ಮೇ.20 – 21 ಕೊಡಿಯಾಲಬೈಲು ಮಹಾಮ್ಮಾಯಿ ಮಾರಿಯಮ್ಮ ದೇವಸ್ಥಾನ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ

0

ಸುಳ್ಯ ಕೊಡಿಯಾಲಬೈಲು ಶ್ರೀ ಮಹಾಮ್ಮಾಯಿ ಮಾರಿಯಮ್ಮ ದೇವಸ್ಥಾನ ಮತ್ತು ಪರಿವಾರ ದೈವಗಳ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಮೇ.20 ಮತ್ತು ಮೇ.21 ರಂದು ನಡೆಯಲಿದೆ.

ಈ ಕುರಿತು ಮೇ.13 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಉಬರಡ್ಕರವರು ಮೇ.2೦ ಮತ್ತು ೨೧ರಂದು ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ನಡೆಸಲಾಗುವುದು. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ದೇವಸ್ಥಾನ 2೦ ಲಕ್ಷ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದೆ. ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಕಲಶೋತ್ಸವ ನಡೆಯುವುದು. ಮೇ.೨೦ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಹಸಿರುವಾಣಿ ಮೆರವಣಿಗೆ, ಬಳಿಕ ಉಗ್ರಾಣ ತುಂಬಿಸುವುದು. ಸಂಜೆ ಭಜನಾ ಕಾರ್ಯಕ್ರಮ. ತಂತ್ರಿಗಳ ಆಗಮನದ ಬಳಿಕ ದೇವತಾ ಪ್ರಾರ್ಥನೆ ನಡೆದು ಪೂಜಾ ಕಾರ್ಯ ನಡೆಯುವುದು. ಮೇ.೨೧ರಂದು ಬೆಳಗ್ಗಿನಿಂದ ಪೂಜೆಗಳು ನಡೆದು ೧೨.೨೩ರ ಮುಹೂರ್ತದಲ್ಲಿ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ನಿತ್ಯ ನೈಮಿತ್ಯಾದಿಗಳ ನಿರ್ಣಯ ಪ್ರಸಾದ ವಿತರಣೆ – ಅನ್ನಸಂತರ್ಪಣೆ ನಡೆಯುವುದು. ಅಪರಾಹ್ನ ಧಾರ್ಮಿಕ ಸಭೆ ನಡೆಯಲಿದೆ.


ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ , ಸಂಗೀತ ರಸಮಂಜರಿ ನಡೆಯುವುದು. ರಾತ್ರಿ ಶ್ರೀ ಗುಳಿಗದೈವ ಪಾಷಾಣಮೂರ್ತಿ ದೈವದ ನೇಮೋತ್ಸವ. ಮೇ.೨೨ರಂದು ಶ್ರೀ ಧರ್ಮದೈವದ ನೇಮೋತ್ಸವ ಬಳಿಕ ಅಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯುವುದು.
ಮೇ.೨೩ ಮತ್ತು ಮೇ.೨೪ರಂದು ಶ್ರೀ ಮಹಾಮ್ಮಾಯಿ ಮಾರಿಯಮ್ಮ ದೇವರ ಮತ್ತು ಪರಿವಾರ ದೈವಗಳ ಮಾರಿಪೂಜೆ ನಡೆಯುವುದು ಎಂದು ಅವರು ವಿವರ ನೀಡಿದರು.
ಸೇವಾ ಸಮಿತಿ ಗೌರವಾಧ್ಯಕ್ಷ ದಿಲೀಪ್ ಕೊಡಿಯಾಲಬೈಲು ಮಾತನಾಡಿ “೨೦ ಲಕ್ಷ ರೂ ವೆಚ್ಚದಲ್ಲಿ ಎರಡು ಗುಡಿಗಳ ನಿರ್ಮಾಣ ಮಾಡಲಾಗಿದೆ. ಸಚಿವ ಎಸ್.ಅಂಗಾರರು ಸರಕಾರದ ಅನುದಾನ ನೀಡಿರುವುದಲ್ಲದೆ, ವೈಯಕ್ತಿಕವಾಗಿಯೂ ರೂ. ೨ ಲಕ್ಷ ನೀಡಿದ್ದಾರೆ. ಆರ್.ಕೆ. ನಾಯರ್ ರವರು ಕೂಡಾ ೨ ಲಕ್ಷ ರೂ ನೀಡಿದ್ದಾರೆ. ದಾನಿಗಳ ಸಹಕಾರದಿಂದ ಈ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೆ.ಎನ್., ಸೇವಾ ಸಮಿತಿ ಅಧ್ಯಕ್ಷ ಶ್ರವಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶಂಕರ, ಪರಿಸರದ ನಿವಾಸಿಗಳಾದ ತಿಮ್ಮಪ್ಪ, ಶಂಕರ, ಕೃಷ್ಣಪ್ಪ, ಗೋವಿಂದ, ಪ್ರಶಾಂತ, ಪ್ರದೀಪ, ಮೋಹನ್, ಪ್ರವೀಣ್, ಕುಶಾಂತ್, ದೀಪಕ್ ಇದ್ದರು.