ಸುಳ್ಯದ ಪರಾಜಿತ ಅಭ್ಯರ್ಥಿ ಜಿಗಣಿ ಕೃಷ್ಣಪ್ಪರವರು ಸೋಲಿನ ಹೊಣೆಯನ್ನು ಕಾರ್ಯಕರ್ತರ ಮೇಲೆ ಹೇರಲು ಯತ್ನಿಸುತ್ತಿದ್ದಾರೆ. ಟಿಕೆಟ್ ಆಕಾಂಕ್ಷಿ ಯಾಗಿದ್ದ ನಂದಕುಮಾರ್ ರವರೊಂದಿಗೆ ಗುರುತಿಸಿಕೊಂಡವರ ನಾಯಕರ, ಕಾರ್ಯಕರ್ತರ ಮೇಲೆ ದ್ವೇಷ ಸಾಧಿಸಲು ಹೊರಟಿದ್ದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮುಖಾಂತರ ಅಮಾನತು ಆದೇಶ ಹೊರಡಿಸಿ ಕಾರ್ಯಕರ್ತರು ಮತ್ತು ನಾಯಕರ ಮೇಲೆ ಸೇಡು ತೀರಿಸಲು ಮುಂದಾಗಿದ್ದಾರೆ. ಅಲ್ಲದೆ ಇದೀಗ ಪೊಲೀಸ್ ದೂರಿನ ಮುಖಾಂತರ ನಮ್ಮ ವರ್ಚಸ್ಸು ಕುಗ್ಗಿಸುವ ತಂತ್ರ ಮಾಡುತ್ತಿದ್ದಾರೆ. ಜಿಗಣಿಯಿಂದ ಬಂದು ಇಲ್ಲಿಯ ಕಾರ್ಯಕರ್ತರ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ಸುಳ್ಯದ ಕಾರ್ಯಕರ್ತರ ಸ್ವಾಭಿಮಾನಕ್ಕೆ ದಕ್ಕೆ ತಂದರೆ ಮುಂದೆ ಪರಿಣಾಮ ಎದುರಿಸಬೇಕಾಗಬಹುದು ಎಂದು ಉಚ್ಚಾಟಿತ ಕಾಂಗ್ರೆಸ್ ಮುಖಂಡ ಭವಾನಿಶಂಕರ ಕಲ್ಮಡ್ಕ ಎಚ್ಚರಿಕೆ ನೀಡಿದ್ದಾರೆ.
ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ನಂದಕುಮಾರ್ ರವರಿಗೆ ಬಿ ಫಾರಂ ತಪ್ಪಿದ ನಂತರ ಕಾಂಗ್ರೆಸ್ ಪಕ್ಷದ ವರಿಷ್ಟರ ಸೂಚನೆ ಮೇರೆಗೆ ಪಕ್ಷದ ಗೆಲುವಿಗಾಗಿ ಕೆಲಸ ನಿರ್ವಹಿಸಿ ನಮ್ಮ ನಮ್ಮ ಬೂತ್ ನಲ್ಲಿ ಲೀಡ್ ತಂದು ಕೊಟ್ಟಿದ್ದೇವೆ.
ಈಗ ಕೃಷ್ಣಪ್ಪರವರು ಭಾರಿ ಅಂತರದಿಂದ ಸೋತು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.
ಪೊಲೀಸ್ ದೂರು ಕೊಟ್ಟು ಕಿರುಕುಳ ಕೊಡಲು ಮುಂದಾಗಿದ್ದಾರೆ. ನಮ್ಮೊಂದಿಗೆ ಸಾವಿರಾರು ಸ್ವಾಭಿಮಾನಿ ಕಾರ್ಯಕರ್ತರಿದ್ದಾರೆ. ಇವರ ಕುತಂತ್ರ ಯಾವುದೇ ಕಾರಣಕ್ಕೂ ಪಲಿಸುವುದಿಲ್ಲ. ನಮ್ಮ ಪಕ್ಷದ ಹೈಕಮಾಂಡ್ ನಾಯಕರಿಗೆ ಇವರ ಬಗ್ಗೆ ದೂರು ನೀಡಲಾಗುವುದು ಎಂದು ಭವಾನಿಶಂಕರ ಹೇಳಿಕೆಯಲ್ಲಿ ತಿಳಿಸಿದ್ದಾರೆ.