ಮೆಸ್ಕಾ ವತಿಯಿಂದ ಮುಂಗಾರುಪೂರ್ವ ಸಿದ್ಧತೆ

0


ಎಚ್ ಟಿ ಹಾಗೂ ಎಲ್ ಟಿ ಲೈನ್ ಗಳಿಗೆ ತಾಗುವ ಮರದ ರೆಂಬೆಗಳ ತೆರವು ಕಾರ್ಯ

ಮಳೆಗಾಲ ಸಮೀಪಿಸುತ್ತಿದ್ದಂತೆ ಮೆಸ್ಕಾಂ ಇಲಾಖೆ ವತಿಯಿಂದ ಮುಂಗಾರು ಪೂರ್ವ ನಿರ್ವಹಣೆ ಸಿದ್ಧತಾ ಕಾರ್ಯ ಸುಳ್ಯ ತಾಲೂಕಿನಾಧ್ಯಂತ ಆರಂಭಗೊಂಡಿದೆ.
ಮಳೆಗಾಲದ ಮುಂಜಾಗ್ರತ ಹಿತ ದೃಷ್ಟಿಯಿಂದ ಮೆಸ್ಕಾಂ ಇಲಾಖೆ ಮುಂಗಾರು ಪೂರ್ವ ನಿರ್ವಹಣಾ ವಿಶೇಷ ಪಡೆಯನ್ನು ನೇಮಿಸಿದ್ದು ಈಗಾಗಲೇ ೪ ತಂಡಗಳು ಕಾರ್ಯಪ್ರವೃತ್ತ ಗೊಂಡಿದ್ದಾರೆ. ಒಂದೊಂದು ತಂಡದಲ್ಲಿ ಮೂವರು ಸದಸ್ಯರಂತೆ ೧೨ ಮಂದಿ ಸಿಬ್ಬಂದಿಗಳು ವಿಶೇಷ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ವಿದ್ಯುತ್ ತೊಂದರೆಗೀಡಾದ ಸ್ಥಳಕ್ಕೆ ತೆರಳಲು ಇಲಾಖೆಯ ವತಿಯಿಂದ ಒಂದು ವಾಹನವನ್ನು ಕೂಡ ಈ ವಿಶೇಷ ಪಡೆಗೆ ನೀಡಲಾಗಿದೆ.


ಇದರ ಕೆಲಸಕಾರ್ಯವು ಏಪ್ರಿಲ್ ೧೨ರಿಂದ ಆರಂಭಗೊಂಡಿದ್ದು ಜುಲೈ ೩೧ರವರೆಗೆ ಈ ವಿಶೇಷ ಪಡೆ ಸುಳ್ಯ ತಾಲೂಕಿನಾದ್ಯಂತ ಕಾರ್ಯಚರಿಸಲಿದೆ ಎಂದು ತಿಳಿದುಬಂದಿದೆ.
ಸುಳ್ಯ ತಾಲೂಕಿನ ೪ ಶಾಖಾ ಕೇಂದ್ರಗಳಾದ ಸುಳ್ಯ,ಜಾಲ್ಸೂರು, ಬೆಳ್ಳಾರೆ, ಅರಂತೋಡು ವಿಭಾಗಗಳಲ್ಲಿ ಈಗಾಗಲೇ ೬೬.೧ ೮ ಕಿಲೋ ಮೀಟರ್ ಎಚ್ ಟಿ ಲೈನ್ಗಳಿಗೆ ತಾಗುತ್ತಿರುವ ಮರದ ರೆಂಬೆಗಳನ್ನು ತೆರವುಗೊಳಿಸಿದರೆ ೭೩.೬೧ ಕಿಲೋಮೀಟರ್ಗಳಷ್ಟು ಎಲ್ ಟಿ ಲೈನ್ ಗಳನ್ನು ಸ್ವಚ್ಛಪಡಿಸಲಾಗಿದೆ. ವಾಲಿರುವಂತಹ ಸುಮಾರು ೩೩ ವಿದ್ಯುತ್ ಕಂಬಗಳನ್ನು ಸರಿಪಡಿಸಲಾಗಿದ್ದು, ಜೊತು ಬಿದ್ದಿದ್ದಂತ ವಿದ್ಯುತ್ ತಂತಿಗಳನ್ನು ಸುಮಾರು ೧೪.೯೩ ಕಿಲೋಮೀಟರ್ ಸರಿಪಡಿಸಲಾಗಿದೆ. ಸುಮಾರು ೯೩ ಟ್ರಾನ್ಸ್ಫಾರಂ ಗಳ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸಿದ್ದು ವಾರದ ಭಾನುವಾರ ಹೊರತುಪಡಿಸಿ ಬಾಕಿ ಇರುವ ಎಲ್ಲಾ ದಿನಗಳಲ್ಲಿ ಈ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂದು ಮೆಸ್ಕಾಂ ಇಲಾಖಾ ವತಿಯಿಂದ ಮಾಹಿತಿ ಲಭಿಸಿದೆ.


ಈ ಹಿನ್ನೆಲೆಯಲ್ಲಿ ಕೆಲ ಸಂದರ್ಭಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ತೊಡಕು ಉಂಟಾಗುತ್ತಿದ್ದು ಸಾರ್ವಜನಿಕರು ಸಹಕರಿಸುವಂತೆ ಸಂಬಂಧಪಟ್ಟ ಇಲಾಖೆಯವರು ಕೇಳಿಕೊಂಡಿದ್ದಾರೆ.