ಕೆಲಸ ನಿರ್ವಹಣೆಯಲ್ಲಿ ಸಮಸ್ಯೆಯಾಗಿರುವುದು ನಿಜ. ನಮ್ಮಿಂದ ತಪ್ಪಾಗಿದೆ, ಸಮರ್ಪಕ ಕೆಲಸ ನಿರ್ವಹಣೆಗೆ ಒತ್ತು : ಇಂಜಿನಿಯರ್
ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣ
ಸುಳ್ಯ ನಗರದಲ್ಲಿ ನಡೆಯುತ್ತಿರುವ ಶಾಶ್ವತ ಕುಡಿಯುವ ನೀರು ಕಾಮಗಾರಿಯ ಅಸಮರ್ಪತೆಯ ಕುರಿತು ನ.ಪಂ.ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಹಾಗೂ ಸಭೆಗೆ ಬಂದಿದ್ದ ಇಂಜಿನಿಯರ್ ಸಮಸ್ಯೆಯನ್ನು ಒಪ್ಪಿಕೊಂಡು, ಕ್ಷಮೆಯಾಚಿಸಿದರಲ್ಲದೆ ಸಮರ್ಪಕ ಕೆಲಸ ನಿರ್ವಹಣೆಗೆ ಒತ್ತು ನೀಡುವ ಭರವಸೆ ನೀಡಿದ್ದಾರೆ.
ನ.ಪಂ. ಅಧ್ಯಕ್ಷೆ ಶಶಿಕಲಾರವರ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಂಡಿತು.
ಸಭೆ ಆರಂಭವಾಗುತ್ತಿದ್ದಂತೆ ಇಂಜಿನಿಯರ್ ಗಳ ತಂಡ ಸಭೆಗೆ ಆಗಮಿಸಿದಾಗ, ಪಂಚಾಯತ್ ಸದಸ್ಯರು ಅವರು ಪೈಪ್ ಕಾಮಗಾರಿಯ ಅವ್ಯವಸ್ಥೆ ನೋಡಿಕೊಂಡು ಬರಲಿ. ಆ ಬಳಿಕ ಈ ಸಭೆಯಲ್ಲಿ ಭಾಗವಹಿಸಲಿ ಎಂದು ಸಲಹೆ ನೀಡಿದರು. ಅದರಂತೆ ಅಧ್ಯಕ್ಷರ ಸೂಚನೆ ಮೇರೆಗೆ ಇಂಜಿನಿಯರ್ ಗಳು ಸಭೆಯಿಂದ ತೆರಳಿದರು.
12.30 ಕ್ಕೆ ಇಂಜಿನಿಯರ್ ರವರು ಸಭೆಗೆ ಬಂದ ಬಳಿಕ ಮತ್ತೆ ಈ ಕುರಿತು ಚರ್ಚೆ ಆರಂಭವಾಯಿತು. ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ, ಶರೀಫ್ ಕಂಠಿ, ಕೆ.ಎಸ್. ಉಮ್ಮರ್, ವಿನಯ್ ಕುಮಾರ್ ಕಂದಡ್ಕ, ಕಿಶೋರಿ ಶೇಟ್ ಸಹಿತ ಎಲ್ಲರೂ ಸಮಸ್ಯೆಯನ್ನು ಮುಂದಿಟ್ಟರು.









ಆಗ ಮಾತನಾಡಿದ ಇಂಜಿನಿಯರ್ ನಾನು ಕೆವಿಜಿ ಜಂಕ್ಷನ್ ಕಾಮಗಾರಿ ನೋಡಿ ಬಂದಿದ್ದೇನೆ. ಇತರ ಕಡೆಯೂ ಕೆಲಸ ಗಮನಿಸಿದ್ದೇವೆ. ನಮ್ಮ ಸೂಪರ್ವಿಸನ್ ನಿಂದಾಗಿ ಸಮಸ್ಯೆ ಆಗಿದೆ. ಇಂದೇ ಗುತ್ತಿಗೆದಾರರನ್ನು ಬರಲು ಹೇಳಿದ್ದೇವೆ. ಎಲ್ಲೆಲ್ಲಿ ಸಮಸ್ಯೆ ಆಗಿದೆಯೋ ಅದನ್ನು ಎರಡು ದಿನದಲ್ಲಿ ಸರಿಪಡಿಸುತ್ತೇವೆ ಎಂದು ಹೇಳಿದರು.
ರಸ್ತೆ ಕತ್ತರಿಸಿ ಆಗುತ್ತಿರುವ ಸಮಸ್ಯೆ, ಪೈಪ್ ಲೈನ್ ಆಗದಿರುವುದು, ಧೂಳು ಇತ್ಯಾದಿಗಳ ಕುರಿತು ಸದಸ್ಯರು ಪ್ರಶ್ನಿಸಿದಾಗ, “ಎಲ್ಲೆಲ್ಲಿ ರಸ್ತೆ ಕತ್ತರಿಸಲಾಗಿದೆಯೋ ಅದೆಲ್ಲವನ್ನು ಕಾಂಕ್ರೀಟ್ ಹಾಕಿ ಹಿಂದೆ ಹೇಗಿದೆಯೋ ಅದೇ ರೀತಿ ಮಾಡುತ್ತೇವೆ. ಇನ್ನೂ 40 ಕಿ.ಮೀ. ಪೈಪ್ ಲೈನ್ ಅಳವಡಿಕೆ ಬಾಕಿ ಇದೆ. ಜತೆಗೆ ಮನೆ ಸಂಪರ್ಕ ಲೈನ್ ಕೆಲಸ ಬಾಕಿ ಇದೆ. ಜನರಿಗೆ ಸಮಸ್ಯೆ ಆಗದಂತೆ ಕೆಲಸ ನಿರ್ವಹಿಸುತ್ತಿವೆ. ಒಬ್ಬರು ಇಂಜಿನಿಯರ್ ಸೂಪರ್ವಿಸನ್ ಮಾಡುತ್ತಾರೆ ಎಂದು ಹೇಳಿದಾಗ, ನೀವು ಈ ಹಿಂದೆಯೂ ಹೀಗೆ ಹೇಳಿ ಹೋಗಿದ್ದೀರಿ. ಆದರೆ ಮಾಡಿಲ್ಲ. ನಮಗೆ ನಂಬಿಕೆ ಹೋಗಿದೆ ಎಂದು ಸದಸ್ಯರು ಹೇಳಿದಾಗ, ಈಗ ಸಮಸ್ಯೆ ಆಗಿರುವುದನ್ನು ಒಪ್ಪಿಕೊಳ್ಳುತ್ತೇವೆ. ಇನ್ನು ಹಾಗೆ ಆಗೋದಿಲ್ಲ. ಮೇ. ಒಳಗೆ ಪೈಪ್ ಲೈನ್ ಕಾಮಗಾರಿ ಮುಗಿಸುತ್ತೇವೆ ಎಂದರು
ಸ್ಥಳೀಯ ಸದಸ್ಯರನ್ನು ವಿಶ್ವಾಸಕ್ಕೆ ಪಡೆದೇ ಕೆಲಸ ನಿರ್ವಹಿಸಿ. ಅವರಿಗೆ ಮಾಹಿತಿ ನೀಡಿ ಎಂದು ಅಧ್ಯಕ್ಷೆ ಶಶಿಕಲಾ ಸೂಚನೆ ನೀಡಿದರು.
ನೀರು ಸರಬರಾಜು ಕುರಿತು ಸುಧೀರ್ಘ ಚರ್ಚೆ ನಡೆಯಿತು.
ನ.ಪಂ. ಇಂಜಿನಿಯರ್ ಶಿವಕುಮಾರ್ ರವರು ಬಹುಗ್ರಾಮ ಕುಡಿಯುವ ನೀರು ಯೋಜನೆಯ ಲೈನ್ ನಗರದಲ್ಲಿ ಹಾದು ಹೋಗುವಾಗ ಮತ್ತೆ ಸಮಸ್ಯೆಯಾಗುವ ಕುರಿತು ಸಭೆಯಲ್ಲಿ ಪ್ರಸ್ತಾಪವಿಟ್ಟರು. ಈ ಕುರಿತು ಎರಡೂ ಯೋಜನೆಗೆ ಸಂಬಂಧಿಸಿದ ಇಂಜಿನಿಯರ್ ಗಳು ಮಾತನಾಡಿಕೊಂಡು ಮುಂದುವರಿಯಬೇಕೆಂಬ ಅಭಿಪ್ರಾಯ ಸಭೆಯಲ್ಲಿ ಬಂತು.
ಸುಳ್ಯದ ಕುಡಿಯುವ ನೀರು ಯೋಜನೆ ಮುಂದಿನ ಡಿಸೆಂಬರ್ ಒಳಗೆ ಪೂರ್ಣಗೊಳಿಸುವ ಕುರಿತು ಇಂಜಿನಿಯರ್ ಅಜಯ್ ಆರ್ವಿ ಮಾಹಿತಿ ನೀಡಿದರು.










