ನಗರದ ಕುಡಿಯುವ ನೀರಿನ ಕಾಮಗಾರಿ ಅಸಮರ್ಪಕ : ಸಾರ್ವಜನಿಕರಿಗೆ ತೊಂದರೆ : ನ.ಪಂ. ವಿಪಕ್ಷ ಸದಸ್ಯರಿಂದ ಕಾಮಗಾರಿಗೆ ಆಕ್ಷೇಪ

0

ಎ.26ರ ತನಕ ನಗರದ ಪೈಪ್ ಲೈನ್ ಕಾಮಗಾರಿ ನಿಲ್ಲಿಸಲು ಗುತ್ತಿಗೆದಾರರಿಗೆ ಮುಖ್ಯಾಧಿಕಾರಿ ಸೂಚನೆ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಯುತಿದ್ದು ಅಸಮರ್ಪಕವಾಗಿದೆಯಲ್ಲದೆ, ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗುತ್ತಿದೆ. ಆದ್ದರಿಂದ ತಕ್ಷಣಕ್ಕೆ ಕಾಮಗಾರಿ ಸ್ಥಗಿತಗೊಳಿಸಿ, ಸಭೆ ನಡೆಸಿ ಸಾಧಕ ಬಾಧಕ ಚರ್ಚಿಸಿ ಕಾಮಗಾರಿ ಮುಂದುವರಿಸಬೇಕು ಎಂದು ನ.ಪಂ. ವಿಪಕ್ಷ ಸದಸ್ಯರು ಆಗ್ರಹಿಸಿದ ಹಾಗೂ ಸ್ಥಳಕ್ಕೆ ಬಂದ ಮುಖ್ಯಾಧಿಕಾರಿಗಳು ಗುತ್ತಿಗೆದಾರರಿಗೆ ಫೋನ್ ಮಾಡಿ ಎ.26 ಚುನಾವಣಾ ದಿನಾಂಕದ ತನಕ ನಗರದಲ್ಲಿ ಪೈಪ್ ಲೈನ್ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿರುವ ಘಟನೆ ವರದಿಯಾಗಿದೆ.

ಸುಳ್ಯಕ್ಕೆ 58 ಕೋಟಿ ರೂ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಮಂಜೂರುಗೊಂಡು, ಕಾಮಗಾರಿ ಆರಂಭಗೊಂಡಿದೆ. ಕುರುಂಜಿಗುಡ್ಡೆ ಯಲ್ಲಿ ದೊಡ್ಟ ಟ್ಯಾಂಕ್ ಹಾಗೂ ಉಳಿದ 4 ಕಡೆ ಸಣ್ಣ ಟ್ಯಾಂಕ್ ಹಾಗೂ ಪೈಪ್ ಲೈನ್ ಕೆಲಸ ಆಗಿದೆ ನೀರಿನ ವ್ಯವಸ್ಥೆ ಆಗುವುದಿದೆ.

ಇದೀಗ ಕಾಮಗಾರಿ ನಡೆಯುತಿದ್ದು ಇದು ಅಸಮರ್ಪಕವಾಗಿದೆ ಎಂದು ಸಾರ್ವಜನಿಕರು ದೂರುತಿದ್ದಾರೆಂದು ನ.ಪಂ. ವಿಪಕ್ಷ ಸದಸ್ಯರಾದ ಎಂ.ವೆಂಕಪ್ಪ ಗೌಡ, ಕೆ.ಎಸ್. ಉಮ್ಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ಡೇವಿಡ್ ಧೀರಾ ಕ್ರಾಸ್ತಾ, ಕಾಂಗ್ರೆಸ್ ನವರಾದ ಶಿಹಾಬ್, ಉಮ್ಮರ್ ಕುರುಂಜಿಗುಡ್ಡೆ, ಕೃಷ್ಣ ಮೊದಲಾದವರು ಚೆನ್ನಕೇಶವ ದೇವಸ್ಥಾನದ ಸಮೀಪ ಕೆಲಸ ನಡೆಯುತಿದ್ದ ಸ್ಥಳಕ್ಕೆ ಬಂದು ಕೆಲಸ ಮಾಡುತ್ತಿದ್ದವರನ್ನು ಪ್ರಶ್ನಿಸಿದರಲ್ಲದೆ, ಮುಖ್ಯಾಧಿಕಾರಿ ಗಳಿಗೆ ಕರೆ ಮಾಡಿ ಸ್ಥಳಕ್ಕೆ‌ಬರುವಂತೆ ಕೇಳಿಕೊಂಡರು.

ಮುಖ್ಯಾಧಿಕಾರಿ ಬಿ.ಎಂ. ಡಾಂಗೆ ಸ್ಥಳಕ್ಕೆ ಬಂದರು. ಅಲ್ಲಿದ್ದ ನ.ಪಂ. ಸದಸ್ಯರುಗಳು ಮುಖ್ಯಾಧಿಕಾರಿಗಳಲ್ಲಿ ‌ಕಾಮಗಾರಿಯ ಅಸಮರ್ಪಕತೆ, ನೀರಿನ ಅಭಾವ, ಸಾರ್ವಜನಿಕರಿಗೆ ತೊಂದರೆ ಇತ್ಯಾದಿಗಳ ಕುರಿತು ಮುಖ್ಯಾಧಿಕಾರಿ ಗಳಿಗೆ ವಿವರ ನೀಡಿದರು.

ಅವರ ಅಹವಾಲು ಸ್ವೀಕರಿಸಿದ ಮುಖ್ಯಾಧಿಕಾರಿಗಳು ನಗರದಲ್ಲಿ ಕಾಮಗಾರಿ ಅಸಮರ್ಪಕ ದ ಕುರಿತು ನನಗೂ ದೂರವಾಣಿ ಕರೆಗಳು ಬರುತಿವೆ. ತಾಲೂಕು ಕಚೇರಿ ಎದುರಿನ ಸಮಸ್ಯೆಯಿಂದ ಕೆಲಸಗಳಿಗೆ ತೊಂದರೆಯಾಗಿದೆ. ನಾನು ಈಗಾಗಲೇ ಗುತ್ತಿಗೆದಾರರಿಗೆ ನೋಟೀಸ್ ಮಾಡಿದ್ದೇನೆ ಎಂದು ಹೇಳಿ, ಗುತ್ತಿಗೆದಾರರಿಗೆ ಕರೆ ಮಾಡಿ ಲೋಕಸಭಾ ಚುನಾವಣೆ ನಡೆಯುವ ತನಕ ಕಾಮಗಾರಿ ನಿಲ್ಲಿಸಿ ಎಂದು ಸೂಚನೆ ನೀಡಿದರು.

ಅದರಂತೆ ಗುತ್ತಿಗೆದಾರರು ನಗರದ ರಸ್ತೆಗಳ ಬದಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಸದ್ಯಕ್ಕೆ ನಿಲ್ಲಿಸುವಂತೆ ಕೆಲಸಗಾರರಿಗೆ ಸೂಚಿಸಲಾಗಿದೆ ಎಂದು ನ.ಪಂ. ಸದಸ್ಯರಿಗೆ ಫೋನ್ ಮಾಡಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.