ಸುಳ್ಯದ ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಪೋಷಣಾ ಅಭಿಯಾನ ಮತ್ತು ಮೆಟ್ರಿಕ್ ಮೇಳ

0

ಸುಳ್ಯದ ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಜು.12ರಂದು ಪೋಷಣಾ ಅಭಿಯಾನ ಮತ್ತು ಮೆಟ್ರಿಕ್ ಮೇಳವನ್ನು ಆಯೋಜಿಸಲಾಗಿತ್ತು. ಮಕ್ಕಳಲ್ಲಿ ಪೌಷ್ಟಿಕಾಂಶದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ವ್ಯಾಪಾರ ವಹಿವಾಟು ಕಲಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘ ಸುಳ್ಯ ಇದರ ಅಧ್ಯಕ್ಷರಾದ ಧನಂಜಯ ಅಡ್ಡಂಗಾಯರವರು ದೈಹಿಕ ಆರೋಗ್ಯ ವೃದ್ಧಿ ಆಗಬೇಕಾದರೆ ಪೌಷ್ಟಿಕಾಂಶವನ್ನು ಒಳಗೊಂಡಿರುವ ಸಮತೋಲಿತ ಆಹಾರ ಪದ್ಧತಿಯನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದುದು ಅಗತ್ಯ ಹಾಗೂ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉತ್ತಮ ಜೀವನ ಪಾಠ ಕಲಿಸುತ್ತವೆ ಇದರ ಜೊತೆಗೆ ವ್ಯಾವಹಾರಿಕ ಜ್ಞಾನವನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಸುಳ್ಯ ತಾಲೂಕಿನ ಖ್ಯಾತ ಪ್ರಸೂತಿ ತಜ್ಞರಾಗಿರುವ ಡಾ| ವೀಣಾ ರವರು ಪೋಷಣಾ ಅಭಿಯಾನದ ಅಂಗವಾಗಿ ಪೌಷ್ಟಿಕಾಂಶ ಆಹಾರದ ಮಹತ್ವದ ಬಗ್ಗೆ ಅತ್ಯುತ್ತಮ ಮಾಹಿತಿ ಕಾರ್ಯಕ್ರಮವನ್ನು ನೀಡಿದರು. ಅತಿಥಿಗಳಾದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿರುವ ಶ್ರೀಮತಿ ಸ್ವರ್ಣಕಲಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀ ಶಾರದಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿರುವ ಶ್ರೀಮತಿ ಭಾರತಿ.ಪಿ. ಉಪಸ್ಥಿತರಿದ್ದು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಯಾಗಿರುವ ಶ್ರೀಮತಿ ಪ್ರಭಾವತಿ.ಎಸ್. ಧನ್ಯವಾದ ಸಮರ್ಪಿಸಿದರು. ವಿಜ್ಞಾನ ಶಿಕ್ಷಕಿ ಮೈತ್ರಿ ಎಂ.ಬಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪೋಷಕರು ಪಾಲ್ಗೊಂಡಿದ್ದರು. ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ತುಂಬು ಉತ್ಸಾಹದಿಂದ ಪಾಲ್ಗೊಂಡು ಪೌಷ್ಟಿಕಾಂಶಯುಕ್ತ ಆಹಾರದ ಬಗ್ಗೆ ಮತ್ತು ವ್ಯವಹಾರದ ಬಗ್ಗೆ ಜ್ಞಾನವನ್ನು ಪಡೆದುಕೊಂಡರು.