ಸುಳ್ಯದಲ್ಲಿ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆ

0

ಜನರ ರಕ್ಷಣೆಗೆ ಇಲಾಖೆಗಳು ಆದ್ಯತೆಯನ್ನು ನೀಡಿ ; ಅಪಾಯಕಾರಿ ಸ್ಥಳಗಳ ಪಟ್ಟಿ ನೀಡಿ

ತಹಶೀಲ್ದಾರ್ ಜಿ. ಮಂಜುನಾಥ್ ಸೂಚನೆ

ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಪ್ರಾಕೃತಿಕ ವಿಕೋಪಗಳು ಉಂಟಾಗಿ ಸಮಸ್ಯೆಗಳು ಬಾರದಂತೆ ಎಲ್ಲಾ ಅಧಿಕಾರಿಗಳು ಮತ್ತು ಇಲಾಖೆಯವರು ತಮ್ಮ ಕರ್ತವ್ಯದಲ್ಲಿ ಆದ್ಯತೆಯನ್ನು ತೆಗೆದುಕೊಳ್ಳಬೇಕು, ಅಲ್ಲದೆ ನಗರ ಪ್ರದೇಶದ ವಾರ್ಡಿನ ಎಲ್ಲಾ ಸದಸ್ಯರುಗಳು ತಮ್ಮ ತಮ್ಮ ವಾರ್ಡಿನಲ್ಲಿ ಮಳೆ ನೀರಿನಿಂದ ಅನಾಹುತಗಳು ಉಂಟಾಗಬಲ್ಲ ಪ್ರದೇಶಗಳ ಪಟ್ಟಿಯನ್ನು ತಯಾರಿಸಿ ನೀಡುವಂತೆ ಸುಳ್ಯ ತಹಶೀಲ್ದಾರ್ ಜಿ ಮಂಜುನಾಥ್ ಸೂಚಿಸಿದ್ದಾರೆ.

ಇಂದು ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಾಕೃತಿಕ ವಿಕೋಪದ ಕುರಿತ ಮುಂಜಾಗ್ರತಾ ಪೂರ್ವ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ನಗರ ಪಂಚಾಯತ್ ಸದಸ್ಯರುಗಳು,ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಸಭೆಯ ಆರಂಭದಲ್ಲಿ ನಗರ ಪ್ರದೇಶದ ವಿವಿಧ ವಾರ್ಡುಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ತೆರವುಗೊಳಿಸುವ ಬಗ್ಗೆ ಚರ್ಚೆಗಳು ನಡೆದವು. ಈ ಸಂದರ್ಭದಲ್ಲಿ ನಗರ ಪಂಚಾಯತಿನ ಕೆಲವು ಸದಸ್ಯರು ಈಗಾಗಲೇ ನಮ್ಮ ನಮ್ಮ ವಾರ್ಡಿನಲ್ಲಿರುವ ಅಪಾಯಕಾರಿ ಮರಗಳ ಬಗ್ಗೆ ಪಟ್ಟಿಯನ್ನು ತಯಾರಿಸಿ ನಗರ ಪಂಚಾಯತ್ ಅಧಿಕಾರಿಗಳಿಗೆ ನೀಡಿದ್ದೇವೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಈ ಪಟ್ಟಿಗಳನ್ನು ನೀಡಲಾಗಿದ್ದು ಇಂದಿನವರೆಗೆ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಆದ್ದರಿಂದ ಅವುಗಳ ಬಗ್ಗೆ ಮೊದಲು ಕಾರ್ಯಾಚರಣೆ ಆಗಬೇಕೆಂದು ತಹಶೀಲ್ದಾರ್ ರವರ ಬಳಿ ಹೇಳಿದರು. ಈ ವಿಷಯದ ಕುರಿತು ವಿನಯಕುಮಾರ್ ಕಂದಡ್ಕರವರು ಮಾತನಾಡಿ, ವೆಂಟೆಡ್ ಡ್ಯಾಮ್ ನಿರ್ಮಾಣಗೊಂಡಿರುವ ಸ್ಥಳದ ಸ್ವಲ್ಪ ಮೇಲ್ಭಾಗದಲ್ಲಿ ಭಾಸ್ಕರ್ ನಾಯರ್ ರವರ ಮನೆಯ ಸಮೀಪ ಕಳೆದ ಮಳೆಗಾಲದ ಸಂದರ್ಭದಲ್ಲಿ ಎರಡು ಮೂರು ಮರಗಳು ಬಿದ್ದಿದ್ದು ಅವುಗಳನ್ನು ತೆರವುಗೊಳಿಸಿಕೊಡುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.

ಇದೇ ಸಂದರ್ಭದಲ್ಲಿ ಸದಸ್ಯ ಎಂ ವೆಂಕಪ್ಪಗೌಡ ತಮ್ಮ ವಾರ್ಡಿನಲ್ಲಿ ಕೂಡ ಅಪಾಯಕಾರಿ ಮರ ಇರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಾರಣ ಈ ಮರಗಳನ್ನು ಕಡಿದ ಮೇಲೆ ಕೆಲಸದ ಕೂಲಿಯನ್ನು ಯಾರು ಕೊಡುತ್ತಾರೆ ಎಂಬುವುದು ಪ್ರಶ್ನೆಯಾಗಿದೆ. ಮರಗಳನ್ನು ಕಡಿಯುವ ಅಥವಾ ಗೆಲ್ಲುಗಳನ್ನು ತೆರವು ಗೊಳಿಸುವ ಕಾರ್ಯವನ್ನು ಮಾಡಲು ಆದೇಶ ನೀಡಿದರೆ ಈ ಕೆಲಸದ ಹಣ ಕೊಡುವವರು ಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದೆ ಸಂಬಂಧಪಟ್ಟವರು ಮರದ ಕೆಲಸ ಕಾರ್ಯಗಳಿಗೆ ಬರುತ್ತಿಲ್ಲ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಕಾನೂನು ಪ್ರಕಾರವಾಗಿ ಇದ್ದರೆ ಹಣ ಕೊಡುವ ಕಾರ್ಯವನ್ನು ಪಂಚಾಯತ್ ವತಿಯಿಂದ ಮಾಡುತ್ತೇವೆ ಎಂದು ಹೇಳಿದರು.

ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್ ಪರಸ್ಪರ ಸಮನ್ವಯದ ಕೊರತೆ ಇದ್ದು ಈ ರೀತಿಯಾಗಿ ನಡೆಯುತ್ತಿದೆ.ಸಮಸ್ಯೆಗಳು ಕಳೆದ ವರ್ಷದಾಗಿದ್ದರೂ ಕೂಡ ಏನೇ ಇದ್ದರೂ ಬಗೆ ಹರಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಮುಂಜಾಗ್ರತಾ ಕಾರ್ಯಗಳನ್ನು ಮಾಡಬೇಕೆಂದು ಸಲಹೆ ನೀಡಿದರು.

ನಗರದ ವಾರ್ಡುಗಳ ಚರಂಡಿ ಸ್ವಚ್ಛತೆ ಮತ್ತು ರಸ್ತೆ ಬದಿಯ ಕಾಡು ಕಡಿಯುವ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮಾರ್ ಓರ್ವ ಗುತ್ತಿಗೆದಾರನಿಗೆ ನಾಲ್ಕು ವಾರ್ಡುಗಳನ್ನು ಕೆಲಸಕ್ಕೆ ನೀಡಿರುವುದು ಸರಿಯಾದ ವಿಧಾನವಲ್ಲ. ಇದರಿಂದ ಕೆಲಸ ಕಾರ್ಯಗಳಿಗೆ ತುಂಬಾ ಸಮಯ ಬೇಕಾಗುತ್ತದೆ.ಅಲ್ಲದೆ ಸಣ್ಣಪುಟ್ಟ ಗುತ್ತಿಗೆದಾರರಿಗೆ ಹೊಟ್ಟೆಗೆ ಒಡೆದಂತೆ ಆಗುತ್ತದೆ. ಆದ್ದರಿಂದ ಈ ಹಿಂದೆ ಯಾವ ರೀತಿ ಇತ್ತೋ ಅದೇ ರೀತಿ ಒಬ್ಬೊಬ್ಬ ಗುತ್ತಿಗೆದಾರರಿಗೆ ಒಂದೊಂದು ವಾರ್ಡ್ ಕೆಲಸಕ್ಕೆ ಕೊಟ್ಟರೆ ಕೆಲಸವೂ ಬೇಗನೆ ಆಗುತ್ತದೆ, ಸಣ್ಣಪುಟ್ಟ ಗುತ್ತಿಗೆದಾರರಿಗೂ ಕೆಲಸ ಮಾಡುವ ಅವಕಾಶ ಲಭಿಸುತ್ತದೆ ಎಂದು ಹೇಳಿದರು.


ಇದಕ್ಕೆ ಪೂರಕವಾಗಿ ಮಾತನಾಡಿದ ಎಂ ವೆಂಕಪ್ಪ ಗೌಡರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ನಾಲಕ್ಕು ವಾರ್ಡುಗಳ ಸ್ವಚ್ಛತಾ ಕಾರ್ಯವನ್ನು ಒಬ್ಬ ಕಾಂಟ್ರಾಕ್ಟರ್ ಗೆ ನೀಡಿದರೆ ಚರಂಡಿ ಮತ್ತು ಕಾಡುಗಳು ಸ್ವಚ್ಛತೆಗೊಳ್ಳಲು 4 ತಿಂಗಳು ಬೇಕಾದಿತ್ತು. ಅವರು ಏಕಕಾಲದಲ್ಲಿ ನಾಲ್ಕು ವಾರ್ಡುಗಳಲ್ಲಿ ಹೆಚ್ಚಿನ ಜನರನ್ನು ಇಟ್ಟು ಕೆಲಸ ಮಾಡುವುದಾದರೆ ತೊಂದರೆ ಇಲ್ಲ. ಆದರೆ ಒಂದೊಂದೇ ವಾರ್ಡ್ ಕೆಲಸ ಮಾಡಿದರೆ ಸಮಯಕ್ಕೆ ಸರಿಯಾಗಿ ಕೆಲಸ ಆಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಶರೀಫ್ ಕಂಠಿ ಮಾತನಾಡಿ ನಮ್ಮ ವಾರ್ಡ್ ಗಳಲ್ಲಿ ನೂರಕ್ಕೂ ಅಧಿಕ ವಿದ್ಯುತ್ ಕಂಬಗಳು ಅಪಾಯದ ಸ್ಥಿತಿಯಲ್ಲಿದ್ದು ಇದನ್ನು ಸರಿಪಡಿಸಿ ಕೊಡುವಂತೆ ಆಗ್ರಹಿಸಿದರು. ಅಲ್ಲದೆ ನಮ್ಮ ವಾರ್ಡಿನಲ್ಲಿ ಕೂಡ ಅಪಾಯಕಾರಿ ಮರಗಳಿದ್ದು ತೆರವು ಕಾರ್ಯ ಮಾಡಬೇಕೆಂದು ಆಗ್ರಹಿಸಿದರು.

ಜಯನಗರ ವಾರ್ಡ್ ಸದಸ್ಯೆ ಶಿಲ್ಪಾ ಸುದೇವ್ ಮಾತನಾಡಿ ಮೆಸ್ಕಾಂ ನವರು ವಿದ್ಯುತ್ ಲೈನ್ ಗಳಿಂದ ಮರದ ಕೊಂಬೆಗಳನ್ನು ತೆರೆವುಗೊಳಿಸುವ ಸಂದರ್ಭ ಕೇವಲ ಎಚ್ ಟಿ ಲೈನ್ಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದು ಎಲ್ ಟಿ ಲೈನ್ ಗಳನ್ನು ಸ್ವಚ್ಛಪಡಿಸಲು ಮುಂದಾಗುತ್ತಿಲ್ಲ. ಈ ರೀತಿಯಾದರೆ ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕಕ್ಕೆ ಸಮಸ್ಯೆ ಆಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಆರೋಗ್ಯ ಅಧಿಕಾರಿಯ ಬಳಿ ತಹಶೀಲ್ದಾರರು ಅವರ ಇಲಾಖೆ ವತಿಯಿಂದ ಪೂರ್ವ ತಯಾರಿಯ ಕುರಿತು ಮಾಹಿತಿ ಕೇಳಿದಾಗ ಆರೋಗ್ಯ ಇಲಾಖೆ ವತಿಯಿಂದ ತುರ್ತು ಪರಿಸ್ಥಿತಿಗೆ ನಾವೆಲ್ಲರೂ ಸಿದ್ದರಾಗಿದ್ದೇವೆ. ಔಷಧಿ ಮುಂತಾದ ವ್ಯವಸ್ಥೆಗಳು ಯಾವುದೇ ಸಮಸ್ಯೆಗಳಿಲ್ಲದೆ ಲಭಿಸುತ್ತದೆ ಎಂದು ಹೇಳಿದರು.


ಈ ವೇಳೆ ಪ್ರಶ್ನಿಸಿದ ವೆಂಕಪ್ಪ ಗೌಡರು ಸುಳ್ಯ ಆಸ್ಪತ್ರೆಯಲ್ಲಿ ಔಷಧಿಗಳನ್ನು ಕೊಡದೆ ಖಾಸಗಿ ಮೆಡಿಕಲ್ ಅಂಗಡಿಗಳಿಗೆ ಜನರನ್ನು ಕಳುಹಿಸುತ್ತಿರುವ ಆರೋಪಗಳು ಕೇಳಿ ಬರುತ್ತಿದೆ. ನನಗೆ ಗೊತ್ತಿರುವ ಹಾಗೆ ಸುಳ್ಯ ಸರ್ಕಾರಿ ಆಸ್ಪತ್ರೆಯಿಂದ ಓರ್ವ ಬಡ ರೋಗಿಯನ್ನು ಮಾತ್ರೆಗಾಗಿ ಅವರ ಭಾಗದ ಮೆಡಿಕಲ್ ಗೆ ಬರೆದು ಕೊಟ್ಟಿದ್ದು ಆತ ಹಣವಿಲ್ಲದೆ ತನ್ನ ಸಮಸ್ಯೆಯನ್ನು ನನ್ನ ಬಳಿ ಹೇಳಿಕೊಂಡಾಗ ಆ ಮಾತ್ರೆಯ ಚೀಟಿಯನ್ನು ನನ್ನ ಮೊಬೈಲಿನಲ್ಲಿ ಫೋಟೋ ತೆಗೆದು ಇಟ್ಟಿದ್ದು ಇದು ಯಾವ ವೈದ್ಯರು ಕೊಟ್ಟದ್ದು ಎಂದು ಅವರ ಬಳಿ ಪ್ರಶ್ನಿಸಿದರಯ. ಅಲ್ಲದೆ ಮಾತ್ರೆಯ ಚೀಟಿಯ ಫೋಟೋವನ್ನು ತಹಶೀಲ್ದಾರರಿಗೆ ತೋರಿಸಿದರು.
ಈ ವೇಳೆ ತಹಶೀಲ್ದಾರರು ಆರೋಗ್ಯ ಅಧಿಕಾರಿಯ ಬಳಿ ಮಾತನಾಡಿ ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಯಾವುದೇ ರೀತಿಯ ತೊಂದರೆಗಳು ಉಂಟಾಗಬಾರದೆಂದು ಹೇಳಿದರು.


ಹಳೆಗೇಟು ವಾರ್ಡ್ ಸದಸ್ಯ ಬುದ್ಧ ನ್ಯಾಕ್ ತಮ್ಮ ವಾರ್ಡಿನ ಚರಂಡಿ ಮತ್ತು ಅಪಾಯಕಾರಿ ಮರಗಳ ಬಗ್ಗೆ ವಿವರಗಳನ್ನು ನೀಡಿ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೇಳಿಕೊಂಡರು.

ಮಳೆಗಾಲದ ಸಂದರ್ಭದಲ್ಲಿ ಜಾನುವಾರುಗಳಿಗೆ ಯಾವುದೇ ರೀತಿಯ ಕಾಯಿಲೆಗಳು ಅಥವಾ ಸಮಸ್ಯೆಗಳು ಬಾರದಂತೆ ಪಶುಸಂಗೋಪನ ಇಲಾಖೆಯವರು ಗಮನಹರಿಸುವಂತೆ ತಿಳಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಸ್ಥಳೀಯ ಮುಖಂಡರಾದ ವಿಲಿಯಂ ಲಸ್ರಾದೋ ಈ ಸಂದರ್ಭದಲ್ಲಿ ಸುಳ್ಯ ನಗರ ಪರಿಸರದಲ್ಲಿರುವ ಅಪಾಯಕಾರಿ ಮರಗಳ ಬಗ್ಗೆ, ಅವ್ಯವಸ್ಥೆ ಚರಂಡಿಗಳ ಬಗ್ಗೆ ಮಾಹಿತಿಯನ್ನು ನೀಡಿ ಸಮಸ್ಯೆಗಳನ್ನು ಬಗೆಹರಿಸಲು ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ಸಮಸ್ಯೆಗಳನ್ನು ತಿಳಿದುಕೊಳ್ಳಲು ಬಂದಂತಹ ಅಧಿಕಾರಿಯೇ ತಮ್ಮ ಕಚೇರಿ ಮತ್ತು ವಾಸ ಸ್ಥಳದಲ್ಲಿ ಕೊಳಚೆ ನೀರಿನಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ತಮ್ಮದೇ ಸಮಸ್ಯೆಗಳನ್ನು ಹೇಳಿ ಸಭೆಯಲ್ಲಿ ಗಮನ ಸೆಳೆದರು. ವಲಯ ಅರಣ್ಯ ಅಧಿಕಾರಿ ಮಂಜುನಾಥ್ ರವರು ಮಾತನಾಡಿ ನಮ್ಮ ಕಚೇರಿ ಮತ್ತು ನಮ್ಮ ಕ್ವಾಟ್ರಸ್ ಬಳಿ ಕೊಳಚೆ ನೀರು ಬರುತ್ತಿದ್ದು ಪರಿಸರ ದುರ್ನಾತ ಮತ್ತು ಸೊಳ್ಳೆಗಳಿಂದ ತುಂಬಿ ಕೂರಲು ಸಾಧ್ಯವಾಗುತ್ತಿಲ್ಲ. ನಗರ ಪಂಚಾಯತಿಯವರು ಕೂಡಲೇ ಇತ್ತ ಗಮನಹರಿಸಿ ಸರಿಪಡಿಸಿಕೊಡಬೇಕೆಂದು ಕೇಳಿಕೊಂಡರು.

ನಗರದಲ್ಲಿ ಕಸದ ಬಗ್ಗೆ ವಿನಯಕುಮಾರ್ ಕಂದಡ್ಕ ರವರು ಮಾತನಾಡಿ ನಗರ ಪ್ರದೇಶದಲ್ಲಿ ಸ್ಥಳೀಯ ಕೆಲವು ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಕಸಗಳನ್ನು ಎಲ್ಲೆಂದರೆ ಅಲ್ಲಿ ಬಿಸಾಕುತ್ತಿದ್ದು ಇದರಿಂದ ಪರಿಸರ ಹಾಳಾಗಲು ಕಾರಣವಾಗುತ್ತಿದೆ. ನಮ್ಮ ಕಚೇರಿಯಲ್ಲಿ ಹೆಲ್ತ್ ಆಫೀಸರ್ ಇಲ್ಲದ ಕಾರಣ ಈ ಸಮಸ್ಯೆ ಆಗುತ್ತಿದ್ದು ಇದಕ್ಕಾಗಿ ಕಚೇರಿಯಿಂದ ಮೂವರು ಸಿಬ್ಬಂದಿಗಳನ್ನು ನೇಮಿಸಿ ಈ ರೀತಿ ಕಸಗಳನ್ನು ಎಸೆಯುವವರಿಗೆ ಫೈನ್ ಹಾಕುವ ಮೂಲಕ ಇವುಗಳನ್ನು ತಡೆಗಟ್ಟುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.


ಇವರ ಮಾತಿಗೆ ಒಪ್ಪಿಗೆ ನೀಡಿದ ತಹಶೀಲ್ದಾರರು ಈ ರೀತಿಯ ವ್ಯವಸ್ಥೆಗಳನ್ನು ಮಾಡಲು ಸಾಧ್ಯವಾದರೆ ಅದರ ಬಗ್ಗೆ ಚಿಂತಿಸೋಣ ಎಂದು ಸ್ಪಂದನೆ ನೀಡಿದರು.

ಉಳಿದಂತೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸದಸ್ಯರುಗಳು ತಮ್ಮ ತಮ್ಮ ವಾರ್ಡುಗಳ ಸಮಸ್ಯೆಗಳನ್ನು ಮಾಹಿತಿಗಳನ್ನು ಸಭೆಯಲ್ಲಿ ತಿಳಿಸಿದರು.

ಇವೆಲ್ಲದಕ್ಕೂ ಹೆಚ್ಚಾಗಿ ಇಲಾಖೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕೊರತೆ ಇರುವ ಕಾರಣ ಸಮಸ್ಯೆಗಳು ಉದ್ಭವಿಸುತ್ತಿದೆ ಎಂದು ತಹಶೀಲ್ದಾರ್ ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ ಪ್ರಾಕೃತಿಕ ವಿಕೋಪ ಗಳಂತಹ ಸಮಸ್ಯೆಗಳ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಕಾರ್ಯಗಳನ್ನು ಮಾಡಲು ಸಲಹೆ ಸೂಚನೆಯನ್ನು ನೀಡಿದರು.

ಜೂನ್ 9ರಂದು ನಡೆಯಬೇಕಾಗಿದ್ದ ಪ್ರಾಕೃತಿಕ ವಿಕೋಪದ ಮುಂಜಾಗ್ರತಾ ಸಭೆ ನಗರ ಪಂಚಾಯತ್ ಸದಸ್ಯರುಗಳಿಗೆ ಮಾಹಿತಿ ನೀಡದೆ ಮಾಡಿದ ಆರೋಪದಡಿ ಮುಂದೂಡಲ್ಪಟ್ಟು ಸಭೆ ಇಂದು ನಡೆದು ವಿವಿಧ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ವೇದಿಕೆಯಾಗಿ ಮಾರ್ಪಟ್ಟಿತು.

ಸಭೆಯಲ್ಲಿ ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್, ಸುಳ್ಯ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ ಹರಿಶ್ಚಂದ್ರ,ಸಿಬ್ಬಂದಿ ಕಲ್ಲಪ್ಪ, ಸುಳ್ಯ ಸರಕಾರಿ ಆಸ್ಪತ್ರೆಯ ಕಚೇರಿ ಮುಖ್ಯಸ್ಥರು, ಸಾಮಾಜಿಕ ಕಾರ್ಯಕರ್ತ ಡಿಎಂ ಶಾರಿಕ್,ನಗರ ಪಂಚಾಯತ್ ಸದಸ್ಯರುಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.