ಬೆಳ್ಳಾರೆ ಕೆಪಿಎಸ್ ಶಿಕ್ಷಕಿ ಶ್ರೀಮತಿ ಸಾವಿತ್ರಿ ಬಿ.ಎಸ್. ಸೇವಾ ನಿವೃತ್ತಿ – ಸನ್ಮಾನ

0

ನಿವೃತ್ತಿಯ ಬಳಿಕ ತಮ್ಮ ಪ್ರವೃತ್ತಿಯನ್ನು ಉಳಿಸಿಕೊಂಡರೆ ಬದುಕು ಸುಂದರ : ಜನಾರ್ಧನ ಕೆ. ಎನ್

“ಬದಲಾವಣೆ ಜಗದ ನಿಯಮ. ನಿವೃತ್ತಿ ಎಂಬುದು ಯಾವುದೇ ಉದ್ಯೋಗಿಯ ಬದುಕಿನಲ್ಲಿ ಅನಿವಾರ್ಯ. ನಿವೃತ್ತಿಯ ಬಳಿಕ ತಮ್ಮ ಪ್ರವೃತ್ತಿಯನ್ನು ಉಳಿಸಿಕೊಂಡರೆ ನಿವೃತ್ತ ಬದುಕು ಸುಂದರಮಯವಾಗುತ್ತದೆ ” ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯ ಪ್ರಾಂಶುಪಾಲರಾದ ಜನಾರ್ಧನ ಕೆ ಎನ್ ನುಡಿದರು. ಅವರು ಜೂ.28 ರಂದು ಕೆಪಿಎಸ್ ಬೆಳ್ಳಾರೆಯ ಪ್ರಾಥಮಿಕ ವಿಭಾಗದಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ ಶ್ರೀಮತಿ ಸಾವಿತ್ರಿ ಬಿ ಎಸ್ ರವರ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೆಪಿಎಸ್ ಬೆಳ್ಳಾರೆ ಶಿಕ್ಷಣ ಸಂಸ್ಥೆ ಒಂದು ದೊಡ್ಡ ಕುಟುಂಬದ ರೀತಿಯ ವ್ಯವಸ್ಥೆ. ಇಲ್ಲಿ ಸಾವಿತ್ರಿಯವರು ಉತ್ತಮ ಕೆಲಸವನ್ನು ಮಾಡಿರುತ್ತಾರೆ. ಅವರ ನಿವೃತ್ತಿ ಜೀವನ ಸುಖಮಯವಾಗಿ ಸಾಗಲಿ ಎಂದು ಶುಭ ಹಾರೈಸಿದರು.
ಶಾಲಾ ವಿದ್ಯಾರ್ಥಿನಿಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಹ ಶಿಕ್ಷಕರಾದ ರಾಜನಾಯಕ ಟಿ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಮಹಮ್ಮದ್ ಶಮ್ಮಾಝ್, ಕೃತಾರ್ಥ್ ಪಿ ವಿ, ಅಹನ್ ಗೌಡ ಕೆ ಎಚ್, ಪಿ ಮನ್ವಿ, ಎಸ್ ಸಿಂಧು, ಮಹತಿ ಆಕಿರೆಕಾಡು ರಾವ್, ಬಿ ಮೌತಿಕ, ಪ್ರಾರ್ಥನಾ ಎಸ್ ಆರ್, ಮಹಮ್ಮದ್ ಶಾಮಿಲ್, ರೇಹಾ, ವರ್ಷಾ ಬಿ, ಇವರುಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹಿರಿಯ ಶಿಕ್ಷಕಿಯರಾದ ಸವಿತಾ ಗುಜರನ್, ಅರುಣಾಕ್ಷಿ ಕೆ ಎಲ್, ಶಾಂತ ಕುಮಾರಿ, ಅತಿಥಿ ಶಿಕ್ಷಕಕಿಯರಾದ ದಿವ್ಯಲತ ಮತ್ತು ಪೂರ್ವಿ ರೈ ಇವರುಗಳು ಸಾವಿತ್ರಿಯವರ ಜೊತೆಗಿನ ಒಡನಾಟಡ ನೆನಪುಗಳನ್ನು ಮೆಲುಕು ಹಾಕಿದರು. ಬಳಿಕ ಶಿಕ್ಷಕಿಯನ್ನು ಇಲಾಖಾ ವತಿಯಿಂದ, ಪದವಿಪೂರ್ವ ವಿಭಾಗದ, ಪ್ರೌಢ ಶಾಲಾ ವಿಭಾಗ, ಪ್ರಾಥಮಿಕ ವಿಭಾಗಗಳ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕ ದಿನೇಶ ಗೌಡ ಕೆ ಪ್ರಾಥಮಿಕ ವಿಭಾಗದಿಂದ ನೀಡಲ್ಪಟ್ಟ ಸನ್ಮಾನ ಪತ್ರವನ್ನು ವಾಚಿಸಿದರು. ವಿದ್ಯಾರ್ಥಿಗಳು ಕೂಡ ತಮ್ಮ ಪ್ರೀತಿಯ ಶಿಕ್ಷಕಿಗೆ ತಮ್ಮ ನೆನಪಿಗಾಗಿ ಸ್ಮರಣಿಕೆಗಳನ್ನು ನೀಡಿದರು.
ಅತಿಥಿಯಾಗಿ ಭಾಗವಹಿಸಿದ್ದ ಉಪಪ್ರಾಂಶುಪಾಲರಾದ ಉಮಾ ಕುಮಾರಿ ಇವರು, ನಾವು ಮಾಡಿದ ಸರಕಾರಿ ಸೇವೆಯು ನಮಗೆ ನೆಮ್ಮದಿಯನ್ನು ನೀಡಿದಲ್ಲಿ ನಮ್ಮ ನಿವೃತ್ತಿಯ ಜೀವನವು ಕೂಡ ನೆಮ್ಮದಿಯಿಂದ ಇರುತ್ತದೆ. ಸಾವಿತ್ರಿ ಅವರ ನಿವೃತ್ತಿ ಜೀವನವೂ ಕೂಡ ಸುಖ ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು. ಎಸ್ ಡಿ.ಎಂಸಿ ಸದಸ್ಯ ಶರತ್ ಪೂಗವನ ರವರು ಮಾತನಾಡಿ ಸಾವಿತ್ರಿಯವರು ಮಿತ ಭಾಷಿಯಾಗಿದ್ದು ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಾ ವಿದ್ಯಾರ್ಥಿಗಳ ಮತ್ತು ಪೋಷಕರ ಪ್ರೀತಿಗೆ ಪಾತ್ರರಾಗಿದ್ದರು ಎಂದರು. ಕಟ್ಟಡ ಸ್ಥಾಯಿ ಸಮಿತಿಯ ಅಧ್ಯಕ್ಷರೂ, ಎಸ್ಡಿಎಂಸಿ ಸದಸ್ಯರೂ ಆದ ಹರ್ಷ ಜೋಗಿಬೆಟ್ಟು ಇವರು, ಸಾವಿತ್ರಿ ಬಿ ಎಸ್ರವರು ತಮ್ಮ ವೃತ್ತಿಯನ್ನು ಅತ್ಯಂತ ಚೆನ್ನಾಗಿ ನಿಭಾಯಿಸಿರುತ್ತಾರೆ. ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಎಂದು ಅಭಿನಂದಿಸಿದರು. ಸಾವಿತ್ರಿಯವರ ಪತಿಯಾದ ಶೇಷಗಿರಿಯವರು ತಮ್ಮ ಪತ್ನಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ಬೆಂಬಲ ನೀಡಿದ ಶಿಕ್ಷಕರು ಮತ್ತು ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಮ್ಮ ನೆನಪಿಗಾಗಿ ಶಾಲೆಗೆ ಕಪಾಟನ್ನು ಸಾವಿತ್ರಿಯವರು ಎಸ್ಡಿಎಂಸಿ ಸದಸ್ಯರಿಗೆ ಹಸ್ತಾಂತರಿಸಿದರು. ಜೊತೆಗೆ 7ನೇ ತರಗತಿಯಲ್ಲಿ ವಿಷಯದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ರೂ. 5,000 ಮೊತ್ತದ ದತ್ತಿನಿಧಿ ಕೊಡುಗೆಯನ್ನು ಕೂಡ ನೀಡಿದರು. ಬಳಿಕ ತಮ್ಮ ವೃತ್ತಿ ಜೀವನದ ವಿವಿಧ ಮೈಲುಗಲ್ಲುಗಳನ್ನು ಸ್ಮರಿಸಿಕೊಳ್ಳುತ್ತಾ ಶಿಕ್ಷಕ ವೃತ್ತಿಯನ್ನು ಗೌರವದಿಂದ ಕಾಣುತ್ತಿದ್ದು ಇದರಿಂದಾಗಿ ನನ್ನ ವೃತ್ತಿಯಲ್ಲಿ ಸಾರ್ಥಕತೆ ಸಾಧಿಸಲು ಸಾಧ್ಯವಾಯಿತು. ಹೆಚ್ಚುವರಿಯಾಗಿ ಕೆಪಿಎಸ್ ಗೆ ಬಂದರು ಕೂಡ ಇಲ್ಲಿಯ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಒಡನಾಟ ಮತ್ತೆ ನನ್ನನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು. ವಿದ್ಯಾರ್ಥಿಗಳು ಗುರುಗಳನ್ನು ಮೀರಿಸುವ ಸಾಧನೆಯನ್ನು ಮಾಡಬೇಕು, ಅದುವೇ ಶಿಕ್ಷಕರಿಗೆ ದೊರೆಯುವ ಗೌರವ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಮಾಯಿಲಪ್ಪ ಜಿ ಇವರು, ಸಾವಿತ್ರಿ ಅವರು ನಮ್ಮ ಸಂಸ್ಥೆಯಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿದ್ದು, ನಿವೃತ್ತಿ ಜೀವನವು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು.
ಶಿಕ್ಷಕಿ ಸುಶೀಲ ಹೆಗಡೆ ನಿರೂಪಿಸಿ, ಶಿಕ್ಷಕಿ ಅನ್ನಪೂರ್ಣ ಬಿ ಸಿ ವಂದಿಸಿದರು.
ಕಾರ್ಯಕ್ರಮದ ಬಳಿಕ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಕಿ ಸಾವಿತ್ರಿಯವರ ವತಿಯಿಂದ ಸಿಹಿಯೂಟವನ್ನು ನೀಡಲಾಯಿತು. ಅದೇ ರೀತಿ ಪಿಯುಸಿ ಮತ್ತು ಪ್ರೌಢಶಾಲಾ ವಿಭಾಗ ವಿದ್ಯಾರ್ಥಿಗಳಿಗೆ ಕೂಡ ಸಿಹಿಯನ್ನು ಈ ಸಂದರ್ಭದಲ್ಲಿ ಹಂಚಲಾಯಿತು.