ಶಾಂತಿನಗರ ಕ್ರೀಡಾಂಗಣಕ್ಕೆ ಶಾಸಕಿ ಭಾಗೀರಥಿ ಹಾಗೂ ಎ.ಸಿ.ಗಿರೀಶ್ ನಂದನ್ ಭೇಟಿ

0

ಮೇಲ್ಭಾಗದ ಮಣ್ಣು ಕುಸಿಯದಂತೆ ತಡೆಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ

ಸುಳ್ಯದ ಶಾಂತಿನಗರದಲ್ಲಿ ಕಾಮಗಾರಿ ನಡೆಯುತ್ತಿರುವ ತಾಲೂಕು ಕ್ರೀಡಾಂಗಣಕ್ಕೆ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಪುತ್ತೂರು ವಿಭಾಗದ ಸಹಾಯಕ ಕಮಿಷನರ್ ಗಿರೀಶ್ ನಂದನ್ ರವರು ಜೂ.೧೯ ರಂದು ಭೇಟಿ ನೀಡಿ ಕಾಮಗಾರಿಯ ವೀಕ್ಷಣೆ ಮಾಡಿ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಹಾಗೂ ಅಧಿಕಾರಿಗಳು,ಹಾಗೂ ಬಿಜೆಪಿ ಪಕ್ಷದ ಮುಖಂಡರುಗಳು ಶಾಸಕರ ಜೊತೆಯಲ್ಲಿದ್ದರು.

ಕಾಮಗಾರಿಯನ್ನು ವೀಕ್ಷಿಸಿದ ಶಾಸಕರು ಕ್ರೀಡಾಂಗಣದ ಒಂದು ಭಾಗದಲ್ಲಿ ಹಾಕಿರುವ ಮಣ್ಣಿನಿಂದ ಸ್ಥಳೀಯ ಜನತೆ ಆತಂಕದಲ್ಲಿದ್ದು ಮಳೆಗಾಲದಲ್ಲಿ ಮಣ್ಣು ಕುಸಿಯುವ ಭಯವನ್ನು ಅವರು ವ್ಯಕ್ತಪಡಿಸುತ್ತಿದ್ದು ಕೂಡಲೇ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಶಾಸಕರು ನಿರ್ಮಿತಿ ಕೇಂದ್ರದ ಇಂಜಿನಿಯರ್‌ಗೆ ನಿರ್ದೇಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ಇಂಜಿನಿಯರ್ ಹರೀಶ್ ಶಾಸಕರ ಬಳಿ ಮಾತನಾಡಿ ಈಗಾಗಲೇ ಇರುವ ತಡೆಗೋಡೆಯನ್ನು ಬಲಪಡಿಸಿ, ಅದನ್ನು ಎತ್ತರಿಸಿ ಅಂದಾಜು ಸುಮಾರು ೧೦ ಲಕ್ಷ ರೂ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಬಹುದು ಎಂದು ಹೇಳಿದ್ದು, ಇದಕ್ಕೆ ಶಾಸಕರು ಒಪ್ಪಿಗೆ ಸೂಚಿಸಿ ಆದಷ್ಟು ಶೀಘ್ರದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಿ ಕೂಡಲೇ ಕಾಮಗಾರಿ ಆರಂಭಿಸುವಂತೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.


ಅಲ್ಲದೆ ನಿರ್ಮಿತಿ ಕೇಂದ್ರ ನಡೆಸುವ ಕಾಮಗಾರಿಯಲ್ಲಿ ಹೆಚ್ಚುವರಿ ಅನುದಾನ ಇದ್ದರೆ ಬಳಸಿ ತಡೆಗೋಡೆಯನ್ನು ನಿರ್ಮಾಣ ಮಾಡಿ ಇಲ್ಲದಿದ್ದರೆ ಇತರ ಯಾವುದಾದರೂ ಅನುದಾನವನ್ನು ಒದಗಿಸಲು ಜಿಲ್ಲಾಧಿಕಾರಿಗಳಲ್ಲಿ ಮಾತನಾಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರೆಂದು ತಿಳಿದು ಬಂದಿದೆ
.

ಈ ವೇಳೆ ಸ್ಥಳದಲ್ಲಿ ಉಪಸ್ಥಿತರಿದ್ದ ಸ್ಥಳೀಯರು ಶಾಸಕರೊಂದಿಗೆ ಮಾತನಾಡಿ ಮಣ್ಣು ಹಾಕಿದ ಕಾರಣ ತಮಗೆ ಉಂಟಾಗಿರುವ ಆತಂಕವನ್ನು ಶಾಸಕರಿಗೆ ವಿವರಿಸಿದ್ದು ಶಾಸಕರು ಸ್ಥಳೀಯರಿಗೆ ಧೈರ್ಯವನ್ನು ತುಂಬಿ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಇಲ್ಲಿ ಕಾಮಗಾರಿ ನಡೆಸುವ ಬಗ್ಗೆ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ, ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್, ವಿಎ ತಿಪ್ಪೇಶ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ವಿನಯಕುಮಾರ್ ಕಂದಡ್ಕ, ಬುದ್ಧ ನಾಯ್ಕ್, ಮಹೇಶ್ ಕುಮಾರ್ ಮೇನಾಲ, ಸ್ಥಳೀಯರಾದ ಡಾ.ಸುಂದರ್ ಕೇನಾಜೆ, ಗೌರಿಶಂಕರ, ನವನೀತ್ ಬೆಟ್ಟಂಪಾಡಿ, ಪೂಜಾ ಬೆಟ್ಟಂಪಾಡಿ ಮತ್ತಿತರರು ಉಪಸ್ಥಿತರಿದ್ದರು.