ ಇದುವರೆಗೆ ತೊಡಗಿಕೊಂಡಿರುವುದು ಎಲ್ಲಿಯೂ ಕೂಡ ಕಂಡುಬಂದಿರುವುದಿಲ್ಲ.ಪ್ರತೀ ಬಾರಿಯೂ ಚುನಾವಣೆಗಳು ನಡೆದಾಗ ಒಂದೆರಡು ತಿಂಗಳುಗಳ ಕಾಲ ನಮ್ಮಲ್ಲಿರುವ ರಕ್ಷಣಾ ಸಾಮಾಗ್ರಿಯಾದ ಕೋವಿಯನ್ನು ಠೇವಣಿ ಇಡಬೇಕಾದುರಿಂದ ಕಾಡು ಪ್ರಾಣಿಗಳಿಂದ ರೈತರಿಗೆ ತೀವ್ರ ನಷ್ಟ ಉಂಟಾಗ ಬಹುದಾಗಿದೆ. ಅದಲ್ಲದೇ ಇತ್ತೀಚೆಗೆ ನಕ್ಷಲರು ಅಲ್ಲಲ್ಲಿ ಕಾಣಸಿಗುತ್ತದ್ದಾರೆಂದು ಹಾಗೂ ಕೆಲವೊಂದು ಮನೆಗಳಿಗೆ ಬಂದು ಹೋಗುತ್ತಿದ್ದಾರೆ ಎನ್ನಲಾಗುತ್ತಿದ್ದು, ಕಾಡಿನಂಚಿನ ಗ್ರಾಮಗಳಲ್ಲಿ ಭಯದಿಂದಲೇ ಜೀವಿಸುವ ಸನ್ನಿವೇಶ ಉಂಟಾಗಿದೆ. ರೈತರು ತಮ್ಮ ಜೀವ ಮತ್ತು ಬೆಳೆಗಳನ್ನು ರಕ್ಷಿಸುವುದೇ ಒಂದು ದೊಡ್ಡ ಸವಾಲಾಗಿದೆ.

ಈ ಮೊದಲು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂದೂಕು ಠೇವಣಿ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದು ಆಯ್ದ ಕೃಷಿಕರಿಗೆ ‘ವಿನಾಯಿತಿ ನೀಡಲಾಗಿತ್ತು ಆ ಸಮಯದಲ್ಲಿ ವಿನಾಯಿತಿ ಪಡೆದುಕೊಂಡಿದ್ದ ಯಾವೊಬ್ಬ ಕೃಷಿಕನೂ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ದೂರುಗಳು ಕಂಡುಬಂದಿಲ್ಲ. ಈ ಬಗ್ಗೆ ಈಗಾಗಲೇ ರೈತರು ತಮ್ಮ ಅಹವಾಲುಗಳನ್ನು ಜಿಲ್ಲಾಧಿಕಾರಿಯವರಿಗೆ ಕಳುಹಿಸಿ ಕೊಡಲಾಗಿದ್ದು ಯಾವುದೇ ಉತ್ತರ ಬಂದಿರುವುದಿಲ್ಲ. ರೈತಾಪಿಗಳಿಗೆ ಸುತ್ತೋಲೆ ಮೂಲ ಪ್ರತಿ ಮತ್ತು ಆದೇಶ ದಾಖಲೆಗಳನ್ನು ಕೊಟ್ಟಿರುತ್ತಾರೆ.ಬಡವರ್ಗದವರು ಹಾಗೂ ಅವಕಾಶಗಳಿಂದ ವಂಚಿತರಾದವರನ್ನು ಗೊತ್ತುಪಡಿಸಿ ಅವರಿಗೆ ಬೇಕಾದ ಮೂಲಭೂತ ಅವಶ್ಯಕತೆಗಳನ್ನು ಮತ್ತು ಜೀವನೋಪಾಯಕ್ಕೆ ಸಣ್ಣ ಪುಟ್ಟ ಉದ್ಯೋಗಳನ್ನು ಒದಗಿಸುವುದರಿಂದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಗಟ್ಟಬಹುದಾಗಿದೆ.
ಅಲ್ಲದೆ ನಮ್ಮ ಸಮಿತಿ ವತಿಯಿಂದ ಹಲವಾರು ಬಾರಿ ಸಭೆಗಳು ನಡೆದಾಗ ಉತ್ತರ ಭಾರತ ಕಡೆಗಳಿಂದ ಕೆಲಸವನ್ನು ಅರಸಿಕೊಂಡು ಬಂದು ದೊಡ್ಡ ದೊಡ್ಡ ಎಸ್ಟೇಟ್ ಗಳಲ್ಲಿ ತಂಗಿರುವ ವ್ಯಕ್ತಿಗಳ ಮೇಲೆ ನಿಗಾ ವಹಿಸಲು ಮತ್ತು ಅವರ ಆಧಾರ್ ಕಾರ್ಡ್ ಅಥವಾ ದಾಖಲೆ ಪತ್ರಗಳನ್ನು ಪರಿಶೀಲಿಸಿಕೊಳ್ಳಲು ಜನಜಾಗೃತಿಯನ್ನು ನೀಡಲಾಗುತ್ತಿತ್ತು. ಆದರೆ ಇದರ ಬಗ್ಗೆ ಯಾವುದೇ ಅಧಿಕಾರಿಗಳು ಗಮನ ನೀಡಿರಲಿಲ್ಲ. ಇದೇ ರೀತಿ ಮುಂದುವರಿದಲ್ಲಿ ಬೇರೆ ಬೇರೆ ಅನಾಹುತಗಳಿಗೆ ಕಾರಣ ಉಂಟಾಗುವುದರಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ಕೆ ಸಿ ಹರೀಶ್ ಪೆರಾಜೆ, ಅಶೋಕ ಎಡಮಲೆ ಉಪಸ್ಥಿತರಿದ್ದರು.