ಸುಳ್ಯ ನಗರ ಪ್ರದೇಶದಾದ್ಯಂತ ಕಣ್ಮರೆಯಾಗಿರುವ ಚರಂಡಿಗಳು

0

ರಸ್ತೆಯಲ್ಲೇ ಹರಿಯುತಿದೆ ಮಳೆಗೆ ಚರಂಡಿ ನೀರು

ಮಳೆಗಾಲ ಎದುರಿಸಲು ಸಜ್ಜಾಗಬೇಕಿದೆ ನಗರ ಪಂಚಾಯತ್

ಸುಳ್ಯ ನಗರ ಪರಿಸರದಾದ್ಯಂತ ಯಾವುದೇ ಭಾಗಗಳಲ್ಲಿ ಸರಿಯಾದ ಚರಂಡಿಗಳಿಲ್ಲದೆ ಮಳೆಯಿಂದಾಗಿ ಬರುವ ನೀರುಗಳು ರಸ್ತೆಗಳನ್ನು ಚರಂಡಿಗಳನ್ನಾಗಿ ನಿರ್ಮಿಸಿ ಮುಂದುವರಿಯುತ್ತಿದೆ. ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನಹರಿಸುವಂತೆ ಕಾಣುತ್ತಿಲ್ಲ ಎಂದು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ.
ಮಳೆ ಬಂದಾಗ ರಸ್ತೆಗಳು ಕೆರೆಗಳಾಗಿ ನಿರ್ಮಾಣಗೊಳ್ಳುತ್ತಿದೆ. ಉಳಿದ ಕೆಲವು ಚರಂಡಿಗಳಲ್ಲಿ ಊಳುಗಳು ಕಸ ರಾಶಿಗಳು ತುಂಬಿ ಕೊಳೆತು ದುರ್ವಾಸನೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರ ಆಡಳಿತದ ವತಿಯಿಂದ ಮಳೆಗಾಲಕ್ಕೂ ಮುನ್ನ ಈ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಅಭಿವೃದ್ಧಿ ಕಾರ್ಯಗಳು ಆಗಬೇಕೆಂಬ ಭರವಸೆಯಲ್ಲಿ ಇರುತ್ತಾರೆ. ಅದಕ್ಕಾಗಿಯೇ ಸ್ಥಳೀಯ ಚುನಾವಣೆಗಳು ಬಂದ ಸಂದರ್ಭದಲ್ಲಿ ಆ ಪ್ರದೇಶದ ಜನರು ಬಯಸುವಂತದ್ದು ನಮ್ಮೂರಿನ ರಸ್ತೆಗಳು ಸರಿ ಇರಬೇಕು, ಅದೇ ರೀತಿ ಚರಂಡಿಗಳು ಸಮರ್ಪಕವಾಗಿರಬೇಕು, ರಸ್ತೆ ನೀರು ವಿದ್ಯುತ್ ಪರಿಪೂರ್ಣವಾಗಿ ಜನೋಪಯೋಗಿ ಆಗಿರಬೇಕು ಎಂಬುದನ್ನು ಮಾತ್ರ ಬಯಸಿ ತಮ್ಮ ತಮ್ಮ ಪರಿಸರಕ್ಕೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸುಳ್ಯ ನಗರವನ್ನು ಒಂದು ಸುತ್ತ ಪ್ರದಕ್ಷಣೆ ಮಾಡಿ ಬಂದರೆ ಈ ಎಲ್ಲಾ ಸಮಸ್ಯೆಗಳು ಜ್ವಲಂತವಾಗಿ ಇದೆ ಎಂಬುದಕ್ಕೆ ನೂರಾರು ಸಾಕ್ಷಿಗಳು ಎದ್ದು ಕಾಣುತ್ತದೆ. ಸಾರ್ವಜನಿಕರು ಎಷ್ಟೇ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು ಅದರಲ್ಲಿ ಕೇವಲ ಕೆಲವೇ ಕೆಲವು ಗಳು ಮಾತ್ರ ಪರಿಹಾರ ಸಿಗುತ್ತದೆ ವಿನಃ ಪರಿಪೂರ್ಣವಾದ ಯಶಸ್ಸು ಅದರಿಂದ ಕಾಣುವುದಿಲ್ಲ. ಊರಿನ ಸಮಸ್ಯೆಗಳ ಬಗ್ಗೆ ಹೆಚ್ಚು ಮಾತನಾಡಿದರೆ ಸಂಬಂಧಪಟ್ಟ ಜನ ಪ್ರತಿನಿಧಿಗಳ ಎದುರು ತಾನು ತಪ್ಪುಗಾರನಾಗುವನೆಂಬ ಅಲ್ಪಭಯವು ಅವರಿಗೆ ಕಾಡುತ್ತಿರುತ್ತದೆ. ಒಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಚಲನಾ ಯಂತ್ರಗಳು ಯಾವುದೇ ಮೀನಾ ಮೇಷವೆಣಿಸದೆ ನಿರಂತರವಾಗಿ ಚಲಿಸಿದರೆ ಇಂತಹ ಸಮಸ್ಯೆಗಳು ಉದ್ಭವಿಸಲು ಸಾಧ್ಯವಾಗುವುದಿಲ್ಲ.ಆದರೆ ಸುಳ್ಯ ನಗರಕ್ಕೆ ಬೇಕಾದ ನಗರ ಪಂಚಾಯತ್ ಕಚೇರಿಯಲ್ಲಿ ಸ್ವಚ್ಛತೆಯ ಬಗ್ಗೆ ನೋಡಿಕೊಳ್ಳಬಲ್ಲ ಆರೋಗ್ಯ ಅಧಿಕಾರಿ, ಅಭಿವೃದ್ಧಿಪಡಿಸಬಲ್ಲ ನಗರ ಪಂಚಾಯತ್ ಇಂಜಿನಿಯರ್, ಕಾಮಗಾರಿಗಳನ್ನು ರೂಪಿಸಬಲ್ಲ ಸರಿಯಾದ ಅಧಿಕಾರಿಗಳ ಜಾಗ ಇನ್ನೂ ಕೂಡ ಸರಿಯಾಗಿ ಭರ್ತಿಯಾಗಲಿಲ್ಲ.ಈ ಎಲ್ಲಾ ಕಾರಣಗಳಿಂದ ಇತ್ತೀಚಿಗೆ ಸುಳ್ಯದ ಪರಿಸ್ಥಿತಿ ಅಧೋ ಗತಿಗೆ ತಲುಪಿದಂತೆ ಕಾಣುತ್ತಿದೆ. ಬಿಸಿಲಿನ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ, ಮಳೆಗಾಲದಲ್ಲಿ ಚರಂಡಿಗಳ ಅವ್ಯವಸ್ಥೆ,ವಿದ್ಯುತ್ ಕಣ್ಣುಮುಚ್ಚಾಲೆಯಾಟ, ಕೆಲವು ಕಡೆಗಳಲ್ಲಿ ಅಭಿವೃದ್ಧಿ ಪಡಿಸಿದ ರಸ್ತೆಗಳ ಕಳಪೆ ಕಾಮಗಾರಿಗಳು, ಮೂರು ದಶಕಗಳಿಂದ ಪೂರೈಸಲು ಸಾಧ್ಯವಾಗದ ತಾಲೂಕು ಕ್ರೀಡಾಂಗಣದ ಕಾಮಗಾರಿ, ಈ ರೀತಿಯ ಇನ್ನೂ ಹತ್ತು ಹಲವಾರು ಸಮಸ್ಯೆಗಳನ್ನು ಸಾರ್ವಜನಿಕರಿಗೆ ಹೇಳಿಕೊಳ್ಳಲು ಸಾಧ್ಯವಿಲ್ಲದೆ, ಬಚ್ಚಿಟ್ಟುಕೊಳ್ಳಲು ಸಾಧ್ಯವಾಗದೆ ಇಂದಲ್ಲದಿದ್ದರೆ ನಾಳೆ ಸರಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಮಳೆಗಾಲಕ್ಕೂ ಮುನ್ನ ಜನರು ಬಯಸುವ ಸಮರ್ಪಕ ರಸ್ತೆ ಚರಂಡಿಗಳು ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಮುಂದಾಗ ಬೇಕಾಗಿದೆ. ಈಗಾಗಲೇ ಸುಳ್ಯ ಕ್ಕೆ ನೂತನವಾಗಿ ಮಹಿಳಾ ಶಾಸಕರು ಆಯ್ಕೆಯಾಗಿದ್ದು, ಸರಕಾರವು ಬದಲಾಗಿದ್ದು ಆಡಳಿತ ಮತ್ತು ವಿಪಕ್ಷ ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ರಾಜಕೀಯವನ್ನು ಮರೆತು ಸುಳ್ಯದ ಅಭಿವೃದ್ಧಿಗೆ ಮುಂದಾಗ ಬೇಕಾಗಿದೆ. ಸ್ವಚ್ಛ ಸುಳ್ಯ ಸುಂದರ ಸುಳ್ಯ ನಿರ್ಮಾಣ ಮಾಡಬೇಕಾಗಿದೆ ಎಂಬುವುದೇ ನಮ್ಮ ಆಶಯವಾಗಿದೆ.
✍️ ಹಸೈನಾರ್ ಜಯನಗರ