ಬೆಂಗಳೂರಿನ ಯುವಕರು ಪ್ರವಾಸ ಮುಗಿಸಿ ಹಿಂತಿರುಗುವ ವೇಳೆ ಘಟನೆ
ಕಂಟೈನರ್ ಚಾಲಕನ ಮೇಲೆ ದೂರು
ದೇವರ ಕೊಲ್ಲಿ ಕಾರು ಮತ್ತು ಕಂಟೇನರ್ ನಡುವೆ ಡಿಕ್ಕಿ ಸಂಭವಿಸಿ ಮೃತಪಟ್ಟ ಯುವಕ ಬೆಂಗಳೂರು ಮೂಲದ ರಾಮಮೂರ್ತಿ ನಗರ ನಿವಾಸಿ ಮುನಿರಾಜ್ ರವರ ಪುತ್ರ ರವಿಕಿರಣ್ ಎಂ.ಎಂದು ತಿಳಿದು ಬಂದಿದೆ. ಆತನಿಗೆ 26 ವರ್ಷ ಪ್ರಾಯವಿದ್ದು ಕಳೆದ ಮೂರು ದಿನಗಳ ಹಿಂದೆ ತಮ್ಮ ಸ್ನೇಹಿತರಾದ ಬೆಂಗಳೂರು ಮೂಲದ ನಿವಾಸಿಗಳು ಜಗದೀಶ್, ನಿತಿನ್, ಚಂದ್ರಶೇಖರ, ಹರ್ಷ, ಎಂಬುವರೊಂದಿಗೆ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯಕ್ಕೆ ಪ್ರವಾಸಕ್ಕೆಂದು ಬಂದಿದ್ದರು ಎನ್ನಲಾಗಿದೆ.
ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯದ ಯಾತ್ರೆ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಸಂದರ್ಭ ಜೂ.21ರಂದು ರಾತ್ರಿ 8.30ರ ಸಮಯಕ್ಕೆ ದೇವರ ಕೊಲ್ಲಿ ಬಳಿ ಹೋಗುತ್ತಿದಂತೆ ಕೊಡಗು ಜಿಲ್ಲೆಯ ಕುಶಾಲನಗರದಿಂದ ಕಾಫಿ ಬೀಜ ತುಂಬಿಸಿಕೊಂಡು ಬರುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಸಂಭವಿಸಿದೆ.
ಘಟನೆಯಿಂದ ರವಿಯವರ ತಲೆ ಮತ್ತು ಎದೆಯ ಭಾಗಕ್ಕೆ ತೀವ್ರತರದ ಪೆಟ್ಟು ಉಂಟಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಹರ್ಷ ಎಂಬುವರಿಗೂ ತೀವ್ರತರದ ಗಾಯವಾಗಿದ್ದು ಸುಳ್ಯದಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ಅವರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕಾರಿನಲ್ಲಿದ್ದ ಜಗದೀಶ್ ,ನಿತಿನ್ ,ಚಂದ್ರಶೇಖರ್ ರವರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಂಟೇನರ್ ಚಾಲಕ ಈಶ್ವರ್ ಎಂಬುವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತ ರವಿ ಬೆಂಗಳೂರು ಶಾಂತಿ ಲೇಔಟಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರು ತಂದೆ ಮುನಿರಾಜು, ತಾಯಿ ಶಾಂತ, ಹಾಗೂ ಸಹೋದರರಾದ ಹರೀಶ್, ಶ್ರೀಧರ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಈ ಘಟನೆಯ ಬಗ್ಗೆ ಕಾರಿನಲ್ಲಿದ್ದ ಚಂದ್ರಶೇಖರ್ ಎಂಬವರು ಲಾರಿ ಚಾಲಕ ಈಶ್ವರ ಅವರ ಮೇಲೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆಯ ಉಪನಿರೀಕ್ಷಕ ಶ್ರೀನಿವಾಸಲು, ಎಎಸ್ಐ ಶ್ರೀನಿವಾಸ್ ,ಸಿಬ್ಬಂದಿ ಜಯಣ್ಣ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿರುವ ಮೃತದೇಹದ ತಪಾಸಣೆ ನಡೆಸಿ ಮೃತರ ತಂದೆ ಮುನಿರಾಜುರವರಿಗೆ ಮೃತದೇಹ ಹಸ್ತಾಂತರಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಇರಿಸಲಾಗಿದೆ.