ವಿದ್ಯುತ್ ಸಮಸ್ಯೆ ಮತ್ತು ನೆಟ್ ವರ್ಕ್ ಸಮಸ್ಯೆಯನ್ನು ಸರಿ ಮಾಡಲೇಬೇಕು : ಗ್ರಾಮಸ್ಥರ ಪಟ್ಟು

0

ಸರಕಾರ ಮಕ್ಕಳಿಗೆ ಕೊಡೆಯ ಬದಲು ರೈನ್ ಕೋಟ್ ನೀಡುವಂತಾಗಬೇಕು


ಇಲಾಖಾಧಿಕಾರಿಗಳ ಮುಂದೆ ಗ್ರಾಮಸಭೆಯಲ್ಲಿ ಬೇಡಿಕೆ ಇಟ್ಟ ಮಡಪ್ಪಾಡಿ ಗ್ರಾಮಸ್ಥರು

ನೆಟ್ ವಕ್೯ ಸಮಸ್ಯೆಯಿಂದ ಆಗುತ್ತಿರುವ ಗಂಭೀರ ತೊಂದರೆಯನ್ನು ಗ್ರಾಮಸಭೆಯ ಮುಂದಿಟ್ಟು ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿದ ಘಟನೆ ಮಡಪ್ಪಾಡಿಯಿಂದ ವರದಿಯಾಗಿದೆ.
ಮಡಪ್ಪಾಡಿ ಗ್ರಾಮ ಪಂಚಾಯತ್ ನ ೨೦೨೩-೨೪ನೇ ಸಾಲಿನ ಪ್ರಥಮ ಹಂತದ ಇಂದು ಮಡಪ್ಪಾಡಿ ಯುವಕ ಮಂಡಲದ ಸಭಾಭವನದಲ್ಲಿ ನಡೆಯಿತು.


ಗ್ರಾಮಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಷಾ ಜಯರಾಮರವರ ವಹಿಸಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ವಿಜಯ ಎಂ.ಪಿ. ನೋಡೆಲ್ ಅಧಿಕಾರಿಯಾಗಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಸ್ವಾಗತಿಸಿ, ವಂದಿಸಿದರು.
ವರದಿ ಮಂಡನೆಯಾದ ಬಳಿಕ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಜಾತ ಹಾಡಿಕಲ್ಲು, ಸದಸ್ಯರಾದ ಮಿತ್ರದೇವ ಮಡಪ್ಪಾಡಿ, ಹೆಚ್.ಬಿ.ಜಯರಾಮ ಹಾಡಿಕಲ್ಲು, ಶ್ರೀಮತಿ ಶರ್ಮಿಳಾ ಕಜೆ ಉಪಸ್ಥಿತರಿದ್ದರು.


ಸಭೆಯಲ್ಲಿ ವಿದ್ಯುತ್, ನೆಟ್ ವರ್ಕ್ ಸಮಸ್ಯೆ, ಬಸ್ಸು ಸಮಸ್ಯೆ, ಬಸ್ಸು ತಂಗುದಾಣದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.
ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡುತ್ತಿದ್ದಾಗ ಶಕುಂತಲಾ ಕೇವಳ ಮಾತನಾಡಿ ಶಾಲೆ ಆರಂಭವಾಗುವಾಗಲೇ ಹಾಸ್ಟೆಲ್ ಆರಂಭಿಸಬೇಕು. ಇಲ್ಲದಿದ್ದರೆ ದೂರದಿಂದ ಹೋಗುವ ಮಕ್ಕಳಿಗೆ ಕಷ್ವಾಗುತ್ತದೆ ಎಂದು ಬೇಡಿಕೆ ಇಟ್ಟರು. ಮತ್ತೆ ಮಾತನಾಡಿದ ಅವರು ಮಕ್ಕಳಿಗೆ ಕೊಡೆ ಕೊಡುವ ಬದಲು ರೈನ್ ಕೋಟ್ ಕೊಡಬೇಕು. ಗ್ರಾಮೀಣ ಭಾಗದಲ್ಲಿ ಮಕ್ಕಳು ನಡೆದುಕೊಂಡು ಹೋಗುವಾಗ ಮಳೆಗೆ ಮಕ್ಕಳು ಒದ್ದೆಯಾಗುತ್ತಾರೆ. ರೈನ್ ಕೋಟ್ ವಿತರಿಸಿದರೆ ಸಮಸ್ಯೆ ಇಲ್ಲ ಎಂದರು. ಆಗ ನೋಡೆಲ್ ಅಧಿಕಾರಿಯವರು ಈ ಬಗ್ಗೆ ಜನಪ್ರತಿನಿಧಿಗಳು ಸರಕಾರದ ಗಮನಕ್ಕೆ ತಂದು ಬದಲಾವಣೆ ಮಾಡಬೇಕಾಗುತ್ತದೆ ಎಂದರು.
ಮಡಪ್ಪಾಡಿ ಗ್ರಾಮದ ಕೊಲ್ಲಮೊಗ್ರ ಜಯರಾಮ ಗೌಡ ಅಂಬೆಕಲ್ಲು ರವರು ಕೊಲ್ಲಮೊಗ್ರ-ದೋಣಿಪಳ್ಳ, ಜಾಲುಮನೆ, ತೋಟದಮಜಲು, ಕೊಳಗೆ ನಿವಾಸಿಗಳ ಕುಂದುಕೊರತೆಗಳ ಲಿಖಿತ ಮನವಿ ನೀಡಿ ಸರಿಪಡಿಸುವಂತೆ ಒತ್ತಾಯಿಸಿದರು.
ಬಲ್ಕಜೆ ಅಂಗನವಾಡಿ ದುರಸ್ತಿ ಆಗಲಿಲ್ಲ. ಅಡುಗೆ ಕೋಣೆಗೆ ಬಾಗಿಲು ಅಳವಡಿಸುವ ಕಾರ್ಯ ಆಗಿಲ್ಲ. ಒಂದು ವರ್ಷದಿಂದ ಮನವಿ ಮಾಡುತ್ತಿzವೆ. ಬಾಗಿಲು ಸರಿ ಇಲ್ಲದೇ ಮೊಟ್ಟೆಗಳನ್ನು ಇಲಿ ತಿಂದು ಹೋಗಿದೆ ಎಂದು ಬಲ್ಕಜೆ ಅಂಗನವಾಡಿ ಕಾರ್ಯಕರ್ತೆ ಹೇಳಿದರು.

ತೀವ್ರ ನೆಟ್ ವರ್ಕ್ ಸಮಸ್ಯೆ
ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿಯವರು ನೆಟ್ ವರ್ಕ್ ಇಲ್ಲದ ಬಗ್ಗೆ ಮಾತನಾಡಿ ತೀವ್ರ ಅಸಮಾಧಾನ ಹೊರ ಹಾಕಿದ ಅವರು ವಿದ್ಯುತ್ ಇಲ್ಲದಿದ್ದರೆ ನೆಟ್ ವರ್ಕ್ ಇಲ್ಲ. ಒಂದು ತಿಂಗಳಿನಲ್ಲಿ ಕೇವಳ ೨ ತಿಂಗಳು ಮಾತ್ರ ವಿದ್ಯುತ್ ಇತ್ತು. ನೆಟ್ ವರ್ಕ್ ಇಲ್ಲದೇ ಯಾವ ಕೆಲಸವೂ ಆಗುತ್ತಿಲ್ಲ. ನಾನು ಚಿರೆಕಲ್ಲು ಕಡೆಗೆ ಹೋಗಿ ನೆಟ್ ವರ್ಕ್ ಇರುವಲ್ಲಿ ಕೆಲಸ ಮಾಡಬೇಕಾಗಿದೆ. ಮೊನ್ನೆ ಅಂಚೆ ಕಚೇರಿಯವರು ದೊಡ್ಡತೋಟಕ್ಕೆ ಹೋಗಿ ರಿಜಿಸ್ಟ್ರಾರ್ ಮಾಡಬೇಕಾದ ಅನಿವಾರ್ಯತೆ ಅವರಿಗೆ ಆಗಿದೆ. ಮೊನ್ನೆ ಒಬ್ಬರು ಆಸ್ಪತ್ರೆಯಲ್ಲಿ ನಿಧನರಾದಾಗ ಆಸ್ಪತ್ರೆಯಲ್ಲಿ ಕಟ್ಟಲು ಹಣ ನೆಫ್ಟ್ ಮಾಡಬೇಕಾಗಿತ್ತು. ಆದರೆ ನೆಟ್ ವರ್ಕ್ ಇಲ್ಲದ ಕಾರಣ ನೆಟ್ ವರ್ಕ್ ಇಲ್ಲದ ಕಾರಣ ನೆಫ್ಟ್ ಆಗಲಿಲ್ಲ. ಇದರಿಂದ ಹೆಣ ತರಲು ಆಗಲಿಲ್ಲ. ಇತ್ತೀಚೆಗೆ ಅರಂತೋಡಿನವರು ವಿಶೇಷ ಪ್ರಯತ್ನ ನಡೆಸಿ ಟವರ್ ಗೆ ಬ್ಯಾಟರ್ ಅಳವಡಿಸಿದ್ದಾರೆ. ದಯವಿಟ್ಟು ಇಲ್ಲಿಯೂ ಪಂಚಾಯತ್ ನವರು ಮತ್ತು ನಮ್ಮ ಮುಖಂಡರು ಇಲ್ಲಿಯ ಟವರ್ ಗೂ ಬ್ಯಾಟರಿ ಅಳವಡಿಸಿ ಸಮಸ್ಯೆ ನಿವಾರಿಸಿ. ಇನ್ನು ಬೆಳೆವಿಮೆ ಕಟ್ಟಲು ಬರುತ್ತದೆ. ಅದಕ್ಕೂ ಓಟಿಪಿ ಬೇಕು. ನೆಟ್ ವರ್ಕ್ ಸರಿಯಾಗದಿದ್ದರೆ ನಾವೇನು ಮಾಡಲಿ. ನಮಗೆ ನೆಟ್ ವರ್ಕ್ ತಕ್ಷಣ ಸರಿಪಡಿಸಿ ಕೊಡಿ ಎಂದು ಹೇಳಿದರು. ಅದಕ್ಕೆ ಗ್ರಾಮಸ್ಥರು ಚಪ್ಪಾಳೆ ತಟ್ಟಿ ಸಹಮತ ಸೂಚಿಸಿದರು.


ಗ್ರಾಮಸ್ಥರ ಬೇಡಿಕೆಗಳು ಹೀಗಿತ್ತು…

  • ಕೆಟ್ಟು ಹೋದ ಬೀದಿದೀಪಗಳನ್ನು ಸರಿಪಡಿಸಬೇಕು.
  • ಹಾಡಿಕಲ್ಲು ಸೇತುವೆಯ ಮೇಲಿರುವ ಕೆಸರು ತೆಗೆದು ದುರಸ್ತಿ ಪಡಿಸಬೇಕು
  • ಮಡಪ್ಪಾಡಿ ಪೇಟೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು
  • ಸಾರ್ವಜನಿಕರು ಸ್ವಚ್ಚತೆಗೆ ಆದ್ಯತೆ ನೀಡಬೇಕು
  • ಕಜೆಯಲ್ಲಿ ಬಸ್ ಸ್ಟ್ಯಾಂಡ್ ನಿರ್ಮಾಣ ವಾಗಬೇಕು