ಸುಳ್ಯ ಜಯನಗರ ಮಿಲಿಟರಿ ಗ್ರೌಂಡಿಗೆ ಡಿಫೆನ್ಸ್ ನ ಸರ್ವೆ ಇಲಾಖೆಯ ಅಧಿಕಾರಿಗಳ ಭೇಟಿ : ಮಾಹಿತಿ ಸಂಗ್ರಹ

0

ಸುಳ್ಯ ಜಯನಗರ ಮಿಲಿಟರಿ ಗ್ರೌಂಡ್ ಸ್ಥಳದ ಮಾಹಿತಿ ಸಂಗ್ರಹಕ್ಕಾಗಿ ಡಿಫೆನ್ಸಿ ಇಲಾಖೆಯ ಸರ್ವೆ ಅಧಿಕಾರಿಗಳು ಇಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಜಯನಗರ ಮಿಲಿಟರಿ ಗ್ರೌಂಡ್ ವಿಷಯಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿಗಳು ಕಳೆದ 3,4 ದಶಕಗಳಿಂದ ಸ್ಥಳದ ಹಕ್ಕು ಪತ್ರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಬಳಿ ತಮ್ಮ ಮನವಿಗಳನ್ನು ಮಾಡುತ್ತಾ ಬರುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳಿಂದ ಈ ಭಾಗದ ಜನರು ಹಕ್ಕು ಪತ್ರ ಹೋರಾಟ ಸಮಿತಿಯನ್ನು ರಚಿಸಿ ಅದರ ಸಂಚಾಲಕರಾಗಿ ಜಿ ಜಗನ್ನಾಥ್ ರವರು ಸ್ಥಳಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಮತ್ತು ಕಚೇರಿಗಳ ಕೆಲಸ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದ್ದಾರೆ.

ರಾಜ್ಯಮಟ್ಟದಿಂದ ಕೇಂದ್ರ ಮಟ್ಟದವರೆಗೆ ಸಂಬಂಧಪಟ್ಟ ಸಚಿವರುಗಳಿಗೆ ಮನವಿಗಳನ್ನು ನೀಡಿ ಜಾಗದ ಹಕ್ಕು ಪತ್ರಕ್ಕಾಗಿ ಆಗ್ರಹಿಸುತ್ತಿದ್ದಾರೆ.

ಇದೀಗ ಈ ವಿಷಯದ ಕುರಿತು ದ ಕ ಜಿಲ್ಲಾಧಿಕಾರಿಯವರು ಡಿಫೆನ್ಸಿ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಜೂನ್ 5 ರಂದು ಡಿ ಸಿ ಕೋರ್ಟಿಗೆ ಬರುವಂತೆ ಪತ್ರದ ಮೂಲಕ ಕರೆಸಿದ್ದಾರೆ ಎನ್ನಲಾಗಿದೆ. ಇದರ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳು ಜಯನಗರಕ್ಕೆ ಬಂದಿದ್ದು ಮಿಲಿಟರಿ ಗ್ರೌಂಡಿನ ಬಗ್ಗೆ ಇರುವ ಮಾಹಿತಿಗಳನ್ನು ಮತ್ತು ವಸ್ತು ಸ್ಥಿತಿಗಳ ವಿವರಗಳನ್ನು ಪಡೆದುಕೊಂಡಿದ್ದಾರೆ.

ಅಧಿಕಾರಿಗಳ ನಿಯೋಗದಲ್ಲಿ ಡಿಫೆನ್ಸಿ ಸರ್ವೆ ಸೂಪರ್ವೈಸರ್ ಬಾಲಸುಬ್ರಹ್ಮಣ್ಯಂ,ಡಿಫೆನ್ಸಿ ಸಬ್ ಜೂನಿಯರ್ ಆಫೀಸರ್ ರಾಜು, ಸುಳ್ಯ ಉಪ ತಹಶೀಲ್ದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ,ವಿ ಎ ತಿಪ್ಪೇಶ್ ಉಪಸ್ಥಿತರಿದ್ದರು.

ಅಧಿಕಾರಿಗಳು ಬರುವ ಮಾಹಿತಿ ಪಡೆದ ಹಕ್ಕು ಪತ್ರ ಹೋರಾಟ ಸಮಿತಿಯ ಸಂಚಾಲಕ ಜಿ ಜಗನ್ನಾಥ್, ನಗರ ಪಂಚಾಯತ್ ಸದಸ್ಯರುಗಳಾದ ವಿನಯ ಕುಮಾರ್ ಕಂದಡ್ಕ, ಶಿಲ್ಪಾ ಸುದೇವ್,ಹೋರಾಟ ಸಮಿತಿಯ ಮುಖಂಡರುಗಳಾದ ರಾಧಾಕೃಷ್ಣ ನಾಯಕ್, ಉಸ್ಮಾನ್ ಜಯನಗರ, ನಾಗರಾಜ ಮೇಸ್ತ್ರಿ ಜಯನಗರ, ಸುರೇಂದ್ರ ಕಾಮತ್ ಸೇರಿದಂತೆ ಸುಮಾರು 20ಕ್ಕೂ ಅಧಿಕ ಮಂದಿ ಸ್ಥಳೀಯರು ಉಪಸ್ಥಿತರಿದ್ದು ಅಧಿಕಾರಿಗಳಿಗೆ ಈ ಭಾಗದ ವಿವರಗಳನ್ನು ನೀಡಿದರು.