ಕುಕ್ಕುಜಡ್ಕ ಸ.ಹಿ.ಪ್ರಾ.ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಸ್.ರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ

0

ಕುಕ್ಕುಜಡ್ಕ ಸ.ಹಿ.ಪ್ರಾ.ಶಾಲೆಯಲ್ಲಿ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಸ್.ರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಜೂ. ೨೮ರಂದು ನಡೆಯಿತು. ಕುಕ್ಕುಜಡ್ಕ ಪ್ರಾ.ಕೃ.ಪ.ಸ.ಸಂಘದ ಸದಸ್ಯೆ ಶ್ರೀಮತಿ ಲತೇಶ್ವರಿ ಮಾಯಿಪಡ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ವಿನಯಕುಮಾರ್ ಸಂಕೇಶ ಸಭಾಧ್ಯಕ್ಷತೆ ವಹಿಸಿದ್ದರು. ಹಿರಿಯ ನಿವೃತ್ತ ಶಿಕ್ಷಕರು, ಸಹ ಶಿಕ್ಷಕರು, ಪೋಷಕರು ಹಾಗೂ ಹಿರಿಯ, ಕಿರಿಯ ವಿದ್ಯಾರ್ಥಿಗಳು ನಿವೃತ್ತ ಶಿಕ್ಷಕರ ಜೊತೆಗಿನ ಒಡನಾಟದ ಸವಿ ನೆನಪುಗಳನ್ನು ಮೆಲುಕು ಹಾಕಿದರು. ಹಿರಿಯ ನಿವೃತ್ತ ಶಿಕ್ಷಕಿ ಶ್ರೀಮತಿ ರತ್ನಾವತಿ ಕೆ. ಅಭಿನಂದನಾ ಮಾತುಗಳನ್ನಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಅಮರಮುಡ್ನೂರು ಗ್ರಾ.ಪಂ. ಸದಸ್ಯೆ ಶ್ರೀಮತಿ ದಿವ್ಯಾ ಮಡಪ್ಪಾಡಿ, ಕೃಷ್ಣಕುಮಾರ್ ಮಾಡಬಾಕಿಲು, ಜನಾರ್ದನ ಪೈಲೂರು, ಹಿರಿಯ ನಿವೃತ್ತ ಶಿಕ್ಷಕ ಮೇದಪ್ಪ ಗೌಡ ತಂಟೆಪ್ಪಾಡಿ, ದೇವಚಳ್ಳ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಭಾಕರ ಶೇಣಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮನಾಭ ಬೊಳ್ಳೂರು ವೇದಿಕೆಯಲ್ಲಿದ್ದು, ಅನಿಸಿಕೆ ವ್ಯಕ್ತಪಡಿಸಿದರು.


ಶ್ರೀಮತಿ ಲತೇಶ್ವರಿ ಮಾಯಿಪಡ್ಕರವರು ಹೇಮಲತಾ ಲೋಕನಾಥ ದಂಪತಿಗಳನ್ನು ಶಾಲು, ಹಾರ, ಫಲಪುಷ್ಪ ಮತ್ತು ಉಂಗುರ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಶ್ರೀಮತಿ ಹೇಮಲತಾರವರು ತಮ್ಮ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸುತ್ತಾ ವಿದ್ಯಾ ಸಂಸ್ಥೆಯಲ್ಲಿ ಕೆಲಸ ಮಾಡಲು ಪ್ರೋತ್ಸಾಹ ಮಾರ್ಗದರ್ಶನ ಮತ್ತು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭ ನಿವೃತ್ತ ಮುಖ್ಯಶಿಕ್ಷಕಿ ಶ್ರೀಮತಿ ಹೇಮಲತಾರವರು ಶಾಲೆಯ ಅಭಿವೃದ್ಧಿಗಾಗಿ ರೂ. ೬೦ ಸಾವಿರ ದೇಣಿಗೆ ನೀಡಿ ಸಹಕರಿಸಿದರು.
ಸಹಶಿಕ್ಷಕಿ ಶ್ರೀಮತಿ ಸುಲೋಚನಾ ಅಭಿನಂದನಾ ಪತ್ರ ವಾಚಿಸಿದರು. ಗೌರವ ಶಿಕ್ಷಕಿ ಯೋಗಿನಿ ಸಹಕರಿಸಿದರು. ಪ್ರಭಾರ ಮುಖ್ಯಶಿಕ್ಷಕಿ ಸವಿತಾ ಕೆ.ಕೆ. ಸ್ವಾಗತಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ಭವ್ಯ ವಂದಿಸಿದರು. ಅತಿಥಿ ಶಿಕ್ಷಕಿಯರಾದ ಶ್ರೀಮತಿ ಶ್ವೇತಾ ಪಿ., ಶ್ರೀಮತಿ ಚೈತನ್ಯ ಕಾರ್ಯಕ್ರಮ ನಿರೂಪಿಸಿದರು.