ಕ.ಸಾ.ಪ. ತಾಲೂಕು ಘಟಕದ ಸಭೆ

0


ಸಾಹಿತಿಗಳ ಪರಿಚಯ ಕೃತಿ ಪ್ರಕಟಣೆಗೆ ನಿರ್ಧಾರ


ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸಭೆ ಮೇ. 16 ರಂದು ಕನ್ನಡ ಭವನದಲ್ಲಿ ನಡೆಯಿತು. ತಾಲೂಕು ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು.


ಕ.ಸಾ.ಪ. ತಾಲೂಕು ಘಟಕದ ವತಿಯಿಂದ ತಾಲೂಕಿನ ಪ್ರಮುಖ ಸಾಹಿತಿಗಳ ಪರಿಚಯ ಕೃತಿಗಳನ್ನು ಆ ಸಾಹಿತಿಗಳ, ಬಂಧುಗಳ ಹಿತೈಷಿಗಳ ನೆರವಿನಿಂದ ಪ್ರಕಟಿಸುವ ಚಿಂತನೆಯನ್ನು ಅಧ್ಯಕ್ಷರು ಮಂಡಿಸಿದಾಗ ಸದಸ್ಯರು ಬೆಂಬಲಿಸಿದರು.


ಮುಂದಿನ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಪೈಲಾರಲ್ಲಿ ನಡೆಸುವ ಬಗ್ಗೆ ಅಧ್ಯಕ್ಷರು ಪ್ರಸ್ತಾಪಿಸಿದಾಗ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ ಸಮ್ಮತಿ ಸೂಚಿಸಿದರು.


ಜೂನ್ ತೃತೀಯ ವಾರದಲ್ಲಿ ಕನ್ನಡದಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಇರಿಸಿಕೊಳ್ಳಲು ನಿರ್ಧರಿಸಲಾಯಿತು. ಜ್ಞಾನಪೀಠ ಪುರಸ್ಕೃತ ಕನ್ನಡ ಸಾಹಿತಿಗಳ ಭಾವಚಿತ್ರಗಳನ್ನು ಬಾಕಿ ಇರುವ ಶಾಲೆಗಳಿಗೆ ಜೂನ್ ತಿಂಗಳಲ್ಲಿ ವಿತರಿಸಲು ನಿರ್ಧರಿಸಲಾಯಿತು.
ಗೌರವ ಕಾರ್ಯದರ್ಶಿ ಶ್ರೀಮತಿ ಚಂದ್ರಮತಿ ವರದಿ ಮಂಡಿಸಿದರು.


ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ ಹೋಬಳಿ ಘಟಕದ ಮೂಲಕ ನಡೆಸಲಾದ ಚಟುವಟಿಕೆಗಳ ವಿವರ ನೀಡಿದರು. ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಸದಸ್ಯರಾದ ಪ್ರೊ.ಸಂಜೀವ ಕುದ್ಪಾಜೆ, ಶ್ರೀಮತಿ ಲತಾ ಸುಪ್ರೀತ್ ಮೋಂಟಡ್ಕ, ಸಂಕೀರ್ಣ ಚೊಕ್ಕಾಡಿ, ಜಿಲ್ಲಾ ಕ.ಸಾ.ಪ. ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಬಂಟ್ವಾಳ್ ಉಪಸ್ಥಿತರಿದ್ದರು.


ಸುಳ್ಯ ತಾಲೂಕಿನ ಸಾಹಿತಿಗಳ ಸಮಗ್ರ ಕೃತಿಗಳನ್ನು ಕನ್ನಡ ಭವನದಲ್ಲಿ ಗ್ರಂಥಾಲಯದ ರೂಪದಲ್ಲಿ ಸಂಗ್ರಹಿಸಿರುವ ಹಾಗೂ ಆಸಕ್ತರಿಗೆ ಅವುಗಳನ್ನು ಓದಲು ಅವಕಾಶ ನೀಡುವುದಾಗಿ ನಿರ್ಧರಿಸಲಾಯಿತು.