ವಿಶ್ವ ಅಧಿಕರಕ್ತದೊತ್ತಡ ಜಾಗೃತಿ ದಿನ- ಮೇ 17

0

ಪ್ರತಿ ವರ್ಷ ಮೇ 17 ರಂದು ವಿಶ್ವದೆಲ್ಲಡೆ ವಿಶ್ವ ಅಧಿಕ ರಕ್ತದೊತ್ತಡ ಜಾಗೃತಿ ದಿನ ಎಂದು ಆಚರಿಸಿ ಅಧಿಕ ರಕ್ತದೊತ್ತಡದಿಂದ ಉಂಟಾಗುವ ದೀರ್ಘಕಾಲಿಕ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಆಚರಣೆಯನ್ನು 2005 ರಲ್ಲಿ ಆರಂಭಿಸಲಾಯಿತು. 2023 ರ ಈ ಆಚರಣೆಯ ಧ್ಯೇಯವಾಕ್ಯ “Measure Your Blood Pressure Accurately , Control it, Live Longer” ಅಂದರೆ “ನಿಮ್ಮ ರಕ್ತದೊತ್ತಡವನ್ನು ತಿಳಿದುಕೊಳ್ಳಿ, ನಿಯಂತ್ರಿಸಿ ಮತ್ತು ಹೆಚ್ಚು ಕಾಲ ಬದುಕಿರಿ” ಎಂಬುದಾಗಿದೆ.


2000ನೇ ಇಸವಿಯಲ್ಲಿ ಭಾರತ ದೇಶದಲ್ಲಿ 118 ಮಿಲಿಯನ್ ಮಂದಿ ಅಧಿಕ ರಕ್ತದೊತ್ತಡ ರೋಗಿಗಳಿದ್ದು ಈ ಸಂಖ್ಯೆ 2025 ರಲ್ಲಿ 214 ಮಿಲಿಯನ್‍ಗಳಿಗೆ 2025 ರಲ್ಲಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಹಾಗಾದಲ್ಲಿ ಭಾರತ ವಿಶ್ವದ ಅಧಿಕ ರಕ್ತದೊತ್ತಡದ ರಾಜಧಾನಿ ಎಂಬ ಕುಖ್ಯಾತಿಯನ್ನುಗಳಿಸಲಿದೆ. ನಮ್ಮ ಭಾರತದೇಶದಲ್ಲಿ ಜನಸಂಖ್ಯೆಯ 75 ಶೇಕಡಾ ಮಂದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಮತ್ತು ವಿಪರ್ಯಾಸವೆಂದರೆ ಈ 75 ಶೇಕಡಾ ಮಂದಿಯಲ್ಲಿ 50 ಶೇಕಡಾ ಮಂದಿಗೆ ತಮಗೆ ಅಧಿಕ ರಕ್ತದೊತ್ತಡ ಇದೆ ಎಂಬುದರ ಅರಿವೆಯೇ ಇಲ್ಲ. ಮನುಷ್ಯರಲ್ಲಿ ಹೃದಯಾಘಾತ ಮತ್ತು ಸ್ಟ್ರೋಕ್(ಮೆದುಳಿನ ಆಘಾತ) ಉಂಟಾಗಲು ಮೂಲ ಕಾರಣ ಅಧಿಕ ರಕ್ತದೊತ್ತಡ ಆಗಿರುತ್ತದೆ. ಈ ಕಾರಣದಿಂದ ಮೇ ತಿಂಗಳನ್ನು ಅಧಿಕ ರಕ್ತದೊತ್ತಡ ಜಾಗೃತಿ ಮಾಸ ಎಂದು ಆಚರಿಸಿ ಜನರಲ್ಲಿ ಅಧಿಕ ರಕ್ತದೊತ್ತಡದಿಂದ ಉಂಟಾಗುವ ಆರೋಗ್ಯ ಸಂಬಂಧಿ ಸಮಸ್ಯೆಗಳು ಮತ್ತು ಅಪಾಯಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಿರಂತರವಾಗಿ ದೇಶದೆಲ್ಲೆಡೆ ಮಾಡಲಾಗುತ್ತಿದೆ.

ನಮ್ಮ ದೇಶದ ಪ್ರತಿ ಏಳರಲ್ಲಿ ಒಬ್ಬ ಭಾರತೀಯರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂಬುದು ನಂಬಲೇಬೇಕಾದ ಕಟು ಸತ್ಯ. ಇದೊಂದು ನಿಧಾನವಾಗಿ ಕೊಲ್ಲುವ ರೋಗವಾಗಿದ್ದು, ದಿನ ಬೆಳಗಾಗುವುದರಲ್ಲಿ ವ್ಯಕ್ತಿಯನ್ನು ಕೊಲ್ಲುವುದಿಲ್ಲ. ಹೃದಯ, ಕಿಡ್ನಿ ಮೆದುಳು, ಕಣ್ಣು, ಹೀಗೆ ಒಂದೊಂದು ಅಂಗಗಳನ್ನು ನಿಧಾನವಾಗಿ ನಿರ್ದಯವಾಗಿ ಹಾಳುಗೆಡವಿ ಸದ್ದಿಲ್ಲದೆ ಸಾವಿಗೆ ಮುನ್ನುಡಿ ಬರೆಯುತ್ತದೆ. ಈ ಕಾರಣದಿಂದಲೇ ಅಧಿಕ ರಕ್ತದೊತ್ತಡವನ್ನು ‘ನಿಶ್ಯಬ್ದ ಕೊಲೆಗಾರ’ ಅಥವಾ ಸೈಲೆಂಟ್ ಕಿಲ್ಲರ್ ಎಂದು ಕರೆಯುತ್ತಾರೆ. ಜೀವನಶೈಲಿಗೆ ಸಂಬಂಧಿಸಿದ ರೋಗ ಇದಾಗಿದ್ದು ಅನಿಯಂತ್ರಿತ ಆಹಾರ ಪದ್ಧತಿ, ದೈಹಿಕ ಪರಿಶ್ರಮವಿಲ್ಲದ ದೈನಂದಿನ ಜೀವನ, ಅತೀ ಒತ್ತಡದ ಜೀವನಶೈಲಿ ಮತ್ತು ಧೂಮಪಾನ, ಮಧ್ಯಪಾನಗಳಿಂದ ಕೂಡಿದ ಸೋಮಾರಿ ಆಲಸ್ಯ ಜೀವನಗಳೇ ಈ ರೋಗಕ್ಕೆ ಮೂಲಕಾರಣ ಎಂದು ಎಲ್ಲರಿಗೂ ತಿಳಿದಿದೆ. ಅತೀ ಸುಲಭವಾಗಿ ತಡೆಗಟ್ಟಬಹುದಾದ ಮತ್ತು ನಿಯಂತ್ರಿಸಬಹುದಾದ ರೋಗ ಇದಾಗಿದ್ದರೂ, ಮುಂದುವರಿದ ರಾಷ್ಟ್ರಗಳಲ್ಲಿ ಈ “ಸೈಲಂಟ್ ಕಿಲ್ಲರ್ ರೋಗ” “ಜೈಂಟ್ ಕಿಲ್ಲರ್” ಆಗಿ ಹೊರ ಹೊಮ್ಮಿರುವುದು ವಿಷಾದನೀಯ ಸಂಗತಿ. ಮೊದಲೆಲ್ಲಾ ಇಳಿ ವಯಸ್ಸಿನಲ್ಲಿ ಕಾಡುತ್ತಿರುವ ಈ ರೋಗ, ಈಗೀಗ ಮೂವತ್ತರ ಆಸುಪಾಸಿನಲ್ಲಿ ಕಂಡು ಬರುತ್ತಿರುವುದು ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಮತ್ತು ಕೆಲಸದ ವಾತಾವರಣವೇ ಇದಕ್ಕೆ ನೇರ ಕಾರಣ ಎಂದು ಸಾಬೀತಾಗಿದೆ. ನಿರಂತರವಾದ ತಲೆನೋವು, ಉಸಿರಾಟವಾಡುವಾಗ ಕಷ್ಟವಾಗುವುದು, ತಲೆ ಸುತ್ತಿದಂತಾಗುವುದು, ಎದೆ ನೋವು, ಎದೆ ಬಡಿತದ ಅರಿವು ಉಂಟಾಗುವುದು ಇವೆಲ್ಲವೂ ಹೆಚ್ಚಾಗುತ್ತಿರುವ ರಕ್ತದ ಒತ್ತಡದ ಸಾಮಾನ್ಯ ಲಕ್ಷಣಗಳು. ಸಾಮಾನ್ಯ ಮನುಷ್ಯರಿಗೆ ರಕ್ತದೊತ್ತಡ 120/80 (ಪಾದರಸದ ಎತ್ತರ) ಎಂದು ನಮಗೆಲ್ಲಾ ತಿಳಿದಿದೆ. ಆದರೆ ಇದೊಂದು ನಿರ್ದಿಷ್ಟ ಸಂಖ್ಯೆ ಆಗಿರದೇ ವ್ಯಕ್ತಿಯ ವಯಸ್ಸಿಗನುಗುಣವಾಗಿ ಒಂದಷ್ಟು ಹೆಚ್ಚು ಅಥವಾ ಕಡಮೆಯಾಗುವ ಸಾಧ್ಯತೆ ಇರುತ್ತದೆ. ಉದಾಹರಣೆ 30ರ ವಯಸ್ಸಿನಲ್ಲಿ 120/80 ಇದ್ದಲ್ಲಿ, 50ರ ವಯಸ್ಸಿನಲ್ಲಿ 140/90ನ್ನು ಸಹಜ ಎಂದು ತಿಳಿಯಲಾಗುತ್ತದೆ. ಒಟ್ಟಿನಲ್ಲಿ ವ್ಯಕ್ತಿಯ ವಯಸ್ಸು ಮತ್ತು ದೇಹ ಪ್ರಕೃತಿಯನ್ನು ನಿರ್ಧರಿಸಿ ವೈದ್ಯರೇ ರೋಗ ನಿರ್ಣಯ ಮಾಡುತ್ತಾರೆ.

ಕಾರಣಗಳು ಏನು?

  1. ಅಧಿಕ ದೇಹದ ತೂಕ ಮತ್ತು ದೇಹದಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಿದಾಗ.
  2. ದೈಹಿಕ ಪರಿಶ್ರಮ ಇಲ್ಲದ ಸೋಮಾರಿ ಜೀವನ ಶೈಲಿ.
  3. ಅತಿಯಾದ ಧೂಮಪಾನ ಮತ್ತು ಮಧ್ಯಪಾನ.
  4. ಅತಿಯಾದ ಕೆಫೇನ್‍ಯುಕ್ತ ಪಾನೀಯಗಳ ಸೇವನೆ.
  5. ಅತಿಯಾದ ಲವಣಗಳ ಸೇವನೆ.
  6. ನಿದ್ದೆಯಿಲ್ಲದ ಅತಿಯಾದ ಒತ್ತಡದ ಜೀವನ ಶೈಲಿ ಮತ್ತು ಕೆಲಸದ ವಾತಾವರಣ.
  7. ಯಾವುದೇ ನಿರ್ದಿಷ್ಟ ಕಾರಣಗಳಿಲ್ಲದೆಯೂ ರಕ್ತದೊತ್ತಡ ಬರಬಹುದು.

ತಡೆಗಟಗಟುವುದು ಹೇಗೆ?

  1. ನಿರಂತರವಾದ ದೈಹಿಕ ವ್ಯಾಯಾಮಗಳಾದ ಬಿರುಸು ನಡಿಗೆ. ಸೈಕ್ಲಿಂಗ್, ಸ್ವಿಮ್ಲಿಂಗ್, ಮಾಡುವುದರಿಂದ ಹೃದಯದ ಸಾಮಥ್ರ್ಯ ಮತ್ತು ಸ್ನಾಯಗಳು ಬಲಶೀಲವಾಗಿ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
  2. ಪೋಷಕಾಂಶಯುಕ್ತ ಸಮತೋಲಿತ ಆಹಾರ ಸೇವನೆ ಮಾಡತಕ್ಕದ್ದು. ಪ್ರೋಟಿನ್, ಶರ್ಕರಪಿಷ್ಠ, ಕೊಬ್ಬು, ವಿಟಮಿನ್, ಖನಿಜಾಂಶ ಮತ್ತು ಲವಣಗಳಿರುವ ಪರಿಪೂರ್ಣ ಆಹಾರ ಸೇವನೆ ಅತೀ ಅಗತ್ಯ.
  3. ದಿನವೊಂದರಲ್ಲಿ ಕನಿಷ್ಟ 10ರಿಂದ 12 ಗ್ಲಾಸು ನೀರು ಸೇವನೆ ಅತೀ ಅಗತ್ಯ. (2ರಿಂದ 3 ಲೀಟರ್)
    ಕೆಫೇನ್‍ಯುಕ್ತ ಕೃತಕ ಪೇಯಗಳು ಮತ್ತಷ್ಟು ನಿರ್ಜಲೀಕರಣಕ್ಕೆ ಕಾರಣವಾಗಿ ರಕ್ತದೊತ್ತಡ ಹೆಚ್ಚಿಸುತ್ತದೆ. ಅತಿಯಾದ ಕಾಫಿ, ಟೀ ಸೇವನೆ ಮಾಡಬಾರದು.
  4. ಮಧ್ಯಪಾನ ಮತ್ತು ಧೂಮಪಾನ ಸಂಪೂರ್ಣವಾಗಿ ವರ್ಜಿಸತಕ್ಕದ್ದು.
  5. ಉಪ್ಪಿನ ಅಂಶವನ್ನು ಕಡಿತಗೊಳಿಸಬೇಕು. ದಿನವೊಂದಕ್ಕೆ 5 ಗ್ರಾಂಗಿಂತ ಜಾಸ್ತಿ ಉಪ್ಪು ಸೇವಿಸಬಾರದು.
  6. ಕೆಲಸದ ವಾತಾವರಣದಲ್ಲಿ ವಿಪರೀತ ಒತ್ತಡ, ಪೈಪೋಟಿ ಮತ್ತು ನೆಮ್ಮದಿ ರಹಿತ ಜೀವನವಾಗಿದ್ದಲ್ಲಿ ಅಂತಹಾ ಕೆಲಸ ಮಾಡದಿರುವುದೇ ಉತ್ತಮ. ಮನಸ್ಸಿಗೆ ನೆಮ್ಮದಿ ಇರುವ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
  7. ನಿಮಗಿಷ್ಟವಾದ ಮನಸ್ಸಿಗೆ ಮುದ ನೀಡುವ ಹವ್ಯಾಸಗಳಾದ ಧ್ಯಾನ, ಯೋಗ, ಹಾಡುಗಾರಿಕೆ, ಓದುವುದು, ಸಂಗೀತ ಕೇಳುವುದು ಮುಂತಾದವುಗಳಿಂದ ಮನಸ್ಸಿಗೆ ನೆಮ್ಮದಿ ದೊರಕಿ ರಕ್ತದೊತ್ತಡ ಹತೋಟಿಗೆ ಬರುತ್ತದೆ. ತೊಂದರೆಗಳು ಏನು?
  8. ಅತಿಯಾದ ರಕ್ತದೊತ್ತಡದಿಂದಾಗಿ ರಕ್ತನಾಳಗಳು ಪೆಡಸುಗೊಂಡು ಹೃದಯಾಘಾತ ಮತ್ತು ಸ್ಟ್ರೋಕ್ (ಮೆದುಳಿನ ಆಘಾತ) ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
  9. ಅತಿಯಾದ ರಕ್ತದೊತ್ತಡದಿಂದ ರಕ್ತನಾಳಗಳು ತನ್ನಿಂತಾನೇ ಒಡೆದುಕೊಂಡು ಮಾರಣಾಂತಿಕವಾಗುವ ಸಾಧ್ಯತೆಯೂ ಇದೆ.
  10. ರಕ್ತದೊತ್ತಡ ಜಾಸ್ತಿಯಾದಾಗ, ಹೃದಯವು ಹೆಚ್ಚಿನ ಪರಶ್ರಮ ವಹಿಸಿ ರಕ್ತವನ್ನು ಹೃದಯದಿಂದ ಹೊರಹಾಕಬೇಕಾದ ಅನಿವಾರ್ಯತೆ ಇರುತ್ತದೆ. ಇದರಿಂದಾಗಿ ಹೃದಯದ ಗೋಡೆಗಳು ಪೆಡಸುಗೊಂಡು ದಪ್ಪಗಾಗುತ್ತದೆ. ಇದು ಕ್ರಮೇಣ ಹೃದಯದ ವೈಫಲ್ಯಕ್ಕೂ ಕಾರಣವಾಗುತ್ತದೆ.
  11. ಅತಿಯಾದ ರಕ್ತದೊತ್ತಡ ಕಿಡ್ನಿಗಳ ಕಾರ್ಯಕ್ಷಮತೆಯನ್ನು ಕ್ಷೀಣಿಸುತ್ತದೆ.
  12. ಅಧಿಕ ರಕ್ತದೊತ್ತಡದಿಂದಾಗಿ ಕಣ್ಣಿನ ಒಳಗಿನ ರಕ್ತನಾಳಗಳು ಪೆಡಸಾಗಿ ರಕ್ತದ ಪೂರೈಕೆ ಕುಂಠಿತವಾಗಿ ಅಥವಾ ರಕ್ತನಾಳಗಳು ಒಡೆದುಕೊಂಡು ದೃಷ್ಟಿ ಹೀನತೆಗೆ ಕಾರಣವಾಗುತ್ತದೆ.
  13. ಅತಿಯಾದ ರಕ್ತದೊತ್ತಡ ಮೆದುಳಿನ ಕಾರ್ಯಕ್ಷಮತೆಯನ್ನು ಕುಗ್ಗಿಸಿ ನೆನಪು ಶಕ್ತಿ ಕುಗ್ಗುವಂತೆ ಮಾಡುತ್ತದೆ. ಅದೇ ರೀತಿ ಮೆದುಳಿನ ರಕ್ತನಾಳಗಳು ಪೆಡಸುಗೊಂಡು ಮರೆಗುಳಿತನಕ್ಕೂ ಕಾರಣವಾಗುತ್ತದೆ.

ಕೊನೆಮಾತು :-

ಅಧಿಕ ರಕ್ತದೊತ್ತಡ ಎನ್ನುವುದು ಅಧುನಿಕ ಜೀವನಶೈಲಿಯ ಶಾಪ ಎಂದರೂ ತಪ್ಪಾಗಲಾರದು. ಮಾರಣಾಂತಿಕ ರೋಗಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿರುವ ಹೃದಯಾಫಾತಕ್ಕೆ ನೇರವಾಗಿ ಕಾರಣವಾಗುವ ಅಧಿಕ ರಕ್ತದೊತ್ತಡ ಒಂದು ಮನುಕುಲಕ್ಕೆ ತಗುಲಿದ ಬಹುದೊಡ್ಡ ಪಿಡುಗು ಎಂದರೂ ಅತಿಶಯೋಕ್ತಿಯಾಗದು. ಆದರೆ ಸಮಾಧಾನಕರ ಅಂಶವೆಂದರೆ ಮೊದಲೇ ಎಚ್ಚೆತ್ತು ಸಾಕಷ್ಟು ಮುಂಜಾಗರೂಕತೆ ವಹಿಸಿ ಆರೋಗ್ಯಪೂರ್ಣ ದೈಹಿಕ ಪರಿಶ್ರಮಉಳ್ಳ ಜೀವನಶೈಲಿ ಅಳವಡಿಸಿಕೊಂಡಲ್ಲಿ, ಅಧಿಕ ರಕ್ತದೊತ್ತಡ ನಿಯಂತ್ರಿಸಿ ನೂರು ಕಾಲ ಸುಖವಾಗಿ ಬದುಕಬಹುದು. ಅದರಲ್ಲಿಯೇ ಸಮಾಜದ ಮತ್ತು ನಮ್ಮೆಲ್ಲರ ಹಿತ ಅಡಗಿದೆ.

ಡಾ| ಮುರಲೀ ಮೋಹನ್ ಚೂಂತಾರು
MDS,DNB,MOSRCSEd(U.K), FPFA, M.B.A
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
ಸುರಕ್ಷಾ ದಂತ ಚಿಕಿತ್ಸಾಲಯ
ಮೊ : 9845135787
[email protected]
www.surakshadental.com