ಕಸಾಪ ಸುಳ್ಯ ಹೋಬಳಿ ಘಟಕದಿಂದ ಕಾಂತಮಂಗಲ ಶಾಲೆಯಲ್ಲಿ ಚಿಣ್ಣರೊಂದಿಗೆ ಚಿಲಿಪಿಲಿ

0

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕವು ಹಮ್ಮಿಕೊಂಡಿರುವ “ಚಿಣ್ಣರೊಂದಿಗೆ ಚಿಲಿಪಿಲಿ ಗಾನ – ಕತಾ -ಯಾನ” ಸರಣಿ ಕಾರ್ಯಕ್ರಮದ ಐದನೇ ಕಾರ್ಯಕ್ರಮವು ಜು. 12 ರಂದು ಕಾಂತಮಂಗಲದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾವನಾ ಸಂಗೀತ ಶಾಲೆಯ ಸಂಚಾಲಕ ಕೆ.ಆರ್. ಗೋಪಾಲಕೃಷ್ಣ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ ಭಾಗವಹಿಸಿದ್ದರು.


ಶಾಲಾ ಶಿಕ್ಷಕಿ ಶ್ರೀಮತಿ ಆಶಾ ಕೃಷ್ಣಾನಂದ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸ್ವರ್ಣಲತಾ ವಂದಿಸಿದರು. ಶಿಕ್ಷಕಿ ಶ್ರೀಮತಿ ಮೋಹಿನಿ ಕೆ.ಜಿ, ಗೌರವ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಹಾಗೂ ಅತಿಥಿ ಶಿಕ್ಷಕಿ ಶ್ರೀಮತಿ ಸವಿತಾ ಇವರುಗಳು ಸಹಕರಿಸಿದರು. ಸುಮಾರು ಒಂದೂವರೆ ಗಂಟೆಯ ಕಾಲ ನಡೆಸಿದ ಕಾರ್ಯಕ್ರಮದಲ್ಲಿ ಶಾಲಾಮಕ್ಕಳಿಗಾಗಿ ಹಾಡುಗಳನ್ನು ಹಾಡಿ, ಕತೆಯನ್ನು ಹೇಳಿ ಮನೋಲ್ಲಾಸವನ್ನು ನೀಡಿದ್ದು ಮಕ್ಕಳು ಇದರಲ್ಲಿ ಸಂಪೂರ್ಣ ತೊಡಗಿ ಆನಂದಿಸಿದರು.
ಕಸಾಪ ಸುಳ್ಯ ಹೋಬಳಿ ಘಟಕವು ತನ್ನ ಹೋಬಳಿ ವ್ಯಾಪ್ತಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಈ ಕಾರ್ಯಕ್ರಮವನ್ನು ಯೋಜಿಸಿದ್ದು ಪ್ರತೀ ಶನಿವಾರ ಆಯ್ದ ಶಾಲೆಯಲ್ಲಿ ಕಾರ್ಯಕ್ರಮ ನೀಡುತ್ತಾ ಬರುತ್ತಿದೆ. ಈ ಮೊದಲು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರು ಹಾಗೂ ಕೊಯಿಕುಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ.