ಸಂಜೀವ ಕುದ್ಪಾಜೆಯವರು ಎನ್.ಎಸ್.ಎಸ್. ಮೂಲಕ ಹೆಚ್ಚು ಜನರ ಸಂಪರ್ಕ ಹೊಂದಿದ್ದಾರೆ – ಡಾ. ರುದ್ರಕುಮಾರ್ ಎಂ.ಎಂ.









ನಮ್ಮ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ಉಪನ್ಯಾಸಕರಾಗಿ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಲ್ಲಿ ಸುಮಾರು 27 ವರ್ಷಗಳಿಂದ ಯೋಜನಾಧಿಕಾರಿಯಾಗಿ ದುಡಿದಿರುವ ಸಂಜೀವ ಕುದ್ಪಾಜೆಯವರು ಹೆಚ್ಚು ಜನರ ಸಂಪರ್ಕವನ್ನು ಪಡೆದಿದ್ದಾರೆ. ನಮ್ಮ ವಿದ್ಯಾಸಂಸ್ಥೆಯಲ್ಲಿಯೇ ವಿದ್ಯಾರ್ಥಿಯಾಗಿ ಇಲ್ಲಿಯೇ ಉಪನ್ಯಾಸಕರಾಗಿ ಇಲ್ಲಿಯೇ ನಿವೃತ್ತಿ ಹೊಂದಿದ ಮೊದಲ ವ್ಯಕ್ತಿ ಇವರು. ಕೆವಿಜಿ ಸಂಸ್ಥೆಗಳ ಬೆಳವಣಿಗೆಗಳ ಬಗ್ಗೆ ಹೆಚ್ಚು ತಿಳಿದವರೂ ಸಂಜೀವ ಕುದ್ಪಾಜೆಯವರು ಎಂದು ಸುಳ್ಯ ನೆಹರೂ ಮೆಮೊರಿಯಲ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ ಹೇಳಿದರು. ಅವರು ಡಿ. 12ರಂದು ಕಾಲೇಜಿನ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ನಿವೃತ್ತ ಉಪನ್ಯಾಸಕ ಸಂಜೀವ ಕುದ್ಪಾಜೆಯವರಿಗೆ ನಡೆದ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಿವೃತ್ತರಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೆರಾಲ್ ಮಾತನಾಡಿ ಕುದ್ಪಾಜೆಯವರು ಶಿಕ್ಷಕರಾಗಿ 4 ಗೋಡೆಗಳ ಮಧ್ಯೆ ಪಾಟ ಮಾಡಿರುವುದು ಮಾತ್ರ ಅಲ್ಲ ಎನ್.ಎಸ್.ಎಸ್. ಮೂಲಕ ಊರೂರು ಸುತ್ತಿ ಸರ್ವಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ರೋಟರಿ ಕ್ಲಬ್ ನಂತಹ ಸಮಾಜ ಸೇವಾ ಸಂಸ್ಥೆಗಳ ಮೂಲಕ ಸೇವೆ ಸಲ್ಲಿಸಿದ್ದಾರೆ ಎಂದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀಮತಿ ರತ್ನಾವತಿ ಡಿ, ಐಕ್ಯೂಎಸಿ ಶ್ರೀಮತಿ ಮಮತಾ ಪುರುಷೋತ್ತಮ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ವತಿಯಿಂದ ನಿವೃತ್ತರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿಯರಾದ ಕು. ಶ್ರೀಲಯಾ ಪ್ರಾರ್ಥಿಸಿದರು. ಕು. ಯಕ್ಷಿತಾ ಸ್ವಾಗತಿಸಿ, ಕು. ಅಕ್ಷತಾ ಎಂ.ಜೆ ವಂದಿಸಿದರು. ಸಂಜೀವ ಕುದ್ಪಾಜೆಯವರ ಬಗ್ಗೆ ಕು. ಪ್ರಾಪ್ತಿ ಕೆ.ಸಿ ಬರೆದ ಅರೆಭಾಷೆ ಕವನವನ್ನು ಕು. ಮನಸ್ವಿ ಪಿ ಮತ್ತು ಹಳೆವಿದ್ಯಾರ್ಥಿ ಕು. ರಕ್ಷಿತಾ ಕಲ್ಚಾರ್ ಬರೆದ ಶುಭ ಹಾರೈಕೆಯನ್ನು ಕು. ಚೈತ್ರ ಕೆ.ಟಿ ವಾಚಿಸಿದರು. ಕು. ಯಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಕು. ಅನುಷಾ ಎಸ್. ಸಂಜೀವ ಕುದ್ಪಾಜೆಯವರನ್ನು ಪರಿಚಯಿಸಿದರು.










