ನ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚೆ
ನೀರು ಸರಬರಾಜಿನ ಗುತ್ತಿಗೆದಾರರು ನಗರ ಪಂಚಾಯತ್ ಅಧಿಕಾರಿಗಳಿಗೆ ಹಂಚಲು ಇದೆ ಎಂದು ಹೇಳಿ 12 ಸಾವಿರ ಹೆಚ್ಚುವರಿ ನೀಡಬೇಕೆಂದು ಕೇಳಿದ್ದನ್ನು ನಾನು ಪ್ರಶ್ನಿಸಿದ್ದೇನೆ. ಅವರೇ ನನಗೆ ಬೈದು ಹೋಗುವಾಗ ಜಾರಿ ಬಿದ್ದಿದ್ದು ನನ್ನ ಮೇಲೆಯೇ ಪೋಲೀಸ್ ದೂರು ನೀಡಿದ್ದಾರೆ ಎಂದು ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರು ಸಾಮಾನ್ಯ ಸಭೆಯಲ್ಲಿ ಬೇಸರ ತೋಡಿಕೊಂಡ ಘಟನೆ ನಡೆದಿದೆ.
ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ರವರು “ನೀರು ಸರಬರಾಜು ಗುತ್ತಿಗೆದಾರರಾದ ಸುಧಾಮರು 12 ಸಾವಿರ ಹೆಚ್ಚುವರಿ ಬಿಲ್ ಕೊಡಬೇಕು. ಅದು ಅಧಿಕಾರಿಗಳಿಗೆ ಕೊಡಲು ಇದೆ ಎಂದು ಹೇಳಿದರು. ಈ ವಿಚಾರ ರಸ್ತೆಯಲ್ಲಿ ಮಾತನಾಡುವುದಲ್ಲ. ಬಿಲ್ ಏನು ಕೊಡಿ. ಕಚೇರಿಯಲ್ಲಿ ಮಾತನಾಡೋಣ ಎಂದು ನಾನು ಹೇಳಿದ್ದೆ. ಕಚೇರಿಯಲ್ಲಿ ಮಾತನಾಡುವಾಗ ನಾನು ಸರಿಯಾದ ಲೆಕ್ಕಚಾರ ಕೊಡಿ ಎಂದು ಕೇಳಿದೆ. ಈ ವೇಳೆ ಅವರು ಮಾತನಾಡುತ್ತಾ ನನ್ನ ವೈಯಕ್ತಿಕ ವಿಚಾರದ ಕುರಿತು ಮಾತನಾಡಿದರು. ವೈಯಕ್ತಿಕ ವಿಚಾರ ಮಾತನಾಡಬೇಡಿ ಎಂದು ಹೇಳಿದ ನಾನು ಬಿಲ್ ಏನಿದೆ ಲೆಕ್ಕಚಾರ ಇಟ್ಟು ಮಾತನಾಡಿ ಎಂದು ಮತ್ತೆ ಹೇಳಿದೆ. ನಿಮ್ಮಲ್ಲಿ ನಾನು ಸುಧಾಮರು ನಾನು 12 ಸಾವಿರ ಕೇಳಿಯೇ ಇಲ್ಲ ಎಂದರು. ಬಿಲ್ ಗೆಂದು ಬಂದವರಲ್ಲಿಯೂ ವಿಚಾರಿಸಿದಾಗ ಅದು ಅಧಿಕಾರಿಗಳಿಗೆ ಹಂಚಲು ಇದೆಯಂತೆ ಎಂದು ಅವರು ಕೂಡಾ ನನ್ನಲ್ಲಿ ಹೇಳಿದರು. ಆದ್ದರಿಂದ ನಾನು ಕೊಡಲು ಒಪ್ಪಲಿಲ್ಲ. ಸುಧಾಮರು ಆ ಇಬ್ಬರಿಗೆ ಕೆಟ್ಟದ್ಧಾಗಿ ಬೈದುಕೊಂಡು ಛೇಂಬರಿಂದ ಹೊರಗೆ ಹೋದರು. ಈ ವೇಳೆ ಅವರು ಜಾರಿಬಿದ್ದರು. ಅವರಿಗೆ ಗಾಯವಾಯಿತು. ಬಳಿಕ ಅವರ ಕಡೆಯಿಂದ ನನ್ನ ಮೇಲೆ ಪೋಲೀಸ್ ದೂರು ನೀಡಿದರು. ನನ್ನದಲ್ಲದ ತಪ್ಪಿಗೆ ನನ್ನ ಮೇಲೆ ದೂರು ನೀಡುವಂತಾಯಿತು. ಪೋಲೀಸರು ನನ್ನಿಂದ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ವಿವರ ನೀಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಗುತ್ತಿಗೆದಾರರು ಬೈದಿರುವುದು ಅಕ್ಷಮ್ಯ ಎಂದು ಸದಸ್ಯ ವೆಂಕಪ್ಪ ಗೌಡರು ಹೇಳಿದರೆ, ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಅವಮಾನ ಮಾಡಿರುವುದು ಸರಿಯಲ್ಲ ಎಂದು ಸದಸ್ಯ ಶರೀಫ್ ಕಂಠಿ ಹೇಳಿದರು.
ಬಳಿಕ ಮಾತನಾಡಿದ ಆಡಳಿತ ಪಕ್ಷದ ಸದಸ್ಯ ವಿನಯ ಕಂದಡ್ಕರು “ಇದು ಗಂಭೀರವಾದ ವಿಷಯ. ಪಂಚಾಯತ್ ನಲ್ಲಿ ಗುತ್ತಿಗೆದಾರರೊಬ್ಬರು ಬೈದಿರುವುದು ಸರಿಯಲ್ಲ. ನನಗೆ ವಿಷಯ ಗೊತ್ತಾದಾಗ ನಾನು ಅವರ ಮಗನಲ್ಲಿ ವಿಚಾರಿಸಿದೆ. ನಮಗೆ ನಷ್ಟ ಪರಿಹಾರ ಕೊಡಬೇಕೆಂದು ಮಗ ಹೇಳಿದರು. ಅದು ಆಗ್ತಾದಾ? ಈ ರೀತಿ ಕಂಪ್ಲೈಂಟ್ ಕೊಡ್ತಾರೆಂದಾದರೆ ಅವರನ್ನು ಪಂಚಾಯತ್ ನಲ್ಲಿಟ್ಟುಕೊಂಡು ಏನು ಮಾಡೋದು. ಕೆಲಸದಿಂದ ತೆಗೆಯೊದೇ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ. ಪ್ಲಮ್ಮಿಂಗ್ ನವರದ್ದು ಎಲ್ಲರದ್ದೂ ಸಮಸ್ಯೆಯೇ. ಓವರ್ ಬಿಲ್ ಸಮಸ್ಯೆ ಇದೆ ಎಂದು ಹೇಳಿದರು.
” ಸುಧಾಮರು ನಮ್ಮ ವಾರ್ಡ್ ನಲ್ಲಿ ಹಿಂದೆ ನೀರು ಬಿಡುತ್ತಿರುವಾಗ ಅವರ ಸಮಸ್ಯೆ ಇದೆ ಎಂದು ನಾನು ಸಭೆಯಲ್ಲಿ ಹೇಳಿದ್ದೆ. ಆಗ ವಿನಯ ಕಂದಡ್ಕರು ಶೀತ ಇದೆ ಎಂದು ಮೂಗು ಕಟ್ ಮಾಡಲು ಆಗ್ತದಾ? ಎಂದು ಅವರ ಪರವಾಗಿ ಮಾತನಾಡಿದ್ದರು. ಆಗಲೇ ಕ್ರಮಕೈಗೊಳ್ಳುತ್ತಿದ್ದರೆ ಈಗ ಈ ಸಮಸ್ಯೆ ಆಗುತ್ತಿರಲಿಲ್ಲ” ಎಂದು ಸದಸ್ಯ ಡೇವಿಡ್ ದೀರ ಕ್ರಾಸ್ತ ಹೇಳಿದರು.









“ಎಲ್ಲ ಸಿಬ್ಬಂದಿಗಳಿದ್ದು ಸಭೆ ಮಾಡುತ್ತೇವೆ. ಈ ಕುರಿತು ಅವರಲ್ಲಿ ನಾನು ಮಾತನಾಡಿದ್ದೇನೆ. ರಾಜಿಗೆ ಒಪ್ಪಿದ್ದಾರೆ. ಅವರಿಗೆ ಸೂಚನೆ ನೀಡುತ್ತೇವೆ” ಎಂದು ಅಧ್ಯಕ್ಷೆ ಶಶಿಕಲಾ ಹೇಳಿದರು.
“ಪಂಚಾಯತ್ ಸದಸ್ಯರಿಗೆ ಗುತ್ತಿಗೆದಾರರು ಬೈತಾರೆಂದರೆ ಏನು ಅರ್ಥ. ಅದು ಪಂಚಾಯತ್ ನಲ್ಲೇ ಎಂದು ಹೇಳಿದ ವೆಂಕಪ್ಪ ಗೌಡರು, ಸುಧಾಮ ಬಿಜೆಪಿ ಕಾರ್ಯಕರ್ತ” ಎಂದು ಹೇಳಿದರು.
“ಕಾರ್ಯಕರ್ತನಾದರೂ ತಪ್ಪು ಮಾಡಿದ್ದರೆ ತಪ್ಪೇ. ಅದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ವಿನಯ ಕಂದಡ್ಕ ಹೇಳಿದರು.
“ಸುಧಾಮರನ್ನು ಕೆಲಸದಿಂದ ತೆಗೆಯಬೇಕು” ಎಂದು ಕಿಶೋರಿ ಶೇಟ್ ಒತ್ತಾಯಿಸಿದರು. ಈ ಚರ್ಚೆ ನಡೆಯುತ್ತಿದ್ದಂತೆಯೇ ಮಾತನಾಡಿದ ಸದಸ್ಯ ರಿಯಾಜ್ ಕಟ್ಟೆಕಾರ್ ರವರು “12 ಸಾವಿರ ರೂ ಇಲ್ಲಿ ಯಾವ ಅಧಿಕಾರಿಗೆ ನೀಡಲು ಎಂದು ಅವರು ಹೇಳಿದ್ದಾರ ?” ಎಂದು ಪ್ರಶ್ನಿಸಿದರು.
“ಆಗ ಮಾತನಾಡಿದ ವಿನಯ ಕಂದಡ್ಕರು “ನಾನು 12 ಸಾವಿರದ್ದೂ ಮಾತನಾಡೋದಿಲ್ಲ. 25 ಸಾವಿರದ್ದೂ ಮಾತನಾಡಲ್ಲ. ಎಲ್ಲರೂ ತೆಗಿತಾರೆ. ಆದರೆ ಅವನ ಮಾತು ಹಿಡಿತದಲ್ಲಿರಬೇಕು. ಹಿಂದೆ ಪ್ರವೀಣ್ ನಾಯಕ್ ರು ಅಧ್ಯಕ್ಷರ ಜತೆ ಮಾತನಾಡಿದಾಗ ಅವರನ್ನು ಸಭೆಗೆ ಕರೆಸಿಲ್ಲವೇ ?. ಇಲ್ಲಿಯೂ ನಾವು ಕ್ರಮ ಮಾಡಬೇಕಲ್ಲವೇ” ಎಂದು ಹೇಳಿದರು.
“ನಾನಂತೂ ಇದುವರೆಗೆ ಒಂದು ರೂ ಲಂಚ ಪಡೆದಿಲ್ಲ” ಎಂದು ಕಿಶೋರಿ ಶೇಟ್ ಸಭೆಯಲ್ಲಿ ಹೇಳಿದರು.
ಆಗ ಮಾತನಾಡಿದ ವೆಂಕಪ್ಪ ಗೌಡರು “ಏನು ಮಾಡುತ್ತೀರೊ ಮಾಡಿ. ಕ್ರಮ ಕೈಗೊಳ್ಳಿ ಎಂದರಲ್ಲದೇ ಈ ವಿಚಾರವನ್ನೆಲ್ಲ ನೀವು ನಿಮ್ಮ ಹೆಡ್ ಆಫೀಸ್ ನಲ್ಲಿ ಕುಳಿತು ಮಾತನಾಡಿಕೊಂಡು ಬನ್ನಿ” ಎಂದರು.
ಅವರ ಮಾತಿಗೆ ಆಡಳಿತ ಪಕ್ಷದ ಸದಸ್ಯರು ಪದೇ ಪದೇ ಹೆಡ್ ಆಫೀಸ್ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದರು. ಅಲ್ಲಿಗೆ ಆ ವಿಷಯ ನಿಂತಿತು.
12 ಸಾವಿರದ ಗಂಭೀರ ವಿಷಯ ಸಭೆಯಲ್ಲಿ ಪ್ರಸ್ತಾಪವಾದರೂ ಯಾವೊಬ್ಬ ಸದಸ್ಯರೂ ಕೂಡಾ ಈ ಕುರಿತು ಸಮಗ್ರ ತನಿಖೆಗೆ ನಡೆಸಿ ವರದಿ ಸಭೆಯಲ್ಲಿ ಇಡಬೇಕೆಂದು ಒತ್ತಾಯಿಸದೇ ಇರುವುದು ಆಶ್ಚರ್ಯ.










