ತಾಲೂಕಿನ ಪ್ರತೀ ಅಂಗನವಾಡಿಗಳಿಗೂ ಅಗ್ನಿಶಾಮಕ ಉಪಕರಣ ಕಡ್ಡಾಯ

0


ತಾ.ಪಂ. ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಸೂಚನೆ

ಅಗ್ನಿ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಅಗ್ನಿಶಾಮಕ ಉಪಕರಣಗಳು ಕಡ್ಡಾಯವಾಗಿದ್ದು ತಾಲೂಕಿನ ಪ್ರತೀ ಅಂಗನವಾಡಿಗಳಿಗೂ ಅಳವಡಿಸಿ ಎಂದು ಸುಳ್ಯ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಆಬಿದ್ ಗದ್ಯಾಲ್ ಸೂಚನೆ ನೀಡಿದ್ದಾರೆ.
ಜೂ.೨೨ರಂದು ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ಆಬಿದ್ ಗದ್ಯಾಲ್‌ರ ಅಧ್ಯಕ್ಷತೆಯಲ್ಲಿ ನಡೆಯಿತು.

ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್, ತಹಶೀಲ್ದಾರ್ ಮಂಜುನಾಥ್ ಹಾಗೂ ಇಲಾಖಾಧಿಕಾರಿಗಳು ಸಭೆಯಲ್ಲಿದ್ದರು.


ಕಳೆದ ಸಾಮಾನ್ಯ ಸಭೆಯ ಪಾಲನಾ ವರದಿ ಪರಿಶೀಲಿಸುವ ಸಂದರ್ಭದಲ್ಲಿ ಅಗ್ನಿ ಅವಘಡ ತಡೆಯಲು ಅಗ್ನಿಶಾಮಕ ಉಪಕರಣಗಳನ್ನು ಕಚೇರಿಯಲ್ಲಿ ಅಳವಡಿಸುವ ಕುರಿತು ಪ್ರಸ್ತಾಪವಾದಾಗ ಸಿ.ಡಿ.ಪಿ.ಒ. ಶೈಲಜಾರವರು ತಾಲೂಕಿನ ಅಂಗನವಾಡಿಗಳಲ್ಲಿ ಈ ವ್ಯವಸ್ಥೆ ಇಲ್ಲದಿರುವ ಮಾಹಿತಿ ನೀಡಿದರು. ಆಗ ಆಡಳಿತಾಧಿಕಾರಿಗಳು ಸಣ್ಣ ಮಕ್ಕಳು ಇರುವಲ್ಲಿ ಈ ವ್ಯವಸ್ಥೆ ಅತ್ಯಗತ್ಯ. ಅಲ್ಲಿ ಆಹಾರ ಬೇಯಿಸಲಾಗುತ್ತದೆ. ನಾವು ಆದಷ್ಟು ಜಾಗರೂಕತೆಯಿಂದ ಇರಬೇಕಲ್ಲವೇ. ಆದ್ದರಿಂದ ಪ್ರತೀ ಅಂಗನವಾಡಿಯಲ್ಲಿ ಆದ್ಯತೆಯಲ್ಲಿ ಅಗ್ನಿಶಾಮಕ ಉಪಕರಣ ಅಳವಡಿಸಬೇಕು ಎಂದು ಸೂಚನೆ ನೀಡಿದ ಅವರು ಕೆಟಿಪಿಪಿ ನಿಯಮಾನುಸಾರ ಖರೀದಿಸಿ ಅಳವಡಿಸಬೇಕು ಎಂದು ಹೇಳಿದರು.


ಜೀವಹಾನಿ ಸಂಭವಿಸಬಾರದು
ಮಳೆ ಸಂದರ್ಭದಲ್ಲಿ ಎಲ್ಲ ಅಧಿಕಾರಿಗಳೂ ಜಾಗೃತರಾಗಿ ಕಾರ್ಯ ನಿರ್ವಹಿಸಬೇಕು. v ಪ್ರಾಕರತಿಕ ವಿಕೋಪದಿಂದಾಗಿ ಒಂದೂ ಕೂಡಾ ಜೀವ ಹಾನಿ ಸಂಭವಿಸಬಾರದು. ಆ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಆಡಳಿತಾಧಿಕಾರಿಗಳು ಸೂಚನೆ ನೀಡಿದರು. 'ಈಗಾಗಲೇ ನೋಡೆಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿಯೂ ಸಭೆ ಮಾಡಲಾಗಿದೆ ಇತ್ಯಾದಿಗಳ ಕುರಿತು ಇ.ಒ. ಹಾಗೂ ತಹಶೀಲ್ದಾರ್ ಮಾಹಿತಿ ನೀಡಿದರು.

ಹೊರಗುತ್ತಿಗೆ ಕೆಲಸ ಸಂಬಳ ಆಗುವಂತೆ ನೋಡಿಕೊಳ್ಳಿ ತಾಲೂಕಿನ ಸರಕಾರಿ ಕಚೇರಿಗಳ ಸಿಬ್ಬಂದಿಗಳ ವಿವರ ಪಡೆದ ಆಡಳಿತಾಧಿಕಾರಿಗಳು ಹೊರ ಗುತ್ತಿಗೆ ನೌಕರರ ಬಗ್ಗೆಯೂ ಕಾಳಜಿ ವಹಿಸಿ ಮಾತನಾಡಿದರು. ಪ್ರತೀ ಇಲಾಖೆಯಲ್ಲಿಯೂ ಹೊರ ಗುತ್ತಿಗೆ ನೌಕರರಿದ್ದಾರೆ. ಅವರಿಗೆ ಸರಿಯಾಗಿ ಸಂಬಳ ಬರುತ್ತದೆಯೊ ಎಂದು ವಿಚಾರಿಸಿಕೊಳ್ಳಬೇಕು. ಇದು ಆಯಾ ಇಲಾಖೆಯ ಅಧಿಕಾರಿಗಳ ಜವಾಬ್ದಾರಿ ಎಂದು ಆಡಳಿತಾಧಿಕಾರಿ ಆಬಿದ್ ಗದ್ಯಾಲ್ ಹೇಳಿದರು. ತಾಲೂಕಿಗೆ ಮಂಜೂರುಗೊಂಡಿರುವ ವಿವೇಕಾ ಯೋಜನೆಯ ಕುರಿತು ಮಾಹಿತಿ ಕೇಳಿದಾಗ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಉತ್ತರಿಸಿ ೨೯ ಕೊಠಡಿಗಳು ಮಂಜೂರುಗೊಂಡಿದೆ. ಅದರಲ್ಲಿ ೨೮ ಪ್ರಗತಿಯಲ್ಲಿದೆ ಎಂದು ವಿವರ ನೀಡಿದರು.‘ಮುಂದೆ ತಾ.ಪಂ., ಜಿ.ಪಂ. ಹಾಗೂ ಲೋಕಸಭಾ ಚುನಾವಣೆ ಬರಲಿದ್ದು, ಬೂತ್‌ಗಳನ್ನು ಮಾಡುವಾಗ ಹೊಸಕೊಠಡಿಗಳನ್ನೇ ಬಳಸಿಕೊಂಡು ಮಾಡಬೇಕು ಎಂದು ಎಂದು ಅವರು ಸೂಚನೆ ನೀಡಿದರು.