ಪುರುಷೋತ್ತಮ ಮಲ್ಕಜೆಯವರಿಗೆ ಕೋವಿ ಠೇವಣಾತಿಯಿಂದ ವಿನಾಯಿತಿ ನೀಡಿದ ಹೈಕೋರ್ಟ್

0

ಚುನಾವಣಾ ಸಂದರ್ಭದಲ್ಲಿ ತನ್ನ ಕೃಷಿ ಸಂಬಂಧಿ ಕೋವಿ ಮತ್ತು ಆತ್ಮರಕ್ಷಣೆಗಾಗಿನ ಪಿಸ್ತೂಲ್‌ನ್ನು ಠೇವಣಾತಿ ಇರಿಸುವಂತೆ ಮಾಡಿದ ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ನ್ಯಾಯವಾದಿ ಹಾಗೂ ಕೃಷಿಕ ಪುರುಷೋತ್ತಮ ಮಲ್ಕಜೆಯವರು ಹೈಕೋರ್ಟ್‌ನ ಮೆಟ್ಟಿಲೇರಿದ್ದು, ಅವರ ಕೋವಿ ಮತ್ತು ಪಿಸ್ತೂಲ್‌ನ್ನು ಠೇವಣಾತಿಯಿಂದ ವಿನಾಯಿತಿ ಮಾಡಿ ನ್ಯಾಯಾಲಯ ತೀರ್ಪು ನೀಡಿದೆ.


ಕೋವಿ ಠೇವಣಾತಿಯಿಂದ ತಮಗೆ ವಿನಾಯಿತಿ ನೀಡಬೇಕೆಂದು ಪುರುಷೋತ್ತಮ ಮಲ್ಕಜೆಯವರು ಜಿಲ್ಲಾಧಿಕಾರಿಗಳ ನೇತೃತ್ವದ ಸ್ಕ್ರೀನಿಂಗ್ ಕಮಿಟಿಗೆ ಅರ್ಜಿ ಸಲ್ಲಿಸಿದ್ದರು. ಇದೇ ರೀತಿ ಸುಳ್ಯ ತಾಲೂಕಿನ 307 ಮಂದಿ ವಿನಾಯಿತಿಗಾಗಿ ಅರ್ಜಿ ಸಲ್ಲಿಸಿದ್ದು, ಪುರುಷೋತ್ತಮ ಮಲ್ಕಜೆಯವರು ಸೇರಿದಂತೆ 300 ಮಂದಿಯ ಅರ್ಜಿಯನ್ನು ಸ್ಕ್ರೀನಿಂಗ್ ಕಮಿಟಿ ತಿರಸ್ಕರಿಸಿತ್ತು. ಇದರ ವಿರುದ್ಧ ಮಲ್ಕಜೆಯವರು ಹೈಕೋರ್ಟ್ ನ್ಯಾಯವಾದಿ ರವಿಶಂಕರ್ ಭಟ್ ಕೊಡೆಂಕಿರಿ ಇವರ ಮೂಲಕ ಎ.1 ರಂದು ಹೈಕೋರ್ಟ್‌ನ ಮೆಟ್ಟಿಲೇರಿದ್ದರು. ಇಂದು ನ್ಯಾಯವಾದಿಗಳ ಅಹವಾಲನ್ನು ಆಲಿಸಿದ ನ್ಯಾಯಾಲಯವು ಮಲ್ಕಜೆಯವರ ಕೋವಿ ಮತ್ತು ಪಿಸ್ತೂಲನ್ನು ತಕ್ಷಣವೇ ರಿಲೀಸ್ ಮಾಡುವಂತೆ ಪೊಲೀಸ್ ಇಲಾಖೆಗೆ ಆದೇಶಿಸಿದೆ.


ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಕ್ರಿಮಿನಲ್ ಹಿನ್ನಲೆ ಉಳ್ಳವರಿಂದ ಮಾತ್ರ ಕೋವಿ ಠೇವಣಾತಿ ಪಡೆಯಬೇಕೆಂಬ ಆದೇಶವಿದ್ದರೂ, ಜಿಲ್ಲಾಧಿಕಾರಿಗಳು ಸಾರಾಸಗಟಾಗಿ ಎಲ್ಲ ಕೃಷಿಕರ ಕೋವಿಗಳನ್ನು ಡಿಪಾಸಿಟ್ ಮಾಡಲು ಆದೇಶಿಸುವುದು ಸರಿಯಲ್ಲವೆಂದು ನ್ಯಾಯವಾದಿ ರವಿಶಂಕರ್ ಭಟ್ ವಾದಿಸಿದ್ದು, ಈ ಬಗೆಗಿನ ತೀರ್ಪನ್ನು ನ್ಯಾಯಾಲಯವು ಕಾದಿರಿಸಿದೆ ಎಂದು ತಿಳಿದುಬಂದಿದೆ.