ಸ್ಥಳದಲ್ಲಿ ಸೂಕ್ತ ಬಂದೋಬಸ್ತ್‌ಗೆ ಸೂಚನೆ
ಅಜ್ಜಾವರದ ಮೇನಾಲದಲ್ಲಿ ವರ್ಷಂಪ್ರತಿ ನಡೆಯುತ್ತಿರುವ ಉರೂಸ್ ಕಾರ್ಯಕ್ರಮ ಈ ಬಾರಿಯೂ ನಡೆಯುತ್ತಿದ್ದು, ಈ ಹಿಂದೆ ಪರಿಸರದಲ್ಲಿ ಉಂಟಾದ ಕೆಲವು ವಿವಾದದ ಹಿನ್ನಲೆಯಲ್ಲಿ ಈ ಬಾರಿಯ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ಉಂಟಾಗದಂತೆ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ. ಅವರು ಇಂದು ಮೇನಾಲ ದರ್ಗಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು ಇಲ್ಲಿ ನಡೆಯುವ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಲು ಇಲಾಖೆಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಮತ್ತು ಕಾರ್ಯಕ್ರಮ ನಡೆಯುವ ಈ ಜಾಗದ ಯಥಾಸ್ಥಿತಿಗೆ ಯಾವುದೇ ಧಕ್ಕೆ ಬಾರದಂತೆ ಕಾರ್ಯಕ್ರಮಗಳು ನಡೆಯಬೇಕು. ಮತ್ತು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯ ಇಂದಿನಿಂದಲೇ ಆಗಬೇಕು ಎಂದು ಆದೇಶ ನೀಡಿದರು.
ಈ ಸಂದರ್ಭದಲ್ಲಿ ಅಡಿಷನಲ್ ಎಸ್ ಪಿ ಎನ್ ಎನ್ ಧರ್ಮಪ್ಪ, ಪುತ್ತೂರು ವಿಭಾಗದ ಡಿವೈಎಸ್ಪಿ ಡಾ.ಪಿ ಗಾನಾ ಕುಮಾರ್, ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ಉಪಸ್ಥಿತರಿದ್ದರು.
ಕೆ ಎಸ್ ಆರ್ ಪಿ ತುಕಡಿಯ ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಬಂದೋಬಸ್ತ್ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಮೇನಾಲ ದರ್ಗಾ ಪರಿಸರದ ಕೆಲವು ಸ್ಥಳಗಳು ಕಳೆದ ಕೆಲವು ವರ್ಷಗಳಿಂದ ವಿವಾದದ ಕೇಂದ್ರವಾಗಿದ್ದು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ.
ಈ ಕಾರಣದಿಂದ ಈ ಬಾರಿಯ ಊರೂಸ್ ಕಾರ್ಯಕ್ರಮ ತಡವಾಗಿ ನಡೆಯುತ್ತಿದ್ದು ಇದೀಗ ಜಿಲ್ಲಾಧಿಕಾರಿಯವರ ಅನುಮತಿ ಮೇರೆಗೆ ಕಾರ್ಯಕ್ರಮದ ತಯಾರಿಯನ್ನು ನಡೆಸಲಾಗಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ದೃಷ್ಟಿಯಿಂದ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಅನ್ನು ಏರ್ಪಡಿಸಿದೆ.