ಕಲ್ಚರ್ಪೆ : ಸ್ಥಳೀಯರಿಗೆ ಮತ್ತೆ ಸಂಕಸ್ಟವಾಗಿ ಮಾರ್ಪಟ್ಟ ಕಸದ ರಾಶಿ

0

ಮಳೆಗೆ ಕಸದ ರಾಶಿಗಳು ಕೊಚ್ಚಿ ಪಯಶ್ವಿನಿ ನದಿ ಸೇರುವ ಆತಂಕ

ಸ್ಥಳೀಯರಿಂದ ಪುತ್ತೂರು ಸಹಾಯಕ ನಿರ್ದೇಶಕರಿಗೆ ಮನವಿ, ಸ್ಪಂದಿಸುವ ಭರವಸೆ

ಸುಳ್ಯದ ಕಲ್ಚರ್ಪೆಯಲ್ಲಿ ವರ್ಷಂಪ್ರತಿ ಮಳೆಗಾಲದಲ್ಲಿ ಉಂಟಾಗುವ ಕಸದ ರಾಶಿಯ ಸಮಸ್ಯೆ ಮತ್ತೆ ಸ್ಥಳೀಯರಿಗೆ ಸಮಸ್ಯೆಯನ್ನು ಉಂಟುಮಾಡುತ್ತಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕಸದ ರಾಶಿಗಳು ನೀರಿನ ರಭಸಕ್ಕೆ ಕೊಚ್ಚಿ ಪಯಶ್ವಿನಿ ನದಿಗೆ ಸೇರುವ ಆತಂಕ ಎದುರಾಗಿದೆ.

ಕಳೆದ ಹಲವಾರು ವರ್ಷಗಳಿಂದ ಇರುವ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸಂಬಂಧಪಟ್ಟ ಇಲಾಖೆಯವರಿಂದ ಇಂದಿನವರೆಗೆ ಸಾಧ್ಯವಾಗಿಲ್ಲವೆಂಬುವುದು ಪರಿಸರವನ್ನು ವೀಕ್ಷಿಸಿದಾಗ ಗೋಚರಿಸುತ್ತಿದೆ.
ಈ ಪರಿಸರದಲ್ಲಿ ಮೇಲ್ಭಾಗದಿಂದ ಹರಿದು ಬರುತ್ತಿರುವ ನೀರಿನ ತೋಡಲ್ಲಿ ಕಸದ ರಾಶಿಗಳು ತುಂಬಿದ್ದು ಅದರಲ್ಲಿರುವ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯಗಳು ಪರಿಸರದಲ್ಲಿ ತುಂಬಿ ದುರ್ವಾಸನೆ ಬೀರುತ್ತಿದೆ.ಸೊಳ್ಳೆಗಳ ಕಾಟದಿಂದ ನಮ್ಮ ನಮ್ಮ ಮನೆಗಳಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಈ ಭಾಗದ ಹೋರಾಟ ಸಮಿತಿಯ ಮುಖ್ಯಸ್ಥ ಅಶೋಕ್ ಪೀಚೆಯವರು ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದು ಅವರು ಸ್ಪಂದಿಸುವ ಭರವಸೆಯನ್ನು ನೀಡಿರುವುದಾಗಿ ತಿಳಿದುಬಂದಿದೆ.

ಒಟ್ಟಿನಲ್ಲಿ ಬಿಸಿಲುಗಾಲದಲ್ಲಿ ನಮಗೂ ಅದಕ್ಕೂ ಸಂಬಂಧವಿಲ್ಲದಂತೆ ಇರುವ ಸ್ಥಳೀಯ ಆಡಳಿತ ಮಳೆಗಾಲ ಬಂದಾಗ ಸ್ಥಳೀಯರು ಸಮಸ್ಯೆಗಳನ್ನು ಹೇಳಿಕೊಂಡು ಮಾಧ್ಯಮಗಳಲ್ಲಿ ವರದಿಗಳು ಬಿತ್ತರಗೊಂಡಾಗ ಸ್ಥಳಕ್ಕೆ ತೆರಳಿ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಡುವುದು ಸಹಜವಾಗಿ ಹೋಗಿದೆ. ಇದೀಗ ಸ್ಥಳೀಯರು ನಮಗೆ ತಾತ್ಕಾಲಿಕ ಕೆಲಸವಲ್ಲ ಶಾಶ್ವತ ಪರಿಹಾರ ಬೇಕೆಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.