ತರಕಾರಿಗೂ ಸೈ, ಹೈನುಗಾರಿಕೆ, ಕೋಳಿ, ಜೇನು ಸಾಕಣೆಗೂ ಸೈ
ಚೊಕ್ಕಾಡಿಯ ಶ್ರಮಿಕ ಸಾಧಕ ಚಂದ್ರಶೇಖರ ಸುಬ್ಬಯ್ಯಮೂಲೆ
✍️ ಶಿವಪ್ರಸಾದ್ ಆಲೆಟ್ಟಿ
ಕೃಷಿ ಕಾಯಕ ಎಂದರೆ ದೂರ ಸರಿಯುವ ಇಂದಿನ ಕಾಲದಲ್ಲಿ ವಿದ್ಯಾಭ್ಯಾಸದ ಬಳಿಕ ಕಚೇರಿ ಕೆಲಸ ಹುಡುಕಿಕೊಂಡು ಲೈಫ್ ಸೆಟ್ಲ್ ಆಗಬೇಕೆಂಬ ಆಕಾಂಕ್ಷೆ ಹೊಂದಿ ದೂರದ ಪಟ್ಟಣ ಪ್ರದೇಶಕ್ಕೆ ಸೇರಿ ಖಾಸಗಿ ಕಂಪೆನಿಯ ಉದ್ಯೋಗ ಬಯಸುವವರೇ ಹೆಚ್ಚಾಗಿರುವ ಕಾಲಘಟ್ಟದಲ್ಲಿ ಇಲ್ಲೊಬ್ಬ ಯುವಕ ಅದ್ಯಾವುದನ್ನೂ ಅಪೇಕ್ಷಿಸದೇ ತನ್ನ ಹಿರಿಯರು ಹುಟ್ಟು ಹಾಕಿದ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ಕಳೆದ 30 ವರ್ಷ ಗಳಿಂದ ತೊಡಗಿಸಿಕೊಂಡು ಎಲ್ಲಾ ವಿಧದ ಕೃಷಿಗೂ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.
ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಬಳಿಯ ಸುಬ್ಬಯ್ಯಮೂಲೆ ಎಂಬಲ್ಲಿ ಹಿರಿಯರ ಮೂಲಕ ಬಂದ ಜಮೀನಿನಲ್ಲಿ 30 ವರ್ಷದ ಹಿಂದೆಯೇ ಅಂದಿನ ಕಾಲಕ್ಕೆ ಹೊಂದುವ ಕೃಷಿ ಬೆಳೆಗಳಾದ ಅಡಿಕೆ,ತೆಂಗು ,ಬಾಳೆ ಜತೆಗೆ ರಬ್ಬರ್ ಬೆಳೆದು ತನ್ನ ಅವಿರತ ಶ್ರಮದಿಂದ ಸ್ವಂತ ದುಡಿಮೆಯಿಂದ ಯಶಸ್ಸು ಕಂಡವರು ಡಿ.ಎಸ್ ಚಂದ್ರಶೇಖರ ಸುಬ್ಬಯ್ಯ ಮೂಲೆಯವರು.
ಯಾವುದೇ ಕೃಷಿಯಲ್ಲಿ ಯಶಸ್ಸು ಕಾಣಬೇಕಾದರೆ ಹೈನುಗಾರಿಕೆ ಅತೀ ಅವಶ್ಯವಾಗಿ ಅಳವಡಿಸಿಕೊಳ್ಳಬೇಕು. ಇದರಿಂದ ಉತ್ತಮ ಬೆಳೆ ಗಳಿಸಿ ಅಧಿಕ ಇಳುವರಿ ಪಡೆದು ಲಾಭದಾಯಕ ಗಳಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ತಿಳಿದು ಇವರು ಹೈನುಗಾರಿಕೆಯನ್ನು ಪ್ರಾರಂಭಿಸಿದರು. ನಿರಂತರ 15 ವರ್ಷಗಳಿಂದ ಹೈನುಗಾರಿಕೆ ಉದ್ಯಮದಲ್ಲಿ ತೊಡಗಿಸಿಕೊಂಡು ಸ್ಥಳೀಯ ಡೈರಿಗೆ ದಿನವೊಂದಕ್ಕೆ ಸರಾಸರಿ 80 ಲೀಟರ್ ಹಾಲು ನೀಡುತ್ತಿದ್ದರು. ಪ್ರಸ್ತುತ ಹೈನುಗಾರಿಕೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿ ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಜಗತ್ತಿಗೆ ಬಾಧಿಸಿದ ಕೊರೊನೊ ಸಂದರ್ಭದಲ್ಲಿ ನಿರಂತರ ದುಡಿಮೆಯಲ್ಲಿ ಇರುತ್ತಿದ್ದ ಶೇಖರ್ ರವರಿಗೆ ಇನ್ನೂ ಏನಾದರೂ ಪರ್ಯಾಯ ಕೃಷಿ ಮಾಡಬೇಕೆಂಬ ತುಡಿತವಾಯಿತು. ತಕ್ಷಣ ಆಯ್ಕೆ ಮಾಡಿಕೊಂಡದ್ದು ತರಕಾರಿ ಕೃಷಿ. ಪ್ರಾರಂಭದಲ್ಲಿ ತನ್ನ ಅಡಿಕೆ ತೋಟದ ಮಧ್ಯೆ ಸೌತೆ ಕೃಷಿ ಬೆಳೆಯನ್ನು ಬೆಳೆದರು.
ಅದರೊಂದಿಗೆ ಬೆಂಡೆಕಾಯಿ, ತೊಂಡೆಕಾಯಿ, ಹರಿವೆ,ಬಸಳೆ,ಹಾಗಲಕಾಯಿ ಹೀಗೆ ಬಗೆ ಬಗೆಯ ತರಕಾರಿಯನ್ನು ಬೆಳೆದರು. ಮಾರಾಟದ ಜವಾಬ್ದಾರಿಯನ್ನು ಅವರೇ ನಿರ್ವಹಿಸಿಕೊಂಡು ತಾಲೂಕಿನಾದ್ಯಂತ ತನ್ನಲ್ಲಿರುವ ಓಮ್ನಿ ಕಾರಿನಲ್ಲಿ ತರಕಾರಿ ಯನ್ನು ತುಂಬಿಸಿ ತಿರುಗಾಟ ನಡೆಸಿದರು. ತರಕಾರಿ ಅಂಗಡಿಗಳಿಗೆ ವಿತರಣೆ ಮಾಡುವುದರೊಂದಿಗೆ ಮಾರುಕಟ್ಟೆಯಲ್ಲಿ ಸ್ವತ: ತಾವೇ ನಿಂತು ವ್ಯಾಪಾರ ಮಾಡಿದರು.
ಎಲ್ಲಾ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತಲ್ಲದೆ ಒಳ್ಳೆಯ ವ್ಯಾಪಾರವೂ ಲಭಿಸಿತು. ತರಕಾರಿ ಕೃಷಿಯಿಂದ ಅತ್ಯಲ್ಪ ಅವಧಿಯಲ್ಲಿ ಅಧಿಕ ಪ್ರಮಾಣದ ಲಾಭಾಂಶ ಗಳಿಸಿಕೊಳ್ಳಲು ಸಾಧ್ಯವಾಯಿತು ಎನ್ನುತ್ತಾರೆ ಚಂದ್ರಶೇಖರ್.
ಸಾವಯವ ಗೊಬ್ಬರ ಬಳಸಿ ಬೆಳೆದ ತರಕಾರಿಗೆ ವ್ಯಾಪಕ ಬೇಡಿಕೆ ಸಿಕ್ಕಿದೆ. ಇಂದಿಗೂ ನಾವು ಬೆಳೆದ ತರಕಾರಿಗೆ ತುಂಬಾ ಬೇಡಿಕೆ ಇದೆ. ತೋಟದ ಮಧ್ಯೆ ಈ ರೀತಿಯ ತರಕಾರಿ ಕೃಷಿ ಮಾಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಕೃಷಿಯೊಂದಿಗೆ ಜೇನು ಸಾಕಣೆ, ಕೋಳಿ ಸಾಕಣೆ ಹಾಗೂ ವಿಶೇಷವಾಗಿ ವೀಳ್ಯದೆಲೆ ಕೃಷಿಯಲ್ಲಿ ಅನುಭವ ಹೊಂದಿದವರಾಗಿದ್ದಾರೆ. ಚಂದ್ರಶೇಖರ ರವರ ಕಠಿಣ ಪರಿಶ್ರಮವನ್ನು ಪರಿಗಣಿಸಿ ಕೃಷಿ ಇಲಾಖೆಯ ವತಿಯಿಂದ ಕೃಷಿ ಪಂಡಿತ ಪ್ರಶಸ್ತಿ ನೀಡಿ ಅಭಿನಂದಿಸಿದ್ದಾರೆ.
ಇವರ ಕೃಷಿ ಕಾಯಕಕ್ಕೆ ಸದಾ ಸಾಥ್ ನೀಡಿ ಸಹಕಾರ ನೀಡುವ ಇವರ ಪತ್ನಿ ಶ್ರೀಮತಿ ತನುಜಾ. ಇವರು ಚೊಕ್ಕಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿ ವರ್ಷಗಳ ಕಾಲ ಸಂಘವನ್ನು ಮುನ್ನಡೆಸಿದ್ದಾರೆ. ಮಂಗಳೂರಿನ ಕೆ.ಎಂ.ಎಫ್ ವತಿಯಿಂದ ವರ್ಷದ ಮಹಿಳಾ ಸಾಧಕಿ ಪ್ರಶಸ್ತಿ ನೀಡಿ ಇವರನ್ನು ಗೌರವಿಸಿದ್ದಾರೆ. ಪತಿಯ ಪ್ರತಿಯೊಂದು ಕಾರ್ಯದಲ್ಲೂ ಪತ್ನಿ ತನುಜಾ ರವರು ಅವಿರತವಾಗಿ ಶ್ರಮವಹಿಸುತ್ತಿದ್ದಾರೆ.
ಇವರೊಂದಿಗೆ 85 ವಯೋಮಾನದ ಇವರ ತಾಯಿ ಶ್ರೀಮತಿ ದೇವಮ್ಮ ರವರು ಕೃಷಿ ಕಾರ್ಯಕ್ಕೆ ತನ್ನ ಕೈಲಾಗುವ ಸಹಾಯ ಮಾಡುತ್ತಾರೆ.
ಚಂದ್ರಶೇಖರ ಮತ್ತು ತನುಜಾ ದಂಪತಿಗೆ ಇಬ್ಬರು ಮಕ್ಕಳು. ಓರ್ವ ಪುತ್ರ ಭವಿಷ್ ಮೂಡಬಿದಿರೆಯ ಆಳ್ವಾಸ್ ನ ವಿದ್ಯಾರ್ಥಿ. ಪುತ್ರಿ ಕು.ಭೂಮಿಕಾ ಉಜಿರೆ ಎಸ್.ಡಿ.ಎಂ.ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿನಿ.
ಮನಸಿದ್ದರೆ ಮಾರ್ಗ ಎಂಬ ಗಾದೆ ಮಾತಿನಂತೆ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅವಿರತ ಶ್ರಮದಿಂದ ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗುತ್ತಾರೆ ಡಿ.ಎಸ್ ಚಂದ್ರಶೇಖರ್.