ಜಾಲ್ಸೂರು ಪೆಟ್ರೋಲ್ ಬಂಕ್ ಗೆ ಬಂದ ಪೆಟ್ರೋಲ್ ತುಂಬಿದ ಟ್ಯಾಂಕರ್ : ಇಳಿಸದಂತೆ ಊರವರ ಆಕ್ಷೇಪ – ಚರ್ಚೆ

0

ಗ್ರಾಹಕರಿಗೆ ಉತ್ತಮ ಸರ್ವಿಸ್ ನೀಡಲು ಪ್ರಯತ್ನ : ಮಾಲಕರು

ಜಾಲ್ಸೂರು ಪೇಟೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ನಲ್ಲಿ ಮೂರು – ನಾಲ್ಕು ತಿಂಗಳಿನಿಂದ ಸರಿಯಾಗಿ ಪೆಟ್ರೋಲ್, ಡೀಸೆಲ್ ಸರ್ವಿಸ್ ಸಿಗದೇ ಅಸಮಾಧಾನ ಗೊಂಡ ಊರವರು, ಮೇ.26ರಂದು ರಾತ್ರಿ ಪೆಟ್ರೋಲ್ ತುಂಬಿ ಬಂದಿದ್ದ ಟ್ಯಾಂಕರ್ ಗೆ ಆಕ್ಷೇಪ ವ್ಯಕ್ತ ಪಡಿಸಿದ ಹಾಗೂ ಸುಧೀರ್ಘ ಚರ್ಚೆಗಳು ನಡೆದ ಬಳಿಕ ಗ್ರಾಹಕರಿಗೆ ಉತ್ತಮ ಸರ್ವಿಸ್ ನೀಡಲು ಪ್ರಯತ್ನಿಸುವುದಾಗಿ ಮಾಲಕರು ಹೇಳಿದ ಮೇರೆಗೆ ಬಂಕ್ ಗೆ ಪೆಟ್ರೋಲ್ ಇಳಿಸಿದ ಘಟನೆ ವರದಿಯಾಗಿದೆ.

ಜಾಲ್ಸೂರು ಪೇಟೆಯಲ್ಲಿ ಭಾರತ್ ಪೆಟ್ರೋಲ್ ಬಂಕ್ ಹಲವು ವರ್ಷದಿಂದ ಕಾರ್ಯಾಚರಿಸುತ್ತಿದೆ. ಗ್ರಾಹಕರಿಗೆ ಉತ್ತಮ ಸರ್ವಿಸ್ ಕೂಡಾ ನೀಡುತಿತ್ತು. ಆದರೆ ಇತ್ತೀಚೆಗಿನ ಕೆಲ ತಿಂಗಳಿನಲ್ಲಿ ಪೆಟ್ರೋಲ್, ಡೀಸೆಲ್ ಸರಿಯಾಗಿ ಸಿಗುತ್ತಿರಲಿಲ್ಲ. ಸುಳ್ಯದಿಂದ ಕಾಸರಗೋಡು, ಮಂಗಳೂರಿಗೆ ಹೋಗುವ ಹಲವು ವಾಹನಗಳು ಹಾಗೂ ಜಾಲ್ಸೂರು ಸುತ್ತಮುತ್ತಲಿನ ಗ್ರಾಮದವರು ಜಾಲ್ಸೂರು ಪೆಟ್ರೋಲ್ ಬಂಕ್ ನ್ನು‌ ನಂಬಿ ಪೆಟ್ರೋಲ್, ಡೀಸೆಲ್ ಹಾಕಲು ಬಂದಾಗ ಅಲ್ಲಿ ಸರ್ವಿಸ್ ಇರುತ್ತಿರಲಿಲ್ಲ. ಇದರಿಂದ ಅಸಮಾಧಾನ ಗೊಳ್ಳುತ್ತಿದ್ದ ವಾಹನ ಸವಾರರು ಮತ್ತೆ ಸುಳ್ಯಕ್ಕೆ ಬಂದು ಪೆಟ್ರೋಲ್, ಡೀಸೆಲ್ ಹಾಕಿ ಹೋಗುವ ಸ್ಥಿತಿ ಇತ್ತು.

ಮೇ.26ರಂದು ರಾತ್ರಿ ಪೆಟ್ರೋಲ್ ತುಂಬಿದ ಟ್ಯಾಂಕರ್ ಜಾಲ್ಸೂರು ಭಾರತ್ ಪೆಟ್ರೋಲ್ ಬಂಕ್ ಗೆ ಬಂದು ನಿಂತಿತು.‌ ತುಂಬಾ ಸಮಯದ ಬಳಿಕ ಟ್ಯಾಂಕರ್ ಬಂದು‌ ನಿಂತುದನ್ನು ಗಮನಿಸಿದ ಜಾಲ್ಸೂರು ರಿಕ್ಷಾ ಚಾಲಕರಾದ ಗೋಪಾಲ ಕೋನಡ್ಕಪದವು, ಸತೀಶ್ ಜಾಲ್ಸೂರು, ಯಶವಂತ ಮುರೂರು, ಕರುಣಾಕರ ಕಾಡುಸೊರಂಜ, ಮೋಹನ ಬೆಳ್ಳಿಪ್ಪಾಡಿ, ದಿನೇಶ್ ಮಹಾಬಲಡ್ಕ, ಅರುಣ ಮಹಾಬಲಡ್ಕ ಮತ್ತಿತರರು
ಹಾಗೂ ಊರವರು ಸೇರಿ ಸುಮಾರು 30 ರಷ್ಟು ಮಂದಿ ಪೆಟ್ರೋಲ್ ಬಂಕ್ ವಠಾರಕ್ಕೆ ಹೋದರು. ಸಂಸ್ಥೆಯ‌ ಮಾಲಕರು ಕೂಡಾ ಈ ಸಂದರ್ಭದಲ್ಲಿ ಅಲ್ಲಿ ಇದ್ದರು.

ಪೆಟ್ರೋಲ್, ಡಿಸೇಲ್ ಸಿಗದೇ ಸಮಸ್ಯೆಗಳಾಗುತ್ತಿದೆ. ನೀವು ನಿರಂತರ ಸೇವೆ ನೀಡುವುದಿದ್ದರೆ ಟ್ಯಾಂಕರಿನಿಂದ ಪೆಟ್ರೋಲ್ ಅನ್ ಲೋಡ್ ಮಾಡಿ, ಇಲ್ಲವಾದರೆ ನಾವು ಊರವರು ಅವಕಾಶ ನೀಡುವುದಿಲ್ಲ. ಈ ಬಂಕ್ ನಂಬಿ ನಾವು ಇಲ್ಲಿಗೆ ಬರುವುದು. ಸರ್ವಿಸ್ ಸಿಗದೇ ವಾಪಸು ಸುಳ್ಯಕ್ಕೆ ಹೋಗುವ ಸ್ಥಿತಿ ಇದೆ ಎಂದು‌ ರಿಕ್ಷಾದವರು‌ ಹಾಗೂ ಊರವರು ಹೇಳಿದರೆಂದೂ, ಸಂಸ್ಥೆ ಮಾಲಕರು ಸರ್ವಿಸ್ ನೀಡಲು ಇದ್ದ ಸಮಸ್ಯೆಯನ್ನು ಹೇಳಿ ಮುಂದೆ ಉತ್ತಮ ಸರ್ವಿಸ್ ನೀಡಲು ಪ್ರಯತ್ನಿಸುತ್ತೇನೆ. ನಿಮ್ಮ ಸಹಕಾರ ಬೇಕು ಎಂದು ಹೇಳಿದ್ದರಿಂದ ರಿಕ್ಷಾದವರು ಹಾಗೂ ಊರವರು ಮತ್ತೆ ಮಾತು ಮುಂದುವರಿಸಲಿಲ್ಲ ಎಂದು ತಿಳಿದುಬಂದಿದೆ.

ಭಾರತ್ ಪೆಟ್ರೋಲ್ ಬಂಕ್ ನಲ್ಲಿ ಸರ್ವಿಸ್ ಸಿಗದ ಕುರಿತು ಮಾಲಕ ಗುರುದತ್ ರನ್ನು ಸಂಪರ್ಕಿಸಿ ವಿಚಾರಿಸಿದಾಗ, “ಇದು ಸ್ಪರ್ಧಾತ್ಮಕ ಯುಗ. ನಮ್ಮಲ್ಲಿ ಪೆಟ್ರೋಲ್ ಹಾಕಲು ಬರುವವರು ಕಾಸರಗೋಡಿಗೆ ಹೋಗುವವರು. ಈಗ ಗಾಳಿಮುಖದಲ್ಲಿ 4 ಬಂಕ್ ಆಗಿದೆ. ಈ ಸ್ಪರ್ದೆಯಿಂದ ಸ್ವಲ್ಪ ಸಮಸ್ಯೆಯಾಗಿತ್ತು. ಮತ್ತು ಜಾಲ್ಸೂರಿನಲ್ಲಿ ಹೆಚ್ಚಾಗಿ ಕರೆಂಟ್ ಇರೋದಿಲ್ಲ. ನಾನು ಪೆಟ್ರೋಲ್ ಹಾಕಿ ಜನರೇಟರ್ ಚಾಲು ಮಾಡಿ ಸೇವೆ ನೀಡಬೇಕು. ಸಾಲ ಹೋದದ್ದು ಬಾಕಿ ಸಿಗಲು ಇದೆ. ಹೀಗೆಲ್ಲ ಇರುವಾಗ ವರ್ಕ್ ಔಟ್ ಆಗುವುದಿಲ್ಲ. ಆದರೂ ಮುಂದೆ ಉತ್ತಮ ಸರ್ವಿಸ್ ನೀಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.