ನಿವೃತ್ತ ದೈಹಿಕ ಶಿಕ್ಷಣ ಅಧೀಕ್ಷಕ ದಿ. ಕುಶಾಲಪ್ಪ ನಾಳ ರವರಿಗೆ ಶ್ರದ್ಧಾಂಜಲಿ ಸಭೆ
ಸೆ. 25ರಂದು ನಿಧನರಾದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅಧೀಕ್ಷಕ ಎನ್. ಕುಶಾಲಪ್ಪ ಗೌಡ ನಾಳರವರ ಶ್ರದ್ದಾಂಜಲಿ ಸಭೆ ಮತ್ತು ವೈಕುಂಠ ಸಮಾರಾಧನೆಯು ಅ. 10ರಂದು ಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ದಿ. ಕುಶಾಲಪ್ಪ ಗೌಡರ ಬಗ್ಗೆ ನುಡಿನಮನ ಸಲ್ಲಿಸಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ತುಕಾರಾಮ ಏನೇಕಲ್ಲು ಮಾತನಾಡಿ ವಿಶಾಲ ಮನಸ್ಸಿನ, ಎಲ್ಲಾ ವಿಚಾರಗಳಲ್ಲೂ ಮುತುವರ್ಜಿ ವಹಿಸುತ್ತಿದ್ದ, ಎಲ್ಲರಿಗೂ ಮಾರ್ಗದರ್ಶನವಾಗಿದ್ದ ವ್ಯಕ್ತಿ ಯನ್ನು ಕಳೆದುಕೊಂಡಿದ್ದೇವೆ ಎಂದರು.

ಹೈಕೋರ್ಟ್ ನ್ಯಾಯವಾದಿ ಧರ್ಮಪಾಲ ಎಣ್ಣೆಮಜಲು ರವರು ಮಾತನಾಡಿ ಕುಶಾಲಪ್ಪ ಗೌಡರು ಯಾವುದೇ ವಿಚಾರವನ್ನು ಕೂಲಂಕುಷ ವಿಮರ್ಶೆ ಮಾಡಿ ಒಪ್ಪಿಕೊಳ್ಳುವ ಗುಣ ಅವರದ್ದಾಗಿತ್ತು. ಎಲ್ಲಾ ರಂಗದಲ್ಲೂ ಕೈಯಾಡಿಸಿ, ರಂಗು ರಂಗಿನ ಬದುಕನ್ನು ಸವೆಸಿದವರು. ಎಲ್ಲರಿಗೂ ಒಂದು ರೀತಿಯ ಮಾದರಿ ವ್ಯಕ್ತಿಯಾಗಿ ಬದುಕಿದವರು. ಯಾವ ರೀತಿ ಬದುಕು ಸಾಗಿಸಬೇಕು ಎಂದು ಸಮಾಜಕ್ಕೆ ತೋರಿಸಿಕೊಟ್ಟವರು. ಅವರ ಬಗ್ಗೆ ಜೀವನ ಚರಿತ್ರೆ ಬರೆದು ಹೊರ ತರುವ ಕೆಲಸ ಅತೀ ಹೆಚ್ಚು ಶಿಕ್ಷಕರಿರುವ ಏನೇಕಲ್ಲು ಗ್ರಾಮದ ಶಿಕ್ಷಕರಿಂದ ಆಗಬೇಕಿದೆ ಎಂದರು.
















ಸಹಕಾರಿ ಧುರೀಣ ಹಾಗೂ ನಾಳ ಕುಟುಂಬದ ನಿಕಟ ಬಂಧು ಜಾಕೆ ಮಾಧವ ಗೌಡರು ಮಾತನಾಡಿ ಹುಟ್ಟು ಮತ್ತು ಸಾವಿನ ಮಧ್ಯೆ ಯಾವ ರೀತಿ ಬದುಕು ಸಾಗಿಸಬೇಕೆಂದು ತೋರಿಸಿ ಕೊಟ್ಟವರು ಕುಶಾಲಪ್ಪ ಗೌಡರು.
ಬದುಕಿನಲ್ಲಿ ಹೇಗೆ ಸಾಗಬೇಕು ಎಂದು ಮುಂದಿನ ಮಕ್ಕಳಿಗೆ
ಅವರ ನಡೆ ನುಡಿಯಲ್ಲಿ ತೋರಿಸಿ ಕೊಟ್ಟಿದ್ದಾರೆ. ಅವರ ಸಾರ್ಥಕ ಜೀವನವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ಕೃಷಿಯಲ್ಲಿಯೂ ಸರಕಾರಿ ಉದ್ಯೋಗದಲ್ಲಿಯೂ ಆದರ್ಶ ಪ್ರಾಯರಾಗಿದ್ದವರು. ಯಾವತ್ತಿಗೂ, ಎಲ್ಲಿಯೂ ತಮ್ಮ ಸಿರಿವಂತಿಕೆ ತೋರಿಸಿದವರಲ್ಲ. ಒಳ್ಳೆಯ ಸಂಬಂಧಿಕರಾಗಿದ್ದವರು. ತಮ್ಮ ಮಕ್ಕಳಿಗೆ ಅತ್ಯುತ್ತಮ ಸಂಬಂಧ ಗಳನ್ನು ಹುಡುಕಿ ಮದುವೆ ಮಾಡಿಸಿ ತಮ್ಮ ಜೀವನದಲ್ಲಿ ಸಾರ್ಥಕ್ಯ ಕಂಡವರು. ಅಲ್ಲದೇ ಏನೇಕಲ್ಲು ಮತ್ತು ಅವರ ಬಂಧುಮಿತ್ರರಿಗೆ ಗೌರವ ತಂದು ಕೊಟ್ಟವರು. ಅವರಿಗೆ ಸ್ವರ್ಗ ಪ್ರಾಪ್ತಿಯಾಗಲಿ ಎಂದು ಹೇಳಿದರು.
ಕರುಣಾಕರ ಎಣ್ಣೆಮಜಲು ಶ್ರದ್ದಾಂಜಲಿ ಸಭೆಯನ್ನು ನಿರೂಪಿಸಿದರು.
ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಸಭೆಯಲ್ಲಿ ಪತ್ನಿ ತಾರಾ ಕುಶಾಲಪ್ಪ ಗೌಡ, ಮಗ ಮನೋಹರ ನಾಳ, ಮಹೇಶ್ ನಾಳ, ಮುರಳಿ ನಾಳ, ಪುತ್ರಿ ಮಧುರ ಕೃಷ್ಣಕುಮಾರ್ ಪುಣೆ, ಹಾಗೂ ನಾರಾಯಣ ಗೌಡ ಶಾಂತಿಗೋಡು, ದಾಮೋದರ ಗೌಡ ಬೆಳ್ತಂಗಡಿ, ಪದ್ಮನಾಭ ಗೌಡ ಕೇವಳ, ಮಾಯಿಲಪ್ಪ ಗೌಡ ಕೊಲ್ಯ, ಬಿ. ಎಸ್. ಶ್ರೀನಿವಾಸ್ ಬೆಂಗಳೂರು, ಶಶಿಧರ ಜಾಕೆ, ನವೀನ್ ಕುಮಾರ್ ಜಾಕೆ, ಪ್ರಮುಖರಾದ ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ, ಪಿ. ಸಿ. ಜಯರಾಮ, ಜಾಕೆ ಸದಾನಂದ ಗೌಡ, ರೇಣುಕಾ ಸದಾನಂದ ಜಾಕೆ, ಸೀತಾರಾಮ ಎಣ್ಣೆಮಜಲು, ಡಾ. ಕೃಷ್ಣಪ್ಪ ಪಡ್ಡಂಬೈಲು, ರವೀಂದ್ರನಾಥ ಕೇನ್ಯ, ಎಸ್. ಮಣಿ ಮುಂಡೋಡಿ, ಜಯರಾಮ ಹಾಡಿಕಲ್ಲು ಸೇರಿದಂತೆ ದಿ. ಕುಶಾಲಪ್ಪ ಗೌಡರ ಸಹೋದರಿಯರು, ಸೊಸೆಯಂದಿರು, ಮೊಮ್ಮಕ್ಕಳು, ಅಪಾರ ಬಂಧುಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದು ಶ್ರದ್ಧಾಂಜಲಿ ಅರ್ಪಿಸಿದರು.










